ಶಿರಾ: ನಗರಸಭೆಯ ಎಂಜಿನಿಯರ್ ಮೃತ ಪಟ್ಟು ಒಂದು ವರ್ಷವಾಗಿದ್ರೂ ಇನ್ನೂ ಕೂಡ ಸರ್ಕಾರಿ ಕಡತಗಳಿಗೆ ಸಹಿ ಹಾಕುತ್ತಿದ್ದಾರೆ, ಇಂತಹದೊಂದು ಅಚ್ಚರಿಯ ಸಂಗತಿ ಶಿರಾ ನಗರಸಭೆ ಸರ್ವ ಸದಸ್ಯರ ಸಭೆಯಲ್ಲಿ ಬೆಳಕಿಗೆ ಬಂದಿದೆ.
ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಟಿ ಬಿ ಜಯಚಂದ್ರ ನೇತೃತ್ವದಲ್ಲಿ, ಅಧ್ಯಕ್ಷೆ ಪೂಜಾರವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಗರಸಭೆಯ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ಹಲವು ಸದಸ್ಯರು ನಗರಸಭೆಯ ಭ್ರಷ್ಟಾಚಾರದ ಬಗ್ಗೆ ಆರೋಪಗಳ ಸುರಿಮಳೆಗೈದರು. ಇದೇ ವೇಳೆ ಮೃತ ಪಟ್ಟು ವರ್ಷವಾದ್ರೂ ಇಂಜಿನಿಯರ್ ಸೇತುರಾಮ್ ಸಿಂಗ್ ಹಳೆಯ ಕಡತಗಳಿಗೆ ಸಹಿ ಹಾಕುತ್ತಿರುವ ವಿಚಾರ ಭಾರಿ ಸದ್ದುಮಾಡಿದೆ.
ಮೃತ ಎಂಜಿನಿಯರ್ ಸೇತುರಾಮ್ ಸಿಂಗ್ ಮೃತ ಪಟ್ಟು ಒಂದು ವರ್ಷವಾಗಿದೆ, ಹಳೆಯ ಕಡತಗಳಿಗೆ ಅವರ ನಕಲಿ ಸಹಿ ಮಾಡಿ ಅನುಧಾನವನ್ನ ಲಪಟಾಯಿಸಲಾಗಿದೆ ಎಂದು ಸದಸ್ಯರಾದ ಅಜೇಯ್ ಕುಮಾರ್, ಕೃಷ್ಣಪ್ಪ, ಲಕ್ಷ್ಮಿಕಾಂತ್ ಎಂಬುವವರು ಗಂಭೀರವಾಗಿ ಆರೋಪಿಸಿದ್ದಾರೆ.
ಈ ಬಗ್ಗೆ ಮೃತ ಎಂಜಿನಿಯರ್ ಸೇತುರಾಮ್ ಸಿಂಗ್ ಪತ್ನಿ ನಗರಸಭೆಗೆ ಒಂದು ತಿಂಗಳ ಹಿಂದೆ ದೂರು ನೀಡಿದ್ದಾರೆ. “ನನ್ನ ಪತಿಯವರು ಮೃತ ಪಟ್ಟು ಒಂದು ವರ್ಷವಾಗಿದೆ ಅವರ ಹೆಸರಿನಲ್ಲಿ ನಕಲಿ ಸಹಿ ಮಾಡಿಕೊಂಡು ಅನುಧಾನ ಕಬಳಿಸಿ ಅವರ ಹೆಸರಿಗೆ ಮಸಿ ಬಳಿಯಲಾಗ್ತಿದೆ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದ್ದಾರೆ” ಆದರೆ ಇದುವರೆಗೂ ತನಿಖೆ ನಡೆಸಿ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯರು ಕಿಡಿಕಾರಿದರು. ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುವಂತೆ ವಿಧಾನಪರಿಷತ್ ಸದಸ್ಯ ಚಿದಾನಂದ್ ಗೌಡ ಸಭೆಯಲ್ಲಿ ಒತ್ತಾಯಿಸಿದರು.
ಮೃತ ಎಂಜಿನಿಯರ್ ಸೇತುರಾಮ್ ಅವರ ಹೆಸರಲ್ಲಿ ನಕಲಿಸಹಿ ಮಾಡಿರುವ ಬಗ್ಗೆ ಸೂಕ್ತ ತನಿಖೆ ನಡೆಸಿದರೆ ಯಾವೆಲ್ಲಾ ಕಡತಗಳಿಗೆ ಸಹಿಹಾಕಲಾಗಿದೆ, ಈ ಸಹಿಯನ್ನ ನಕಲಿ ಮಾಡಿದವರಾದ್ರೂ ಯಾರು, ಎಷ್ಟು ಅನುಧಾನ ಲಪಟಾಯಿಸಲಾಗಿದೆ ಎಂಬ ವಿಚಾರಗಳು ಬೆಳಕಿಗೆ ಬರಲಿದೆ.