ವರದಿ: ರಮೇಶ್ ಗೌಡ, ಗುಬ್ಬಿ.
ಗುಬ್ಬಿ:ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ತಿಳಿಯುವುದಿಲ್ಲ ಎಂಬಂತೆ ಲಿಂಕ್ ಕೆನಾಲ್ ಗುತ್ತಿಗೆದಾರರಿಂದ ಕಮಿಷನ್ ಹಣ ಪಡೆದು ಕಾಮಗಾರಿ ಬಗ್ಗೆ ನನಗೇನು ಗೊತ್ತಿಲ್ಲ ಎನ್ನುವ ಗುಬ್ಬಿ ಶಾಸಕರು ಗುತ್ತಿಗೆದಾರರಿಗೆ ತಾಲೂಕಿನ ರೈತರನ್ನ ಅಡವಿಟ್ಟು ಡೈರಿ ಚುನಾವಣೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ತೀವ್ರ ವಾಗ್ದಾಳಿ ನಡೆಸಿದರು.
ತಾಲೂಕಿನ ಗಂಗಸಂದ್ರ ಬಳಿಯ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಿರ್ಮಾಣಕ್ಕೆ 50 ಲಾರಿಗಳಲ್ಲಿ 12 ಅಡಿ ಉದ್ದದ ಪೈಪ್ ಗಳನ್ನು ಹೊತ್ತುತಂದ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಕ್ಸ್ ಪ್ರೆಸ್ ಕೆನಾಲ್ ಗುತ್ತಿಗೆದಾರರಿಂದ ಲಂಚ ಪಡೆದು ಆ ಹಣದಿಂದ ತನ್ನ ಹೆಂಡತಿಯನ್ನು ಕೆ.ಎಂ.ಎಫ್ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಲು ಡೈರಿಯ ನಿರ್ದೇಶಕರಿಗೆ 50 ಸಾವಿರದಿಂದ 1 ಲಕ್ಷ ಹಣ ಕೊಟ್ಟು ಖರೀದಿಗೆ ಮುಂದಾಗಿದ್ದಾರೆ ಎಂದು ನೇರ ಆರೋಪ ಮಾಡಿದರು.
ರೈತರ ಬದುಕಿನ ಚೆಲ್ಲಾಟ ಆಡುವ ಈ ಪೈಪ್ ಲೈನ್ ಕಾಮಗಾರಿ ಮೂಲಕ ಕಮಿಷನ್ ಹಣ ಪಡೆಯುವ ಅಗತ್ಯವಿರಲಿಲ್ಲ. ಹಣ ಬೇಕಿದ್ದರೆ ಅದನ್ನು ನಾನೇ ಕೊಡುತ್ತೇನೆ. ಈ ಕಮಿಷನ್ ಹಣ ವಾಪಸ್ಸು ಕೊಟ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಮ್ಮ ಜೊತೆ ಹೋರಾಟಕ್ಕೆ ಬರಲಿ ಅದನ್ನು ಬಿಟ್ಟು ನನ್ನ ಕೆ.ಎಸ್.ಆರ್.ಟಿ.ಸಿ ಛೇರ್ಮನ್ ಗಿರಿ ಕೈತಪ್ಪಿ ಹೋಗುತ್ತೆ. ಅಲ್ಲಿನ ಹಳೆಯ ಟೈರ್ ಗಳನ್ನು ಮಾರಿಕೊಂಡು ಕಮಿಷನ್ ಪಡೆಯಲು ಸಾಧ್ಯವಿಲ್ಲ ಎಂದು ಗುತ್ತಿಗೆದಾರರ ಕಮಿಷನ್ ಆಸೆಗೆ ಬಲಿಯಾಗಿ ತಾಲೂಕಿನ ರೈತರನ್ನು ಬಲಿಕೊಟ್ಟು ಬದುಕುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಮಿಷನ್ ಪಡೆಯಲು ತಮ್ಮ ಮಡದಿ ಮುಂದೆ ಬಿಟ್ಟು ಕೆಲಸ ಮಾಡುತ್ತಿರುವ ಗುಬ್ಬಿ ಶಾಸಕರು ಇನ್ನು ಮುಂದಾದರೂ ಎಚ್ಚೆತ್ತು ಪಡೆದುಕೊಂಡಿರುವ ಕಮಿಷನ್ ಹಣ ವಾಪಸ್ ಕೊಟ್ಟು ನಮ್ಮ ಜೊತೆ ಹೋರಾಟಕ್ಕೆ ಇಳಿದರೆ ಒಳ್ಳೆಯದು. ಇಲ್ಲವಾದರೆ ತಾಲೂಕಿನ ರೈತರು ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳದಲ್ಲಿ ರೇಣುಕಾ ಪ್ರಸಾದ್, ಲೋಕೇಶ್, ಸತೀಶ್ ಸೇರಿದಂತೆ ಹಲವು ರೈತಪರ ಹೋರಾಟಗಾರರು ಮತ್ತು ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.