ವೈಭವದ ಹೆತ್ತೇನಹಳ್ಳಿಯಮ್ಮ ರಥೋತ್ಸವ

ತುಮಕೂರು- ಇತಿಹಾಸ ಪ್ರಸಿದ್ದ ಹೆತ್ತೇನಹಳ್ಳಿಯ ಶ್ರೀ ಮಾರಮ್ಮ ಆಧಿಶಕ್ತಿ ದೇವಿಯ ಜಾತ್ರಾ ಮಹೋತ್ಸವ ರಾತ್ರಿಯಿಂದ ಆರಂಭವಾಗಿದ್ದು, ಶ್ರೀ ಅಮ್ಮನವರ ರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಮಂಗಳವಾರ ಮುಂಜಾನೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು. 

ಪ್ರತಿ ವರ್ಷದಂತೆ ಬಾರಿಯೂ ನಸುಕಿನಲ್ಲಿ ನಡೆದ ಹೆತ್ತೇನಹಳ್ಳಿಯಮ್ಮನ ರಥೋತ್ಸವಕ್ಕೆ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತ ಸಮೂಹ ಸಾಕ್ಷಿಯಾಯಿತು.

ತುಮಕೂರು ತಾಲ್ಲೂಕಿನ ಗೂಳೂರು ಹೋಬಳಿಯ ಹೆತ್ತೇನಹಳ್ಳಿ, ಕೈದಾಳ, ಗೂಳೂರು, ಕಂಭತ್ತನಹಳ್ಳಿ, ರಂಗಯ್ಯನಪಾಳ್ಯ, ಚಿಕ್ಕಸಾರಂಗಿ, ನರುಗನಹಳ್ಳಿ, ಮಾಯಣ್ಣಗೌಡನ ಪಾಳ್ಯ ಸೇರಿದಂತೆ ಭಾಗದ ಹಳ್ಳಿಗಳಲ್ಲಿ ಹೆತ್ತೇನಹಳ್ಳಿಯಮ್ಮನ ಜಾತ್ರೆಗೆ ವಿಶೇಷವಾಗಿಯೇ ಭಕ್ತ ಸಮೂಹ ಸಜ್ಜಾಗುತ್ತಾರೆ. ಅದರಂತೆ ಸೋಮವಾರ ಇಡೀ ದಿನ ಭಕ್ತರು ಉಪವಾಸ ವ್ರತ ಮಾಡಿದ ಭಕ್ತರು ಮಧ್ಯರಾತ್ರಿ ಅಗ್ನಿಕೊಂಡ ಹಾಯ್ದು ಅಮ್ಮನವರಿಗೆ ಹರಕೆ ಅರ್ಪಿಸಿ ಭಕ್ತಿ ಸಮರ್ಪಿಸಿದರು.

ಇನ್ನು ಭಾಗದ ಹೆಣ್ಣು ಮಕ್ಕಳು ಅಮ್ಮನವರಿಗೆ ಬಾಯಿ ಬೀಗದ ಹರಕೆ ತೀರಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹದಿ ಹರೆಯದ ಹೆಣ್ಣು ಮಕ್ಕಳು, ಮಹಿಳೆಯರು ಸಹ ಉಪವಾಸ ವ್ರತ ಮಾಡಿ ರಾತ್ರಿ ಅಮ್ಮನವರ ಸನ್ನಿಧಿಯಲ್ಲಿ ಬಾಯಿಬೀಗ ಹಾಕಿಸಿಕೊಂಡು ಪೂಜೆ ಸಲ್ಲಿಸುವ ಮೂಲಕ ತಮ್ಮ ಹರಕೆ ತೀರಿಸಿದರು.

ಹೆತ್ತೇನಹಳ್ಳಿ ಜಾತ್ರೆಗೆಂದೇ ಕಂಭತ್ತನಹಳ್ಳಿಯ ವೀರ ಮಕ್ಕಳು ಒಂದು ವಾರದಿಂದ ಉಪವಾಸವಿದ್ದು, ಮಧ್ಯರಾತ್ರಿ ಅಗ್ನಿಕೊಂಡ ಹಾಯುವ ಮೂಲಕ ಹರಕೆ ತೀರಿಸಿದ್ದು ವಿಶೇಷವಾಗಿತ್ತು.

ನಾಡಿನ ನಾನಾ ಕಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತ ಸಮೂಹ ಅಗ್ನಿಕೊಂಡ ಹಾಯ್ದ ಬಳಿಕ ವಿವಿಧ ಬಗೆಯ ಪುಷ್ಪಗಳಿಂದ ವರ್ಣರಂಜಿತವಾಗಿ ಅಲಂಕರಿಸಲಾಗಿದ್ದ ರಥಕ್ಕೆ ಹೆತ್ತೇನಹಳ್ಳಿಯಮ್ಮ ದೇವಿಯನ್ನು ಕೂರಿಸುತ್ತಿದ್ದಂತೆ ನೆರೆದಿದ್ದ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು.

ಅಮ್ಮನವರನ್ನು ರಥಕ್ಕೆ ಕೂರಿಸಿದ ಬಳಿಕ ಭಕ್ತರು ರಥವನ್ನು ಎಳೆಯಲು ನಾ.. ಮುಂದು, ತಾ.. ಮುಂದು ಎಂದು ಮುಗಿ ಬೀಳುತ್ತಿದ್ದ ದೃಶ್ಯ ಕಂಡು ಬಂತು.

ಅಮ್ಮನವರ ಅರ್ಚಕರು, ತಹಶೀಲ್ದಾರ್ ರಥದ ಗಾಲಿಗೆ ತೆಂಗಿನ ಕಾಯಿ ಒಡೆದು ಅಮ್ಮನವರಿಗೆ ಪೂಜೆ ಸಲ್ಲಿಸಿದ ನಂತರ ರಥದ ಗಾಲಿ ಒಂದು ಸುತ್ತು ಉರುಳುತ್ತಿದ್ದಂತೆ ಭಕ್ತರು ಶ್ರದ್ಧಾ ಭಕ್ತಿಯಿಂದ ರಥಕ್ಕೆ ಹೂವು, ದವನ, ಬಾಳೆಹಣ್ಣು ಎಸೆದು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಮಾಡಿಕೊಂಡಿದ್ದ ಹರಕೆಯನ್ನು ತೀರಿಸಿದರು.

ಇಡೀ ರಾತ್ರಿ ಹೆತ್ತೇನಹಳ್ಳಿಯಲ್ಲಿ ಜಮಾಯಿಸಿದ್ದ ಭಕ್ತ ಸಮೂಹ ಅಗ್ನಿಕೊಂಡ ಹಾಯ್ದು, ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.

ಹೆತ್ತೇನಹಳ್ಳಿಯಮ್ಮನ ಜಾತ್ರೆ ಒಂದು ವಾರ ಕಾಲ ನಡೆಯಲಿದ್ದು, ಶನಿವಾರದ ವರೆಗೆ ಭಕ್ತಾದಿಗಳ ದಂಡು ಹೆತ್ತೇನಹಳ್ಳಿಗೆ ಹರಿದು ಬರಲಿದೆ.

ಒಂದು ವಾರಗಳ ಕಾಲ ನಡೆಯಲಿರುವ ಹೆತ್ತೇನಹಳ್ಳಿ ಜಾತ್ರೆಯಲ್ಲಿ ಯಾವುದೇ ರೀತಿಯ ಅಹಿತರ ಘಟನೆಗಳು, ಕಳ್ಳತನಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!