ಶಾಸಕ ಗೌರಿಶಂಕರ್ ರಿಂದ ತುಮಕೂರು ಗ್ರಾಮಾಂತರದಲ್ಲಿ ಪ್ರತಿ ಸೋಮವಾರ ಜನತಾ ದರ್ಶನ

ತುಮಕೂರು: ಗ್ರಾಮಾಂತರ ಕ್ಷೇತ್ರ ಶಾಸಕ ಡಿ.ಸಿ.ಗೌರಿಶಂಕರ್ ಅವರು ಮಾರ್ಚ್ ತಿಂಗಳಿನಿಂದ ಪ್ರತಿ ಸೋಮವಾರ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ತಹಸಿಲ್ದಾರ್ ಕಚೇರಿಯ ಆವರಣದಲ್ಲಿ ಜನತಾದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಸಾರ್ವಜನಿಕರ ಸಮಸ್ಯೆಗೆ ಸ್ಥಳದಲ್ಲಿಯೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಜನತಾದರ್ಶನವನ್ನು ಪುನರಾಂಭಿಸಲು ಮುಂದಾಗಿದ್ದು, ಸಾರ್ವಜನಿಕರು ಜನತಾ ದರ್ಶನದ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ಜನತಾ ದರ್ಶನಕ್ಕೆ ಹೆಚ್‌ಡಿಕೆ ಪ್ರೇರಣೆ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರಾರಂಭಿಸಿದ್ದ ಜನತಾ ದರ್ಶನದಿಂದ ಸಾರ್ವಜನಿಕರಿಗೆ ಆಗುತ್ತಿದ್ದ ಪ್ರಯೋಜನವನ್ನು ಅರಿತಿದ್ದ, ಶಾಸಕ ಡಿ.ಸಿ.ಗೌರಿಶಂಕರ್ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿಯೂ ಜನತಾ ದರ್ಶನವನ್ನು ಪ್ರಾರಂಭಿಸಿದ್ದರು.

ಶಾಸಕರಾಗಿ ಆಯ್ಕೆಯಾದ ನಂತರ ಪ್ರಾರಂಭಿಸಿದ ಜನತಾದರ್ಶನಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು, ಪ್ರತಿ ವಾರದ ದರ್ಶನದಲ್ಲಿ ಆಲಿಸಿದ ಜನರ ಸಮಸ್ಯೆಗಳಿಗೆ ಇನ್ನೊಂದು ಜನತಾ ದರ್ಶನದೊಳಗೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು, ಅದರಂತೆಯೇ ಪ್ರತಿ ಜನತಾ ದರ್ಶನದಲ್ಲಿ ಸಾವಿರಾರು ಸಾರ್ವಜನಿಕರು ಜನತಾ ದರ್ಶನದ ಪ್ರಯೋಜನವನ್ನು ಪಡೆದುಕೊಂಡಿದ್ದರು.

ಸಮ್ಮಿಶ್ರ ಸರ್ಕಾರ ಪತನವಾದ ನಂತರ ನಾಳೆಯಿಂದ ಪ್ರತಿ ಸೋಮವಾರ ಜನತಾ ದರ್ಶನ ಕಾರ್ಯಕ್ರಮವನ್ನು ಶಾಸಕರ ನೇತೃತ್ವದಲ್ಲಿ ಏರ್ಪಡಿಸಲಾಗಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿದ್ದು, ಕೋವಿಡ್-19 ನಿಯಮಾವಳಿಯನ್ನು ಅನುಸರಿಸಿ ಜನತಾ ದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ತಾಲ್ಲೂಕು ಜೆಡಿಎಸ್ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.

ಸಾರ್ವಜನಿಕರು ತಮ್ಮ ಪಿಂಚಣಿ, ರೇಷನ್ ಕಾರ್ಡ್, ಖಾತೆ ತಿದ್ದುಪಡಿ ಸೇರಿದಂತೆ ವಿವಿಧ ಇಲಾಖೆಗಳ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಬಹುದಾಗಿದೆ. ತಾಲ್ಲೂಕಿನಿಂದ ಆಗಮಿಸುವ ಎಲ್ಲ ಸಾರ್ವಜನಿಕರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗುವುದು ಅದರೊಂದಿಗೆ ವಿವಿಧ ತಾಲ್ಲೂಕುಗಳಿಂದ ಕಾರ್ಯನಿಮಿತ್ತ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸುವ ಎಲ್ಲರಿಗೂ ಊಟ ಸೌಲಭ್ಯ ದೊರಕಿಸಲಾಗುವುದು ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!