ತುಮಕೂರು : ಕೃಷಿ ಭೂಮಿಗೆ ವಿವಿಧ ನೀರಾವರಿ ಯೋಜನೆಗಳಿಂದ ನೀರು ಬಳಸುವ ರೈತರಿಗೆ ಮರಣ ಶಾಸನವಾಗಲಿರುವ ಕರ್ನಾಟಕ ನೀರಾವರಿ (ತಿದ್ದುಪಡಿ) ಮಸೂದೆಯನ್ನು ರಾಜ್ಯ ವಿಧಾನಸಭೆಯಲ್ಲಿ ಬುಧವಾರ ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಿರುವುದು ನೇಗಿಲಯೋಗಿಗೆ ಕಾಂಗ್ರೆಸ್ ಸರ್ಕಾರ ಮಾಡಿದ ದೊಡ್ಡ ದ್ರೋಹ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್ ಗೌಡರು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಈ ಮಸೂದೆ ಕುರಿತು ಚರ್ಚಿಸಲು ವಿರೋಧ ಪಕ್ಷ ಸಿದ್ಧತೆ ಮಾಡಿಕೊಂಡಿದ್ದಾಗಲೇ ಸರ್ಕಾರವು ಮುಡಾ ಹಗರಣದ ವಿರುದ್ಧ ನಡೆದ ಧರಣಿಯ ನೆಪ ಮಾಡಿಕೊಂಡು ಯಾವುದೇ ಚರ್ಚೆಗೆ ಅವಕಾಶ ಕೊಡಲಿಲ್ಲ. ಇದು ಸರ್ಕಾರದ ದುರುದ್ದೇಶವನ್ನು ತೋರಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಮಸೂದೆಗೆ ರಾಜ್ಯಪಾಲರ ಅನುಮತಿ ಸಿಕ್ಕು ಅದು ಕಾನೂನಾಗಿ ಜಾರಿಗೆ ಬಂದರೆ ನಾಲೆಯ ನೀರು ಕದಿಯುವ ರೈತರಿಗೆ ಎರಡು ವರ್ಷ ಜೈಲು ಶಿಕ್ಷೆ, ಗರಿಷ್ಠ ಎರಡು ಲಕ್ಷ ರೂಪಾಯಿ ವರೆಗೆ ದಂಡ ವಿಧಿಸಲು ಅವಕಾಶವಿದೆ. 59 ವರ್ಷಗಳ ನಂತರ ಇಂಥ ಒಂದು ಮಸೂದೆಯನ್ನು ಸದನದಲ್ಲಿ ಮಂಡಿಸಿದಾಗ ಅದರ ಬಗ್ಗೆ ವ್ಯಾಪಕ ಚರ್ಚೆಯಾಗಬೇಕು. ವಿಧಾನಮಂಡಲದ ಉಭಯ ಸದನಗಳು ಇರುವುದು ಶಾಸನ ಮಾಡಲು. ಶಾಸನ ಮಾಡುವುದಕ್ಕಿಂತ ಮುಂಚೆ ಅದರ ಸಾಧಕ ಬಾಧಕ ಕುರಿತು ಚರ್ಚೆಯಾಗಬೇಕು. ಈಗ ಸರ್ಕಾರಕ್ಕೆ ಕಾನೂನು ರಚನೆ ಕುರಿತು ಯಾವ ಗಾಂಭೀರ್ಯವೂ ಇಲ್ಲ ಎಂದು ಅರ್ಥವಾಗುತ್ತದೆ. ಇದು ದುರದೃಷ್ಟಕರ ಘಟನೆ ಎಂದು ಅವರು ಟೀಕಿಸಿದ್ದಾರೆ.
