ತುಮಕೂರು ವಿವಿ ಘಟಿಕೋತ್ಸವ:73 ವಿದ್ಯಾರ್ಥಿಗಳಿಗೆ ಚಿನ್ನದ ಪದಕ.

ತುಮಕೂರು : ತುಮಕೂರು ವಿಶ್ವವಿದ್ಯಾನಿಲಯದ 14ನೇ ವಾರ್ಷಿಕ ಘಟಿಕೋತ್ಸವದಲ್ಲಿ 73 ವಿದ್ಯಾರ್ಥಿಗಳಿಗೆ ಒಟ್ಟು 92 ಚಿನ್ನದ ಪದಕ, ಆರು ನಗದು ಬಹುಮಾನ ಹಾಗೂ 147 ಪಿಎಚ್‌ಡಿ ಪದವಿ ಹಾಗೂ 3 ಡಿಲಿಟ್ ಪದವಿ ಪ್ರದಾನ ಮಾಡಲಾಯಿತು.

ತುಮಕೂರು ನಗರದ ವಿಶ್ವವಿದ್ಯಾನಿಲಯದ ಶ್ರೀ ಶ್ರೀ ಶ್ರೀ ಶಿವಕುಮಾರ ಸಭಾಂಗಣದಲ್ಲಿಂದು ನಡೆದ ಘಟಿಕೋತ್ಸವದಲ್ಲಿ ಘನತೆವೆತ್ತ ರಾಜ್ಯಪಾಲ ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ವಾಜುಭಾಯಿ ವಾಲಾ ಅವರು, 73 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 147 ಪಿಎಚ್‌ಡಿ ಅಭ್ಯರ್ಥಿಗಳಿಗೆ ಮತ್ತು 3 ಡಿಲಿಟ್ ಪದವಿ ಪ್ರದಾನ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿನ ಕೊಡುಗೆಗಾಗಿ ಐ.ಎಸ್. ಪ್ರಸಾದ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದರು.

ಉದಾರ ಶಿಕ್ಷಣ ಪರಿಕಲ್ಪನೆಯಲ್ಲಿ ತುಮಕೂರು ವಿವಿಗೆ ವಿಶಿಷ್ಟ ಸ್ಥಾನ

ತುಮಕೂರು ವಿಶ್ವವಿದ್ಯಾಲಯವು ರಾಷ್ಟ್ರೀಯ ಶಿಕ್ಷಣ ನೀತಿಯ ಉದಾರ ಶಿಕ್ಷಣ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ ಎಂದು ರಾಜಸ್ಥಾನ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಾಧಿಪತಿ, ಇಸ್ರೋ ಭಾರತ ಸರ್ಕಾರ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ-2020 ಮತ್ತು ಕರ್ನಾಟಕ ಜ್ಞಾನ ಆಯೋಗದ ವಿಶ್ರಾಂತ ಅಧ್ಯಕ್ಷ ಡಾ. ಕೃಷ್ಣಸ್ವಾಮಿ ಕಸ್ತೂರಿರಂಗನ್ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ 14 ನೇ ಘಟಿಕೋತ್ಸವದ ತಮ್ಮ ಭಾಷಣದಲ್ಲಿ ಮಾತನಾಡಿದ ಅವರು, ರಾಷ್ಟ್ರ ನಿರ್ಮಾಣದ ಅಡಿಪಾಯಗಳಾಗಿರುವ ವಿಶ್ವವಿದ್ಯಾನಿಲಯಗಳು ಶೈಕ್ಷಣಿಕ ಸ್ವಾತಂತ್ರ್ಯ ಮತ್ತು ಸ್ಪೂರ್ತಿಯ ಚಿಲುಮೆಗಳನ್ನು ಸಂಕೇತಿಸುತ್ತವೆ. ಹೊಸ ಆಲೋಚನೆಗಳು ಮತ್ತು ಜ್ಞಾನವನ್ನು ಉತ್ಪಾದಿಸಲು ಮತ್ತು ಪ್ರಸಾರ ಮಾಡುವ ದೀರ್ಘಕಾಲಿಕ ಮೂಲಗಳಾಗಿ ಕಾರ್ಯನಿರ್ವಹಿಸುತ್ತವೆ. ಸಮಯ-ಪರೀಕ್ಷಿತ ವಿಧಾನಗಳು ಮತ್ತು ಮೌಲ್ಯ ವ್ಯವಸ್ಥೆಗಳೊಂದಿಗೆ ಕೇಂದ್ರ ಸ್ಥಾನ ಪಡೆದಿವೆ ಎಂದು ಹೇಳಿದರು.

