ಜಿ.ಪಂ.ಸದಸ್ಯ ಕೆಂಚಮಾರಯ್ಯರ ಸೇವೆ ಶ್ಲಾಘಿಸಿದ ಹನುಂತನಾಥ ಶ್ರೀಗಳು.

ತುಮಕೂರು: ಅವಮಾನ, ಹಸಿವಿನ ಸಂಕಟಗಳ ನಡುವೆ ಮಾನವೀಯ ಮೌಲ್ಯಗಳೊಂದಿಗೆ ಎತ್ತರಕ್ಕೆ ಬೆಳೆಯುವ ಬಹಳಷ್ಟು ವ್ಯಕ್ತಿಗಳು ಎಲೆಮೆರೆ ಕಾಯಿಯಂತೆ ಸಮಾಜಕ್ಕೆ ನೀಡಿರುವ ಮಹತ್ವದ ಕೊಡುಗೆ ಅನನ್ಯವಾಗಿ ಇರುತ್ತದೆ ಎಂದು ಎಲೆರಾಂಪುರದ ಕುಂಚಿಟಿಗ ಮಠದ ಅಧ್ಯಕ್ಷರಾದ ಡಾ. ಶ್ರೀ ಹನುಮಂತನಾಥಸ್ವಾಮೀಜಿ ಹೇಳಿದರು.

ಇಲ್ಲಿನ ಆರ್.ವಿ. ಬಡಾವಣೆಯ ಮಹೇಶಕೃಪ ಸಭಾಂಗಣದಲ್ಲಿ 75 ವಸಂತಗಳು ತುಂಬಿದ ಜಿ.ಪಂ. ಸದಸ್ಯ ಕೆಂಚಮಾರಯ್ಯರಿಗೆ ವಿಕಾಸ್ ಎಜುಕೇಷನ್ ಅಕಾಡೆಮಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ, ಅವಮಾನ, ಹಸಿವು ಯಾವುದೆ ಜಾತಿ, ಧರ್ಮಕ್ಕೆ ಸೀಮಿತವಲ್ಲ. ಅಂಥ ಸಂಕಟಗಳ ನಡುವೆ ಶಿಕ್ಷಣ ಪ್ರಜ್ಞೆಯೊಂದಿಗೆ ಆಯಾಕಟ್ಟಿನ ಸ್ಥಾನಗಳನ್ನು ಪಡೆದುಕೊಳ್ಳುವ ವ್ಯಕ್ತಿ ತಾನು ಬದುಕಿ, ತನ್ನ ಸುತ್ತಮುತ್ತಲಿನವರು ಸಮಪಾಲು, ಸಮಬಾಳು ನಡೆಸುವಂತೆ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಎಲ್ಲ ಜಾತಿ ಜನರ ಒಡನಾಡಿಯಾಗಿರುವ ಕೆಂಚಮಾರಯ್ಯ ಅತ್ಯಂತ ಮಹತ್ವದ ಸ್ಥಾನಗಳನ್ನು ಗಳಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.

ಪ್ರಗತಿಪರ ಚಿಂತಕ ಕೆ.ದೊರೈರಾಜ್, ಜಿಲ್ಲಾ ಕಸಾಪ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ, ಲೇಖಕಿ ಬಿ.ಸಿ. ಶೈಲಾನಾಗರಾಜ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಮೊಹಮದ್ ಇಕ್ವಾಲ್ ಮಾತನಾಡಿ, ಯಾವುದೆ ಭೇದಗಳಿಲ್ಲದೆ ಮಾನವೀಯ ಸಂಬಂಧಗಳ ಮೂಲಕ ಸಮಾಜದ ಸಾಮರಸ್ಯ ಕಾಪಾಡಬೇಕಾಗಿದೆ. ಇಂದಿನ ಯುವಪೀಳಿಗೆ ಗೊತ್ತು, ಗುರಿ ಇಲ್ಲದೆ ದೇಶ ದಿಕ್ಕೆಡಲು ಕಾರಣವಾಗಿದ್ದಾರೆ. ಸಮಾಜದಲ್ಲಿ ಮಾದರಿ ವ್ಯಕ್ತಿಗಳನ್ನು ಇಟ್ಟುಕೊಂಡು ಆರೋಗ್ಯಕರ ಸಮಾಜವನ್ನು ನಿರ್ಮಿಸಬೇಕು. ಜಾತಿ, ಧರ್ಮಗಳ ಆಚೆಗಿರುವ ಮಾನವೀಯ ನೆಲೆಗಟ್ಟನ್ನು ಪ್ರತಿಯೊಬ್ಬರೂ ಸ್ಥಾಯಿಭಾವವಾಗಿ ಮಾಡಿಕೊಳ್ಳಬೇಕೆಂದರು.

ವಿಕಾಸ್ ಎಜುಕೇಷನ್ ಅಕಾಡೆಮಿ ಅಧ್ಯಕ್ಷ ಆರ್. ದೊಡ್ಡಲಿಂಗಪ್ಪ ಮಾತನಾಡಿ, ಸಾಧನೆಗೆ ಗುರಿ, ಮನಸ್ಸು ಬೇಕು. ಯಾವುದೆ ಸಾಧಕನನ್ನು ಜಾತಿ, ಮತದಿಂದ ನೋಡಬಾರದು. ಆತ ಏರಿರುವ ಗದ್ದುಗೆಗೆ ಪಟ್ಟಿರುವ ಶ್ರಮವನ್ನು ಅರ್ಥ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೆಂಚಮಾರಯ್ಯ ಸಾಧನೆ ಅಭಿನಂದನಾರ್ಹ ಎಂದರು. ನಗರಸಭೆ ಮಾಜಿ ಸದಸ್ಯ ನರಸೀಯಪ್ಪ, ಕನ್ನಡಪರ ಸಂಘಟನೆ ಅಧ್ಯಕ್ಷ ಡಮರುಗೇಶ್, ನಿವೃತ್ತ ಪ್ರಾಚಾರ್ಯ ಬಿ.ಮುರುಳಯ್ಯ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಂಕರಶೆಟ್ಟಿ, ವಿಕಾಸ್ ಎಜುಕೇಷನ್ ಅಕಾಡೆಮಿ ಕಾರ್ಯದರ್ಶಿ ಲೀಲಾ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!