ಈ ಮಸೂದೆಯನ್ನು ಅಂಗೀಕರಿಸುವ ಮೂಲಕ ರಾಜ್ಯ ಸರ್ಕಾರವು ರೈತರ ಬದುಕಿನಲ್ಲಿ ಒಂದು ಕರಾಳ ಅಧ್ಯಾಯ ಬರೆದಿದೆ. ಬಹುಮತವಿದೆ ಎಂದು ಸರ್ಕಾರ ಹೀಗೆ ನಡೆದುಕೊಳ್ಳಬಾರದು. ಮುಂದಿನ ದಿನಗಳಲ್ಲಿ ರೈತರು ದಿನವೂ ಸಂಕಷ್ಟ ಎದುರಿಸಬೇಕಾಗುತ್ತದೆ. ತಮ್ಮ ಹೊಲ ಗದ್ದೆಗಳಿಗೆ ನೀರಾವರಿ ಸೌಲಭ್ಯ ಪಡೆಯಲು ಅಥವಾ ಕಾಲುವೆ ಪಕ್ಕದಲ್ಲಿ ಕೊಳವೆ ಬಾವಿ ಕೊರೆಯಲೂ ಅವರು ನೀರಾವರಿ ಮತ್ತು ವಿದ್ಯುಚ್ಛಕ್ತಿ ಇಲಾಖೆಗಳಿಗೆ ಅಲೆಯಬೇಕಾಗುತ್ತದೆ. ಎಂದು ಅವರು ವಿಷಾದಿಸಿದ್ದಾರೆ.
ಹೆಚ್ಚೂ ಕಡಿಮೆ ಆರು ದಶಕಗಳ ನಂತರ ಒಂದು ತಿದ್ದುಪಡಿ ಮಸೂದೆ ಮಂಡಿಸುವಾಗ ಅದರ ಪರಿಣಾಮಗಳನ್ನು ಕುರಿತು ನೀರಾವರಿ ತಜ್ಞರ ಜತೆಗೆ ಚರ್ಚೆಯಾಗಬೇಕು. ಎರಡೂ ಸದನದಲ್ಲಿಯೂ ವಿಸ್ತೃತ ಚರ್ಚೆ ಆಗಬೇಕು. ಈ ಚರ್ಚೆಯಲ್ಲಿ ಭಾಗವಹಿಸಿ ಅದರ ಅಪಾಯಗಳನ್ನು ಸದನಕ್ಕೆ ಮನವರಿಕೆ ಮಾಡಿಕೊಡಲು ತಾವು ಸಿದ್ಧತೆ ಮಾಡಿಕೊಂಡುದ್ದುದಾಗಿ ಸುರೇಶ್ ಗೌಡರು ತಿಳಿಸಿದ್ದಾರೆ.
ನಮ್ಮದು ಕೃಷಿ ಪ್ರಧಾನ ಆರ್ಥಿಕತೆ. ಆದರೆ, ಕೃಷಿ ಈಗ ಲಾಭಕರವಾಗಿಲ್ಲ. ಅದಕ್ಕೆ ಅನೇಕ ಕಾರಣಗಳಿವೆ. ಮುಖ್ಯವಾಗಿ ನಾವು ನಮ್ಮ ಇಡೀ ಕೃಷಿ ಭೂಮಿಯನ್ನು ನೀರಾವರಿ ಸೌಲಭ್ಯಕ್ಕೆ ಒಳಪಡಿಸಲು ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಮಾಡಲು ಅಗಿಲ್ಲ.
ಈಗ ಕರ್ನಾಟಕದಲ್ಲಿ ಒಟ್ಟು ಕೃಷಿ ಭೂಮಿ 1.28 ಕೋಟಿ ಹೆಕ್ಟೇರ್ ಪ್ರದೇಶ ಸಾಗುವಳಿ ಭೂಮಿ ಇದ್ದರೆ ಅದರಲ್ಲಿ 40.32 ಲಕ್ಷ ಹೆಕ್ಟೇರ್ ಭೂಮಿ ಮಾತ್ರ ನೀರಾವರಿ ಆಗಿದೆ. ಅಂದರೆ ಇನ್ನೂ ಬಹಳಷ್ಟು ಭೂಮಿ ನೀರಾವರಿ ವ್ಯಾಪ್ತಿಗೆ ಒಳಪಟ್ಟಿಲ್ಲ. ನೀರಾವರಿ ಸಾಧನೆಯಲ್ಲಿ ನಾವಿನ್ನೂ ದೇಶದಲ್ಲಿ 9 ನೇ ಸ್ಥಾನದಲ್ಲಿ ಇದ್ದೇವೆ. ನಾವು ಹೋಗಬೇಕಾದ ದಾರಿ ಇನ್ನೂ ತುಂಬಾ ದೂರವಿದೆ. ಈಗ ರೈತರಿಗೆ ಇರುವ ನೀರನ್ನು ಬಳಸಲು ಉತ್ತೇಜನ ಮಾಡಬೇಕೇ ಹೊರತು. ಜೈಲು, ದಂಡ ಎಂದು