ತುಮಕೂರು: ಮಕ್ಕಳು ಹೊಟ್ಟೆ ತುಂಬಾ ಉಂಡು, ಕಣ್ಮುಂದೆ ಆಡಿ ನಲಿದುಕೊಂಡಿದ್ದರೆ ಅದೇ ಹೆತ್ತವರಿಗೆ ತೃಪ್ತಿ. ಆದರೆ 3 ವರ್ಷದ ಈ ಪುಟ್ಟ ಬಾಲಕಿಗೆ ಹುಟ್ಟಿದ ದಿನದಿಂದ ಇದುವರೆಗೂ ಎಷ್ಟೇ ಆಹಾರ ಸೇವಿಸಿದರೂ ಹೊಟ್ಟೆ ಸೇರುತ್ತಿಲ್ಲ. ಅನ್ನನಾಳ ಸಮಸ್ಯೆಯಿಂದ ಬಳಲುತ್ತಿರುವ ಈ  ಬಾಲಕಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು ಪೋಷಕರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಬಡತನದ ಬೇಗೆಯಿಂದ ಬಳಲುತ್ತಿರುವ ಹೆತ್ತವರು ಧಾನಿಗಳ ನೆರವು ಕೋರಿದ್ದಾರೆ.

ತುಮಕೂರು‌ ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬೈರಾಪುರ ತಾಂಡ್ಯದ ನಿವಾಸಿ ಹೊನ್ನಪ್ಪ, ಮನುಜ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. 3 ವರ್ಷದ ಮಗಳು ಸಾನ್ವಿ ತಾಯಿ ಗರ್ಭದಲ್ಲಿದ್ದಾಗಲೇ ಜೀರ್ಣಾಂಗ ವ್ಯವಸ್ಥೆ ಬೆಳವಣಿಗೆ ಕುಂಠಿತವಾಗಿದೆ. ಬಾಯಿಯಿಂದ ಜಠರಕ್ಕೆ ಸಂಪರ್ಕ ಕಲ್ಪಿಸುವ ಅನ್ನನಾಳ(Esophagus) ಬೆಳವಣಿಗೆಯಾಗಿಲ್ಲ, ಇದರಿಂದ ಸಾನ್ವಿ ಸೇವನೆ ಮಾಡಿದ ಆಹಾರ ಪುನಃ ಬಾಯಿ ಮೂಲಕ ಹಿಂತಿರುಗಿ ಬರುತ್ತಿತ್ತು.

ಮಗುವನ್ನ ತಪಾಸಣೆ ಮಾಡಿದ್ದ ವೈದ್ಯರು ಅನ್ನನಾಳ ಬೆಳವಣಿಗೆಯಾಗಿಲ್ಲ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ತಿಳಿಸಿದ್ದರು. ಕೂಲಿ ನಾಲಿ ಮಾಡಿ ಜೀವನ ನಡೆಸುತ್ತಿದ್ದ ಹೊನ್ನಪ್ಪನ ಕುಟುಂಬಕ್ಕೆ ವೈದ್ಯರ ಮಾತು ಬರ ಸಿಡಿಲು ಬಡಿದಂತಾಗಿತ್ತು. ಮಗಳನ್ನ ಉಳಿಸಿಕೊಳ್ಳಬೇಕೆಂದು ಹೊನ್ನಪ್ಪನಿಗೆ ತಂದೆಯಿಂದ ಬಂದ ಒಂದು ಎಕರೆ ಜಮೀನಲ್ಲಿ ಅರ್ಧ ಎಕರೆ ಮಾರಾಟ ಮಾಡಿ ಬಂದ ಒಂದುವರೆ ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ಬೆಂಗಳೂರಿ‌ನ‌ ವೈದ್ಯಕೀಯ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರ(PMSSY) ದಲ್ಲಿ ಸಾನ್ವಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಬಿಪಿಎಲ್ ಕಾರ್ಡ್ ಹಾಗೂ ABHA ಕಾರ್ಡ್ ಹೊಂದಿದ್ದರಿಂದ ಶಸ್ತ್ರಚಿಕಿತ್ಸೆಗೆ ಸ್ವಲ್ಪ ಮಟ್ಟಿನ ಸಹಾಯವಾಗಿದೆ.

ಮಗು ಕಡಿಮೆ ತೂಕ ಇದೆ ಎಂದು ವೈದ್ಯರು ತಾತ್ಕಲಿಕವಾಗಿ ಕುತ್ತಿಗೆ ಭಾಗದಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ರಂದ್ರ ಮಾಡಿ  ಅನ್ನನಾಳ(Esophagus)ಕ್ಕೆ ಸಂಪರ್ಕ ಕಲ್ಪಿಸಿದ್ದಾರೆ‌. ಇದರಿಂದ ಸಾನ್ವಿ ಸೇವಿಸಿದ ಆಹಾರ ಸಂಪೂರ್ಣವಾಗಿ ಕುತ್ತಿಗೆ ಭಾಗದ ರಂದ್ರದ ಮೂಲಕ ಹೊರಗೆ ಬರುತ್ತಿದೆ. ಜೊತೆಗೆ ಹೊಟ್ಟೆ ಭಾಗದಲ್ಲಿ ಒಂದು ರಂದ್ರ ಮಾಡಿ ಜಠರಕ್ಕೆ ಪ್ಲಾಸ್ಟಿಕ್ ಕೊಳವೆಯನ್ನ ಅಳವಡಿಸಿ ದ್ರವಾಹಾರ ನೀಡುವ ವ್ಯವಸ್ಥೆಯನ್ನ ವೈದ್ಯರು ಮಾಡಿದ್ದಾರೆ.