ತುಮಕೂರು ಜಿಲ್ಲೆ ಪ್ರಾಚೀನ ಭಾರತದ ಹೆಮ್ಮೆ ಮತ್ತು ಆಧುನಿಕ ಭಾರತದ ಭವಿಷ್ಯವನ್ನು ಪ್ರತಿನಿಧಿಸುತ್ತದೆ. ಪಶ್ಚಿಮದ ಗಂಗರು, ವಿಜಯನಗರದ ಅರಸರು ಹಾಗೂ ಮೈಸೂರಿನ ಒಡೆಯರ ಆಡಳಿತಕ್ಕೆ ಒಳಪಟ್ಟ ತುಮಕೂರು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ ಎಂದರು.

ಉನ್ನತ ಶಿಕ್ಷಣ ಸದಾ ಕ್ರಿಯಾತ್ಮಕ ಪ್ರಕ್ರಿಯೆಯಾಗಿದೆ. ಭಾರತದಲ್ಲಿ ಶಿಕ್ಷಣ ಗಮನಾರ್ಹ ರೀತಿಯಲ್ಲಿ ಬೆಳೆದಿದ್ದು, ಪ್ರಪಂಚದ ಅತಿದೊಡ್ಡ ವ್ಯವಸ್ಥೆಗಳಲ್ಲಿ ಒಂದಾಗಿದೆ. ಅತ್ಯಂತ ಕ್ರಿಯಾಶೀಲ ಮನಸ್ಸುಗಳ ಲಭ್ಯತೆಯಿಂದಾಗಿ ಮತ್ತು ಆತ್ಮವಿಶ್ವಾಸ ಪ್ರದರ್ಶಿಸುವ ಯುವಕರಿಂದಾಗಿ ಭಾರತ ಬಾಹ್ಯಾಕಾಶ ವಿಜ್ಞಾನದಲ್ಲಿ ಸರ್ವೋಚ್ಛ ಸ್ಥಾನದಲ್ಲಿದ್ದು, ಸಮರ್ಥ ಇಂಜಿನಿಯರ್ ಮತ್ತು ವಿಜ್ಞಾನಿಗಳನ್ನು ಉತ್ಪಾದಿಸುತ್ತಿದೆ. ಹೊಸ ಶಿಕ್ಷಣ ನೀತಿಯು ಭಾರತೀಯ ಭಾಷೆಗಳು, ಕಲೆ ಮತ್ತು ಸಂಸ್ಕೃತಿಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ಕೆ ವಿಶೇಷ ಆದ್ಯತೆಯನ್ನು ನೀಡುತ್ತದೆ. ಭಾರತವು ಕಲೆ ಮತ್ತು ಕೌಶಲ್ಯಗಳ ಮಿಳಿತವಾಗಿ ಸಾಹಿತ್ಯ, ಆಚಾರ, ಭಾಷೆ ಸೇರಿದಂತೆ ಪಾರಂಪರಿಕ ಇತಿಹಾಸ ಸಂಸ್ಕೃತಿಯನ್ನು ಹೊಂದಿದೆ ಎಂದು ನುಡಿದರು.