ಹೆದರಿಸುವುದು ಅಲ್ಲ. ಈ ಮಸೂದೆ ರೈತರಿಗೆ ನೀರಾವರಿ ಸೌಲಭ್ಯ ಪಡೆಯಲು ಅನೇಕ ನಿರ್ಬಂಧಗಳನ್ನು ಹಾಕುತ್ತದೆ. ಉದ್ದೇಶ ಸರಿ ಇರಬಹುದು. ಆದರೆ, ಇದರಿಂದ ಪರಿಣಾಮ ಒಳ್ಳೆಯದಾಗುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ನಕಾರಾತ್ಮಕವಾಗಿರುವ ಬಹುಪಾಲು ನೌಕರಶಾಹಿ ಈ ಮಸೂದೆಯನ್ನು ದುರುಪಯೋಗ ಮಾಡಿಕೊಂಡು ರೈತರು ಸರ್ಕಾರಿ ಕಚೇರಿಗಳ ಕಂಬ ಕಂಬ ಸುತ್ತುವಂತೆ ಮಾಡುತ್ತಾರೆ. ಮೊದಲೆ ಹತಾಶರಾಗಿರುವ ರೈತರು ಇನ್ನಷ್ಟು ಹತಾಶರಾಗುತ್ತಾರೆ. ಇದೇ ರೂಪದಲ್ಲಿ ಈ ಮಸೂದೆಯನ್ನು ಮೇಲ್ಮನೆಯಲ್ಲಿಯೂ ಅಂಗೀಕರಿಸಿದರೆ ನಾವು ರಾಜ್ಯಪಾಲರಿಗೆ ಮನವಿ ಕೊಟ್ಟು ಈ ರಾಜ್ಯದ ರೈತರ ಹಿತವನ್ನು ಕಾಂಗ್ರೆಸ್ ಸರ್ಕಾರ ಕಾಪಾಡುತ್ತಿಲ್ಲ. ನೀವು ಕಾಪಾಡಬೇಕು ಎಂದು ಮನವಿ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಅವರು ತಾಕೀತು ಮಾಡಿದ್ದಾರೆ.
ನೀರಾವರಿ ಯೋಜನೆಗಳ ಕೊನೆಯ ಹಂತದ ಬಳಕೆದಾರರ ಕುರಿತು ರಾಜ್ಯದಲ್ಲಿ ಅಧ್ಯಯನವಾಗಿಲ್ಲ. ನೀರಾವರಿ ಯೋಜನೆಗಳ ವಿನ್ಯಾಸದ ದೋಷ, ಕಾಲುವೆಗಳ ದುಃಸ್ಥಿತಿ ಮತ್ತು ಉಪಕಾಲುವೆಗಳಲ್ಲಿ ಕಸ ಕೊಳೆ ಇತ್ಯಾದಿ ಕಾರಣಗಳಿಂದಾಗಿ ನೀರು ಸಮರ್ಪಕವಾಗಿ ಹರಿಯುವುದೇ ಇಲ್ಲ. ಅದನ್ನು ಸರಿಪಡಿಸಿದರೆ ಕೊನೆಯ ಹಂತದ ವರೆಗೂ ನೀರು ಸರಾಗವಾಗಿ ಪೂರೈಕೆಯಾಗುತ್ತದೆ. ನೀರಾವರಿ ಯೋಜನೆಗಳ ಮೇಲೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುವ ಸರ್ಕಾರ ಈ ದಿಸೆಯಲ್ಲಿ ಯೋಚನೆ ಮಾಡುವ ಬದಲು ಇಂಥ ಮಾರಕ ಕಾನೂನು ಮಾಡಲು ಹೊರಟಿರುವುದು ರೈತರ ಬಗ್ಗೆ ಈ ಸರ್ಕಾರದ ನಿಲುವು ಏನು ಎಂದು ಸ್ಪಷ್ಟವಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದು ಈ ಶಾಸನದ ವಿರುದ್ಧ ರೈತರು ಬಂಡೇಳುವ ಕಾಲ ದೂರವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.