ಈಗ ಸಾನ್ವಿಗೆ 3 ವರ್ಷವಾಗಿದೆ, ಸಮರ್ಪಕವಾಗಿ ಆಹಾರ ಸೇವನೆ ಸಾಧ್ಯವಿಲ್ಲದ ಕಾರಣ ಸಾನ್ವಿಯ ತೂಕ ಈವರೆಗೂ ಹೆಚ್ಚಾಗಿಲ್ಲ.ಆಗಾಗಿ ಅನ್ನನಾಳದಿಂದ ಕೃತಕವಾಗಿ ಜಠರಕ್ಕೆ ಸಂಪರ್ಕ ಕಲ್ಪಿಸುವ ಶಸ್ತ್ರಚಿಕಿತ್ಸೆ ಮಾಡಲು ಸಾದ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಸಾನ್ವಿಗೆ ಪ್ರತಿನಿತ್ಯ ಪೋಷಕರು ಲ್ಯಾಕ್ಟೊಜಿನ್ 4 ಎಂಬ ಪೌಷ್ಟಿಕ ದ್ರವ ಆಹಾರ ನೀಡುತ್ತಿದ್ದಾರೆ. ಒಂದು ಲ್ಯಾಕ್ಟೋಜಿನ್ ಗೆ 475 ರೂ ಇದ್ದು ಎರಡು ದಿನಕ್ಕೆ ಒಂದು ಪ್ಯಾಕೆಟ್ ಅವಶ್ಯಕತೆಯಿದೆ.

ಕೂಲಿ ಮಾಡಿ ಜೀವನ ನಡೆಸುತ್ತಿರುವ ಹೊನ್ನಪ್ಪ ಕುಟುಂಬ ಸದ್ಯ ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿಯೇ ವಾಸವಿದ್ದಾರೆ. ಜೀವನೋಪಾಯಕ್ಕೆ ತಂದೆಯಿಂದ ಬಂದಿರುವ ಒಂದು ಎಕರೆ ಜಮೀನು ಇತ್ತು, ಮಗಳ ಶಸ್ತ್ರಚಿಕಿತ್ಸೆಗೆಂದು ಅರ್ಧ ಎಕರೆ ಜಮೀನು ಮಾರಿ ಚಿಕಿತ್ಸೆ ಕೊಡಿಸಿದ್ದರು. ಮಗಳನ್ನ ನೋಡಿಕೊಳ್ಳಲು ಇಬ್ಬರು ಸದಾ ಮನೆಯಲ್ಲಿಯೇ ಇರಬೇಕು ಈಗಾಗಿ ತಂದೆ ಹೊನ್ನಪ್ಪ ಸರಿಯಾಗಿ ಕೂಲಿ ಕೆಲಸ ಮಾಡಲು ಸಾದ್ಯವಾಗುತ್ತಿಲ್ಲ. ಕೈಯಲ್ಲಿದ್ದ ಹಣವೆಲ್ಲ ಖರ್ಚಾಗಿ ಹೊನ್ನಪ್ಪ ಕುಟುಂಬ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಮಗಳ ಮುಂದಿನ ಶಸ್ತ್ರಚಿಕಿತ್ಸೆ ಗೂ ಹಣವಿಲ್ಲದೆ, ಮಗಳಿಗೆ ಪೌಷ್ಟಿಕ ಆಹಾರ ಲ್ಯಾಕ್ಟೋಜಿನ್ ನೀಡಲು ಹಣವಿಲ್ಲದೆ ಪರದಾಡುತ್ತಿದ್ದಾರೆ.

ಮಗಳಿಗೆ ಅನ್ನನಾಳ ಶಸ್ತ್ರಚಿಕಿತ್ಸೆ ಮಾಡಿಸಲು ಹೊನ್ನಪ್ಪ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದು ಸಹಾಯ ಮಾಡುವ ಧಾನಿಗಳ ನೆರವು ಕೋರಿದ್ದಾರೆ. ಸಹಾಯ ಮಾಡಲು ಇಚ್ಚಿಸುವ ದಾನಿಗಳು ಹೊನ್ನಪ್ಪ ಅವರ ಪತ್ನಿ ಮನುಜಾ ಅವರ ಬ್ಯಾಂಕ್ ಆಫ್ ಬರೋಡಾ, ಉಳಿತಾಯ ಖಾತೆ ಸಂಖ್ಯೆ: 67410100026551, ಚಿಕ್ಕನಾಯಕನಹಳ್ಳಿ ಶಾಖೆ, IFSC ಸಂಖ್ಯೆ BARB0VJCHTU, ಡಿಜಿಟಲ್ ಪೇಮೆಂಟ್ ಫೋನ್ ಪೆ, ಗೂಗಲ್ ಪೆ ನಂಬರ್ 7483654132 ಖಾತೆಗೆ ನಿಮ್ಮ ಕೈಲಾದ ಸಹಾಯ ಮಾಡಬಹುದು. ಹೊನ್ನಪ್ಪ ಅವರ ಸಂಪರ್ಕ ಸಂಖ್ಯೆ:7483654132 ಕರೆ ಮಾಡಿ ಮಾತನಾಡಿ ಸಮಾಜ ನಿಮ್ಮೊಂದಿಗೆ ಇದೆ ಎನ್ನುವ ಧೈರ್ಯತುಂಬಿ ನಿಮ್ಮ ಕೈಲಾದ ಸಹಾಯ ಮಾಡಿ‌.

LEAVE A REPLY

Please enter your comment!
Please enter your name here