ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತೀವ್ರ ಮಂಜು: ವಿಮಾನಗಳ ಹಾರಾಟಕ್ಕೆ ಅಡ್ಡಿ, ಪ್ರಯಾಣಿಕರಿಗೆ ತೊಂದರೆ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೀವ್ರ ಮಂಜಿನಿಂದಾಗಿ ಮಂಗಳವಾರ ಬೆಳಗ್ಗೆ ವಿಮಾನಗಳ ಹಾರಾಟಕ್ಕೆ ಅಡ್ಡಿಯಾಗಿ ಅನೇಕ ಪ್ರಯಾಣಿಕರು ತೊಂದರೆ ಎದುರಿಸುವಂತಾಯಿತು.

ಮಂಜಿನ ಪರಿಣಾಮ ಎರಡು ವಿಮಾನಗಳು ಮಾರ್ಗ ಬದಲಿಸಿದರೆ, 23 ನಿರ್ಗಮಿತ ಮತ್ತು ಆಗಮಿಸಬೇಕಾಗಿದ್ದ 18 ವಿಮಾನಗಳ ಹಾರಟದಲ್ಲಿ ವಿಳಂಬ ಕಂಡುಬಂದಿತು ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಏರ್ ಪೋರ್ಟ್ ಆಪರೇಟರ್ ವಕ್ತಾರರೊಬ್ಬರು ತಿಳಿಸಿದ್ದಾರೆ.

ಸ್ಪಷ್ಟ ಗೋಚರತೆ ಇಲ್ಲದೆ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ನಲ್ಲೂ ಸಮಸ್ಯೆಗಳು ಎದುರಾದವು. ಸ್ಪಷ್ಟವಾಗಿ ಕಾಣದ ಹಿನ್ನೆಲೆಯಲ್ಲಿ ಎರಡು ವಿಮಾನಗಳು ದಿಕ್ಕು ಬದಲಾಯಿಸಿವೆ. ಬೆಂಗಳೂರಿನಲ್ಲಿ ಲ್ಯಾಂಡ್ ಮಾಡಬೇಕಿದ್ದ ಅಬುದಾಬಿ ಮತ್ತು ಕಣ್ಣೂರು ಮಾರ್ಗದ ಏರ್ ಇಂಡಿಯಾ ವಿಮಾನ ಚೆನ್ನೈಗೆ ಮಾರ್ಗ ಬದಲಿಸಿತು. ಮತ್ತೊಂದು ಹೈದರಾಬಾದಿನಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ ಚೆನ್ನೈ ಕಡೆಗೆ ಮುಖ ಮಾಡಿತು ಎಂದು ವಕ್ತಾರರು ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ 3 ಗಂಟೆಯಿಂದ 9 ಗಂಟೆಯವರೆಗೂ ಮಂಜಿನಿಂದ ಕೆಟ್ಟ ಪರಿಸ್ಥಿತಿ ಕಂಡುಬಂದಿದ್ದಾಗಿ ಏರ್ ಪೋರ್ಟ್ ಮೂಲಗಳು ಹೇಳಿವೆ. ಆದರೆ ವಾಸ್ತವ ಹವಾಮಾನ ಪರಿಸ್ಥಿತಿ ಕುರಿತಂತೆ ಕೆಐಎ ಹವಾಮಾನ ಇಲಾಖೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಧ್ಯಾಹ್ನವಾಗುತ್ತಿದ್ದಂತೆ ವಿಮಾನಗಳ ಹಾರಾಟ ಎಂದಿನಂತೆ ಸಾಗಿದೆ.

error: Content is protected !!