ಶಿಕ್ಷಣ ಒಂದೇ ಹೆಜ್ಜೆಯಲ್ಲಿ ಸಂಪೂರ್ಣಗೊಳ್ಳುವ ಪ್ರಕ್ರಿಯೆಯಾಗದೆ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಸಮಗ್ರವಾಗಿರಬೇಕು. ಒಬ್ಬ ವಿದ್ಯಾವಂತ ಪ್ರಜೆಯಾಗಿ ತಮ್ಮ ಸಮಯದ ಒಂದಂಶವನ್ನಾದರೂ ಸಮಾಜಕ್ಕೆ ಮೀಸಲಾಗಿಡಬೇಕು. ನಿಮ್ಮ ಯಶಸ್ಸಿಗಾಗಿ ಮತ್ತು ಕಾಣುತ್ತಿರುವ ಕನಸುಗಳ ಸಾಧನೆಗಾಗಿ ನನ್ನ ಶುಭಾಶಯ ಬಯಸುತ್ತೇನೆ. ಭರವಸೆ, ಶ್ರದ್ಧೆ ಹಾಗೂ ದೃಢನಿರ್ಧಾರಗಳು ಭವಿಷ್ಯದ ಗುರಿ ಸಾಧಿಸುತ್ತವೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ವಿಶ್ವವಿದ್ಯಾನಿಲಯದ ಕುಲಪತಿ ಕರ್ನಲ್(ಪ್ರೊ.) ವೈ.ಎಸ್. ಸಿದ್ದೇಗೌಡ ವಾರ್ಷಿಕ ವರದಿ ಮಂಡಿಸಿ ಮಾತನಾಡಿದ ಅವರು, ಪ್ರಸಕ್ತ ವರ್ಷದ ಘಟಿಕೋತ್ಸವದಲ್ಲಿ 9707 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದ್ದಾರೆ. ಇದರಲ್ಲಿ 1715 ಸ್ನಾತಕೋತ್ತರ, 7992 ಸ್ನಾತಕ ಹಾಗೂ 147 ಅಭ್ಯರ್ಥಿಗಳು ಪಿಎಚ್‌ಡಿ ಪದವಿ ಪಡೆದಿದ್ದು, ಒಟ್ಟು 73 ವಿದ್ಯಾರ್ಥಿಗಳು 92 ಚಿನ್ನದ ಪದಕಗಳನ್ನು ಹಾಗೂ ಆರು ನಗದು ಬಹುಮಾನಗಳನ್ನು ಪ್ರದಾನ ಮಾಡಲಾಗಿದೆ ಎಂದರು.

ಪ್ರಸಾದ್ ಐ.ಎಸ್. ಅವರಿಗೆ ಗೌರವ ಡಾಕ್ಟರೇಟ್:

ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಆರೋಗ್ಯ, ಶೈಕ್ಷಣಿಕ ಹಾಗೂ ಯುವ ಸಬಲೀಕರಣ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಗಾಗಿ ಗೌರವ ಡಾಕ್ಟರೇಟ್ ಪಡೆದ ಐ.ಎಸ್. ಪ್ರಸಾದ್, ಕಿದ್ವಾಯಿ ಕ್ಯಾನ್ಸರ್ ಡ್ರಗ್ಸ್ ಫೌಂಡೇಶನ್‌ನ ಕಾರ್ಯನಿರ್ವಹಣ ಅಧ್ಯಕ್ಷರಾಗಿದ್ದರು. ಈ ಸಮಯದಲ್ಲಿ ಕ್ಯಾನ್ಸರ್ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ಸುಮಾರು 36 ಕೋಟಿ ರೂ.ಗಳ ವೈದ್ಯಕೀಯ ವೆಚ್ಚ ಉಳಿತಾಯ ಮಾಡಿದ್ದಾರೆ. ಲಯನ್ಸ್ ಕ್ಲಬ್ ಆಫ್ ಬೆಂಗಳೂರು ವೆಸ್ಟ್ ಟ್ರಸ್ಟ್‌ನ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಇವರು ಬೆಂಗಳೂರಿನಲ್ಲಿ ಅನೇಕ ನೇತ್ರ ಚಿಕಿತ್ಸಾ ಆಸ್ಪತ್ರೆಗಳ ಸ್ಥಾಪನೆಗೆ ಕಾರಣರಾಗಿದ್ದು, ಟ್ರಸ್ಟ್ ಮೂಲಕ ೧.೫೦ ಲಕ್ಷಕ್ಕೂ ಅಧಿಕ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸುವಲ್ಲಿ ನೆರವಾಗಿದ್ದಾರೆ.

ಘಟಿಕೋತ್ಸವದಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ ಸೇರಿದಂತೆ ಸಿಂಡಿಕೇಟ್ ಸದಸ್ಯರು, ವಿಶ್ವವಿದ್ಯಾನಿಲಯದ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!