ಹಟ್ಟಿ ಅಂಗಳದಲ್ಲಿ ಜನಪದ ಗೀತೋತ್ಸವ :ಅಳಿವಿನಂಚಿನಲ್ಲಿ ಜಾನಪದ ಕಲೆ

ತುಮಕೂರು: ನಮ್ಮ ನೆಲಮೂಲ ಸಂಸ್ಕೃತಿಯ ಯಕ್ಷಗಾನ, ಕೋಲುಪದ, ಲಾವಣಿ ಮತ್ತಿತರ ಜಾನಪದ ಕಲೆಗಳು ಅಳಿವಿನಂಚಿಗೆ ಸಾಗುತ್ತಿವೆ ಎಂದು ಜಾನಪದ ವಿದ್ವಾಂಸ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಇತ್ತೀಚೆಗೆ ತಾಲ್ಲೂಕಿನ ವಡ್ಡರಹಳ್ಳಿಯಲ್ಲಿ ಆಯೋಜಿಸಿದ್ದ ಜನಪದ ಗೀತೋತ್ಸವ ಕಾರ್ಯಕ್ರಮದಲ್ಲಿ   ಮಾತನಾಡಿದ ಅವರು   ಯುವ ಜನತೆ ಪಾಶ್ಚಾತ್ಯ ಕಲೆಗಳಿಗೆ ಮಾರುಹೋಗಿ ದೇಸೀ ಕಲೆಗಳ ಕಡೆಗೆ ಆಸಕ್ತಿ ತೋರದಿರುವ ಇಂತಹ ಸಂದರ್ಭದಲ್ಲಿ ಕಳೆದ 75 ವರ್ಷಗಳಿಂದಲೂ ಹಾಡುತ್ತಾ, ಕಲಿಸುತ್ತಾ, ಕೂಲಿ ಮತ್ತು ಕೃಷಿ ಕಾಯಕದಲ್ಲಿ ಬದುಕನ್ನು ಸವೆಸಿದ   ಶತಾಯುಷಿ ಕಲಾವಿದರನ್ನು ಅವರ ಹಟ್ಟಿಯ ಅಂಗಳದಲ್ಲಿಯೇ ಕಾರ್ಯಕ್ರಮ ಏರ್ಪಡಿಸಿ ಗೌರವಿಸುತ್ತಿರುವುದು ಕರ್ನಾಟಕ ಜಾನಪದ ಪರಿಷತ್ತಿನ ಗೌರವದ ಕೆಲಸ ಎಂದು ಅಭಿಪ್ರಾಯಪಟ್ಟರು.

 ಸಾಹಿತಿ ಈಚನೂರು ಇಸ್ಮಾಯಿಲ್ ಮಾತನಾಡಿ, ಬಹುಜ್ಞಾನ ಶಿಸ್ತುಗಳ ಜಾನಪದ ಸಂಸ್ಕೃತಿಗೆ  ಜನರ ನಡುವೆ ಮಾನವೀಯ ಬೆಸುಗೆ ಹಾಕುವ ಶಕ್ತಿಯಿದೆ ಎಂದರು.

ಶತಾಯುಷಿ ಕಲಾವಿದ ನರಸಿಂಹಮೂರ್ತಪ್ಪ ಮಾತನಾಡಿ, ಸೀಮೆಯ   ಕೃಷಿ, ದೈವ, ಪ್ರಾಣಿ, ಪಶು, ಜೀವ ವೈವಿಧ್ಯತೆಯನ್ನು ಜಾನಪದ ಹಾಡುಗಳಲ್ಲಿ ಕಟ್ಟಿ ಮೆರೆಸುವ ನಮ್ಮ ಜನಪದರನ್ನು ನಿರಂತರವಾಗಿ ಗುರುತಿಸಿ ಗೌರವಿಸುವ ಕೆಲಸವಾಗಬೇಕು ಎಂದರು.

ಸಂದರ್ಭದಲ್ಲಿ ಶತಾಯುಷಿ ಕಲಾವಿದ ನರಸಿಂಹಮೂರ್ತಪ್ಪ ಮತ್ತು ಅರಿಯಮ್ಮ ದಂಪತಿಗಳಿಗೆ ಗೌರವಿಸಲಾಯಿತು.

ಸಮಾರಂಭದಲ್ಲಿ ವಡ್ಡಗೆರೆ ಚಿಕ್ಕಣ್ಣ, ರಾಮಕ್ಕ, ಗಂಗಮ್ಮ, ಚಿಕ್ಕಮ್ಮ, ಕೆಂಪಯ್ಯ, ಲಕ್ಷ್ಮಮ್ಮ ಅವರು ತಂಡಗಳಲ್ಲಿ ಜನಪದ ಗೀತ ಗಾಯನ ಪ್ರದರ್ಶನ ನೀಡಿದರು.

ಕಾರ್ಯದರ್ಶಿ ಪ್ರೊ. ಕೆ.ಹೆಚ್.ವೆಂಕಟೇಶ್, ಕೋಶಾಧ್ಯಕ್ಷ ಸುಧೀರ್ ಸಿ. ಮೂರ್ತಿ, ದಲಿತ ಸಂಘರ್ಷ ಸಮಿತಿ ಪದಾಧಿಕಾರಿ ವಡ್ಡರಹಳ್ಳಿ ಚೆನ್ನಯ್ಯ, ಇಂದಿರಾ ವಿದ್ಯಾ ಸಂಸ್ಥೆ ಪ್ರಾಂಶುಪಾಲ ಪ್ರೊ. ರಂಗಪ್ಪ, ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!