ವರದಿ: ರಮೇಶ್ ಗೌಡ, ಗುಬ್ಬಿ.
ಗುಬ್ಬಿ: ಭಾರಿ ಮಳೆಯಿಂದ ತುಂಬಿ ಹರಿಯುತ್ತಿರುವ ಅಣೆ ಕಟ್ಟೆ ರಸ್ತೆ ದಾಟಲು ಮುಂದಾದ ಗೂಡ್ಸ್ ವಾಹನ ನೀರಿನ ರಭಸಕ್ಕೆ ಕೊಚ್ಚಿ ಹೋದ ಘಟನೆ ತಾಲ್ಲೂಕಿನ ತೊರೆಹಳ್ಳಿ ಗ್ರಾಮದ ಬಳಿ ನಡೆದಿದೆ.
ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿದ್ದು ಕೆರೆ ಕಟ್ಟೆಗಳು ಕೋಡಿ ಬಿದ್ದಿವೆ. ಮೂಲ ಶಿಂಷಾ ನದಿಯಿಂದ ನೀರು ಹರಿಯುವ ತೊರೆಹಳ್ಳಿ ಅಣೆ ಕಟ್ಟೆ ಪ್ರತಿ ವರ್ಷದಂತೆ ಈ ವರ್ಷವೂ ತುಂಬಿ ಹರಿಯುತ್ತಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಅಣೆಕಟ್ಟೆ ಮೇಲೆ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಚಾಲಕ ಟಾಟಾ ಏಸ್ ಗೂಡ್ಸ್ ವಾಹನ ಚಲಾಯಿಸಿ ರಸ್ತೆ ದಾಟಲ ಯತ್ನಿಸಿದ್ದಾನೆ. ನೀರಿನ ರಭಸಕ್ಕೆ ಟಾಟಾ ಎಸ್ ಗೂಡ್ಸ್ ವಾಹನ ನೀರಿನಲ್ಲಿ ಕೊಚ್ಚಿ ಹೋಗಿದ್ದು ಅದೃಷ್ಟವಶಾತ್ ಚಾಲಕ ಕೂಡಲೇ ದಡಕ್ಕೆ ಧಾವಿಸಿ ಅಪಾಯದಿಂದ ಪಾರಾಗಿದ್ದಾನೆ
ಸೋಮವಾರ ರಾತ್ರಿ ನೀರಿನಲ್ಲಿ ಮುಳುಗಡೆಯಾದ ಗೂಡ್ಸ್ ವಾಹನ ಮಂಗಳವಾರ ಬೆಳಿಗ್ಗೆ ಕ್ರೇನ್ ಮೂಲಕ ಮೇಲೆತ್ತಲಾಯಿತು. ನೀರಿನಲ್ಲಿದ್ದ ವಾಹನ ಹುಡುಕಿ ಹೊರ ತೆಗೆಯಲು ಗ್ರಾಮಸ್ಥರ ಸಹಕಾರದಿಂದ ಸತತ ನಾಲ್ಕೈದು ಗಂಟೆ ಕಾಲ ಕಾರ್ಯಾಚರಣೆ ಮೂಲಕ ನೀರಿನಲ್ಲಿ ಮುಳಗಿದ್ದ ಗೂಡ್ಸ್ ವಾಹನವನ್ನ ಮೇಲಕ್ಕೆತ್ತಲಾಯಿತು. ಅಣೆ ಕಟ್ಟೆ ನೀರಿನಲ್ಲಿ ಈ ಹಿಂದೆ ಬೈಕ್ ಗಳು ಕೊಚ್ಚಿ ಹೋದ ಘಟನೆಗಳನ್ನು ಸ್ಮರಿಸಿದ ಸ್ಥಳೀಯರು ಅಣೆ ಪಕ್ಕದ ನಮ್ಮ ತೋಟಗಳಿಗೆ ಹೊಸಹಳ್ಳಿ ಮಾರ್ಗವಾಗಿ ಹತ್ತು ಕಿಮೀ ಬಳಸಿ ಬರುವಂತ ದುಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡರು.
ಘಟನೆ ಕುರಿತು ಅಧಿಕಾರಿಗಳು, ಶಾಸಕರ ವಿರುದ್ದ ಆಕ್ರೋಶ ಹೊರಹಾಕಿದ ಹೇರೂರು ಗ್ರಾಪಂ ಮಾಜಿ ಅಧ್ಯಕ್ಷ ಟಿ.ಬಿ.ರಂಗನಾಥ್ ಎರಡು ದಶಕದಿಂದ ತೊರೇಹಳ್ಳಿ ಅಣೆಗೆ ಸೇತುವೆ ನಿರ್ಮಿಸಿಕೊಡಲು ಸ್ಥಳೀಯರು ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದಾರೆ ಆದರೆ ಅಧಿಕಾರಿಗಳು, ಜನ ಪ್ರತಿನಿಧಿಗಳು ಇತ್ತ ಕಡೆ ಗಮನಹರಿಸಿಲ್ಲ. ಪ್ರತಿ ವರ್ಷ ಮಳೆಗಾಲದಲ್ಲಿ ಅಣೆ ಕಟ್ಟೆ ಮೇಲಿನ ರಸ್ತೆಯಲ್ಲಿ ನಾಲ್ಕು ತಿಂಗಳು ವಾಹನ ಸಂಚಾರ ಸ್ಥಗಿತವಾಗಿ ತೊರೇಹಳ್ಳಿ ಸೇರಿದಂತೆ ಮಡೇನಹಳ್ಳಿ, ಗೋಳೆನಹಳ್ಳಿ, ಹೊನ್ನಶೆಟ್ಟಿಹಳ್ಳಿ ಮಾರ್ಗವಾಗಿ ಕಡಬ ಸೇರುವ ಈ ಮಾರ್ಗ ಸಂಚಾರ ಸ್ಥಗಿತವಾಗಲಿದೆ. ಆಗಾಗಿ ತೊರೆಹಳ್ಳಿ ಅಣೆ ರಸ್ತೆಗೆ ಶೀಘ್ರವೇ ಸೇತುವೆ ನಿರ್ಮಿಸಿ ಮುಂದೆ ಆಗುವ ಅನಾಹುತಗಳನ್ನ ತಡೆಯುವಂತೆ ಆಗ್ರಹಿಸಿದರು.
–