ಪುನೀತ್ ನಿಧನದ ಬಳಿಕ ಜಯದೇವ ಆಸ್ಪತ್ರೆಯಲ್ಲಿ ಹೃದಯ ತಪಾಸಣೆಗೆ ಮುಗಿಬಿದ್ದ ಜನರು: ಹೃದಯದ ಬಗ್ಗೆ ಡಾ. ಸಿ ಎನ್ ಮಂಜುನಾಥ್ ನೀಡಿದ ಸಲಹೆಗಳು ಇಲ್ಲಿವೆ

ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ ಎನ್ ಮಂಜುನಾಥ್

ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಹಠಾತ್ ವಿಧಿವಶ ಹಿನ್ನೆಲೆ ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾದಂತೆ ಕಾಣಿಸುತ್ತಿದೆ. ಆರೋಗ್ಯ ತಪಾಸಣೆಗಾಗಿ ಜನರು ಆಸ್ಪತ್ರೆಗಳತ್ತ ಆಗಮಿಸುತ್ತಿದ್ದಾರೆ. ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಜನರು ಆಗಮಿಸಿ ಹೃದಯ ಸಂಬಂಧ ತಪಾಸಣೆಗೆ ಮುಂದಾಗುತ್ತಿದ್ದಾರೆ. ಸಣ್ಣಪುಟ್ಟ ಸಮಸ್ಯೆ ಇರುವವರೂ ಹೃದಯ ತಪಾಸಣೆ ಮಾಡಿಕೊಳ್ಳುತ್ತಿದ್ದಾರೆ. ಜಯದೇವ ಆಸ್ಪತ್ರೆಗೆ ಇವತ್ತು ಒಂದೇ ದಿನಕ್ಕೆ ಸುಮಾರು 1,270 ಜನರು ಆರೋಗ್ಯ ತಪಾಸಣೆಗೆಂದು ಬಂದಿದ್ದಾರೆ.

ಆರೋಗ್ಯ ತಪಾಸಣೆಗಾಗಿ ಜಯದೇವ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು, ಇದರಲ್ಲಿ ಜಿಮ್ ಮಾಡುವವರೆ ಹೆಚ್ಚಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಕಾಲಿಕ ಅಗಲಿಕೆ ಜನರಿಗೆ ಭಯ ಹುಟ್ಟಿಸಿರುವುದು ಸ್ಪಷ್ಟವಾಗಿದೆ. ಕಳೆದ ಎರಡು ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಸ್ಪತ್ರೆಯತ್ತ ಬರುತ್ತಿದ್ದು, ಜಯದೇವ ಆಸ್ಪತ್ರೆ ಹೌಸ್ ಫುಲ್ ಆಗಿದೆ.

ವೈದ್ಯರ ಸಲಹೆ:

ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ ಎನ್ ಮಂಜುನಾಥ್ ಸುದ್ದಿಗೋಷ್ಠಿ ನಡೆಸಿ, ಹೃದಯಕ್ಕೆ ಸಂಬಂಧಿಸಿದ ಕೆಲ ಸಲಹೆಗಳನ್ನು ನೀಡಿದ್ದಾರೆ. ವ್ಯಾಯಾಮ ಮಾಡುವುದು ತುಂಬಾ ಒಳ್ಳೆಯ ಅಭ್ಯಾಸ. ಆದರೆ ಅತಿರೇಖವಾಗಿ ವರ್ಕೌಟ್ ಮಾಡುವುದು ಒಳ್ಳೆಯದಲ್ಲ. ಉದಾಹರಣೆಗೆ 30 ಕೆಜಿ ಭಾರ ಎತ್ತುವ ಸಾಮರ್ಥ್ಯವನ್ನು ಹೊಂದಿರುವ ವ್ಯಕ್ತಿ 70 ಕೆಜಿ ಭಾರವನ್ನು ಎತ್ತಬಾರದು. ವ್ಯಾಯಾಮದ ಜೊತೆಗೆ ಮಿತವಾದ ಆಹಾರವನ್ನು ಸೇವಿಸಬೇಕು. ಒಂದೆರೆಡು ಕೇಸ್ಗಳಿಂದ ಜಿಮ್ ಮಾಡುವುದು ಬೇಡ ಅಂತ ಹೇಳುವುದು ಸರಿಯಲ್ಲ. ಆದರೆ ಮಿತವಾಗಿರಬೇಕು. ಪ್ರೋಟೀನ್ ಆಹಾರವನ್ನು ಸೇರಿಸಬೇಕು. ಸೇವಿಸುವ ಆಹಾರದಲ್ಲಿ ಕಾಳುಗಳು ಹೆಚ್ಚಿರಬೇಕು. ಮೊಟ್ಟೆ ಸೇವಿಸಬೇಕು ಅಂತ ತಿಳಿಸಿದರು.

ದೇಹದ ತೂಕ ಕಡಿಮೆ ಇರುತ್ತದೆ. ಆದರೆ ಹೊಟ್ಟೆ ಮುಂದೆ ಬಂದಿರುತ್ತದೆ. ಇದು ಸಕ್ಕರೆ ಕಾಯಿಲೆ ಮತ್ತು ಹೃದಯಕ್ಕೆ ಹೆಚ್ಚು ಸಮಸ್ಯೆಯಾಗುತ್ತದೆ. ಹೀಗಾಗಿ ದಿನಕ್ಕೆ 40 ನಿಮಿಷ ವ್ಯಾಯಾಮ ಮಾಡಬೇಕು ಎಂದು ಸಲಹೆ ನೀಡಿದ ಡಾ. ಸಿ ಎನ್ ಮಂಜುನಾಥ್, ನಿಮ್ಮ ನಿಮ್ಮ ಶರೀರಕ್ಕೆ ಅನುಗುಣವಾಗಿ, ವಯಸ್ಸಿಗೆ ತಕ್ಕಂತೆ ವ್ಯಾಯಾಮ ಮಾಡಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!