ವರದಿ:ರಮೇಶ್ ಗೌಡ, ಗುಬ್ಬಿ.
ಗುಬ್ಬಿ: ಕಾವೇರಿಯ ಉಪ ನದಿ ಶಿಂಷಾ ದೇವರಾಯನದುರ್ಗದಲ್ಲಿ ಹುಟ್ಟಿ ದಕ್ಷಿಣ ಮುಖವಾಗಿ ಹರಿದು ಮಂಡ್ಯ ಜಿಲ್ಲೆಯ ಮೂಲಕ ಕಾವೇರಿ ಸೇರುತ್ತದೆ. ತುಮಕೂರು ಜಿಲ್ಲೆಯಲ್ಲಿ ಬಹುಭಾಗ ಹರಿಯುವ ಈ ಶಿಂಷಾ ನದಿ ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಮಾರ್ಗ ಮಧ್ಯೆ ಗುಬ್ಬಿ ತಾಲ್ಲೂಕು ಕಡಬ ಹೋಬಳಿ ವರಹಸಂದ್ರ ಬಳಿಯ ವಾಸುದೇವ ಅಣೆಯಲ್ಲಿ ಮೈದುಂಬಿ ಹರಿಯುವ ಶಿಂಷಾ ನದಿ ನೋಡುವುದೇ ಒಂದು ಆನಂದ.
ಕಳೆದ ನಾಲ್ಕೈದು ವರ್ಷಗಳಿಂದ ಪ್ರವಾಸಿಗರನ್ನು ಸೆಳೆದ ವಾಸುದೇವ ಅಣೆ ಎರಡು ಗ್ರಾಮ ಸಂದಿಸುತ್ತದೆ. ಹರಿದೇವನಹಳ್ಳಿ ಬೋಚಿಹಳ್ಳಿ ಗ್ರಾಮದ ನಡುವಿನ ಅಣೆ ಸುಮಾರು 100 ಮೀಟರ್ ಉದ್ದ 10 ಅಡಿ ಎತ್ತರದ ತಡೆಗೋಡೆಯಿಂದ ಧುಮ್ಮಿಕ್ಕುವ ನದಿ ನೀರು ಪ್ರವಾಸಿಗರ ಮೈಮನ ತುಂಬುತ್ತದೆ.
ಮಳೆಗಾಲದ ನಾಲ್ಕು ತಿಂಗಳು ತುಂಬಿ ಹರಿಯುವ ಶಿಂಷಾ ನೋಡಲು ಜಿಲ್ಲೆಯ ಹಲವು ಭಾಗದ ಪ್ರವಾಸಿಗರು ಆಗಮಿಸುತ್ತಾರೆ. ವರ್ಷವಿಡಿ ಈ ಅವಕಾಶ ಸಿಗದ ಹಿನ್ನಲೆ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳಲಾಗಿಲ್ಲ. ಸುತ್ತಲಿನ ಗ್ರಾಮಸ್ಥರು ಮಳೆಗಾಲದ ಅಣೆಯಿಂದ ಧುಮಕ್ಕುವ ಸೊಬಗು ಸವಿದಿದ್ದಾರೆ. ತುಮಕೂರು ಮೈಸೂರು ರಸ್ತೆಗೆ ಪಕ್ಕದಲ್ಲಿ ಕಾಣಸಿಗುತ್ತದೆ. ಗುಬ್ಬಿ ತಾಲ್ಲೂಕಿನ ಕಡಬ ಕಲ್ಲೂರು ಕ್ರಾಸ್ ಮೂಲಕ ನಾಲ್ಕು ಕಿಮೀ ಕ್ರಮಿಸಿದರೆ ಈ ಜಲಪಾತ ಕಾಣುತ್ತದೆ. ನೈಸರ್ಗಿಕ ಅಲ್ಲವಾದರೂ ಮಾನವ ನಿರ್ಮಿತ ಆಕರ್ಷಣೀಯ ಎನಿಸಿದೆ.
ಗುಬ್ಬಿ ತಾಲ್ಲೂಕಿನಲ್ಲಿ ಪ್ರವಾಸಿ ತಾಣಗಳೇ ಕಡಿಮೆ. ಇಂತಹ ಸಂದರ್ಭದಲ್ಲಿ ವಾಸುದೇವ ಅಣೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಈ ಅಣೆಯನ್ನು ಮತ್ತಷ್ಟು ಆಕರ್ಷಣೀಯವಾಗಿ ನಿರ್ಮಿಸಿ ಪ್ರವಾಸಿಗರ ಸಂಖ್ಯೆ ಹೆಚ್ಚಿಸಬೇಕಿದೆ. ಸುಂದರವಾಗಿ ಕಾಣಲು ಮೊದಲು ಅಲ್ಲಿನ ಒತ್ತುವರಿ ತೆರವು, ನದಿ ಹರಿಯುವ ಕೊಳ್ಳ ಅಚ್ಚುಕಟ್ಟು, ಹೂಳು ತೆಗೆಯುವುದು ಹೀಗೆ ಅನೇಕ ಕೆಲಸ ನಡೆಸಿ ಪ್ರವಾಸಿ ತಾಣವೆಂದು ಗುರುತಿಸಿ ಪ್ರವಾಸೋದ್ಯಮ ಇಲಾಖೆಯಿಂದ ಅನುಕೂಲ ಮಾಡಬೇಕು ಎಂಬುದು ಸ್ಥಳೀಯ ಪರಿಸರವಾದಿಗಳ ಒತ್ತಾಯ.
-ನಾಗಸಂದ್ರ ವಿಜಯಕುಮಾರ್, ಸಾಮಾಜಿಕ ಕಾರ್ಯಕರ್ತ, ಗುಬ್ಬಿ.