ಜಿಲ್ಲೆಯ 11 ದೇವಾಲಯಗಳ ವ್ಯವಸ್ಥಾಪನಾ ಸಮಿತಿ ರಚನೆಗೆ ಭಕ್ತಾದಿಗಳಿಂದ ಅರ್ಜಿ ಆಹ್ವಾನ

ತುಮಕೂರು : ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ 1997ರ ನಿಯಮ(25)ರನ್ವಯ ’ಬಿ’ ಪ್ರವರ್ಗಕ್ಕೆ ಸೇರಿರುವ ಜಿಲ್ಲೆಯ 11 ದೇವಾಲಯಗಳಿಗೆ 9 ಜನ ಸದಸ್ಯರಿರುವ ವ್ಯವಸ್ಥಾಪನಾ ಸಮಿತಿ ರಚಿಸಲು ಆಸಕ್ತ ಭಕ್ತಾದಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ತುಮಕೂರು ತಾಲೂಕಿನ ಶೆಟ್ಟಿಹಳ್ಳಿ ಶ್ರೀ ಆಂಜನೇಯಸ್ವಾಮಿ ಹಾಗೂ ಹೆತ್ತೇನಹಳ್ಳಿ ಶ್ರೀ ಮಾರಮ್ಮ; ತುರುವೇಕೆರೆ ತಾಲೂಕು ಸಂಪಿಗೆಯ ಶ್ರೀ ವೆಂಕಟರಮಣಸ್ವಾಮಿ ಹಾಗೂ  ತುರುವೇಕೆರೆ ಪಟ್ಟಣದ ಬ್ಯಾಟರಾಯನಸ್ವಾಮಿ; ಕುಣಿಗಲ್ ತಾಲೂಕು ಮೆಣಸಿನಹಳ್ಳಿಯ ಶ್ರೀ ರಂಗನಾಥಸ್ವಾಮಿ; ತಿಪಟೂರು ತಾಲೂಕು ನೊಣವಿನಕೆರೆಯ ಶ್ರೀ ಬೇಟೆರಾಯಸ್ವಾಮಿ; ಚಿಕ್ಕನಾಯಕನಹಳ್ಳಿ ತಾಲೂಕು ಯಳನಡು ಶ್ರೀ ಸಿದ್ದರಾಮೇಶ್ವರಸ್ವಾಮಿ ಹಾಗೂ ಗೋಡೆಕೆರೆಯ ಸಿದ್ದರಾಮೇಶ್ವರ ಸ್ವಾಮಿ, ಮಧುಗಿರಿ ತಾಲೂಕು ದೊಡ್ಡದಾಳವಟ್ಟದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ; ಕೊರಟಗೆರೆ ತಾಲೂಕು ಕ್ಯಾಮೇನಹಳ್ಳಿಯ ಶ್ರೀ ಆಂಜನೇಯಸ್ವಾಮಿ ಹಾಗೂ ದೊಡ್ಡಪಾಲಹಳ್ಳಿಯ ಶ್ರೀ ಕುಮಾರರಾಮ ಸ್ವಾಮಿ ದೇವಾಲಯ ಸೇರಿದಂತೆ ಒಟ್ಟು 11 ದೇವಾಲಯಗಳಿಗೆ ಸಮಿತಿ ರಚಿಸಲು ಭಕ್ತಾದಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  

 ’ಬಿಪ್ರವರ್ಗದ ದೇವಾಲಯಗಳಿಗೆ ಒಂಭತ್ತು ಜನ ಸದಸ್ಯರನ್ನು ಮೀರದ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಗುವುದು. ಸಮಿತಿಗೆ ಒಬ್ಬರು ದೇವಾಲಯದ ಪ್ರಧಾನ ಅರ್ಚಕ/ಅರ್ಚಕರು ಅನುಸೂಚಿತ ಜಾತಿ ಅಥವಾ ಅನುಸೂಚಿತ ಬುಡಕಟ್ಟಿಗೆ ಸೇರಿದವರ ಪೈಕಿಯಿಂದ ಕೊನೆ ಪಕ್ಷ ಒಬ್ಬರು, ಇಬ್ಬರು ಮಹಿಳೆಯರು, ಸಂಸ್ಥೆ ಇರುವ ಸ್ಥಳದಲ್ಲಿ ವಾಸಿಸುತ್ತಿರುವ ವ್ಯಕ್ತಿಗಳ ಪೈಕಿ ಕೊನೆ ಪಕ್ಷ ಒಬ್ಬರನ್ನು ಆಯ್ಕೆ ಮಾಡಲಾಗುವುದು.

 ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯೊಂದಿಗೆ ಗುರುತಿನ ಚೀಟಿ (ಆಧಾರ ಕಾರ್ಡ್ ಮತ್ತು ಚುನಾವಣಾ ಗುರುತಿನ ಚೀಟಿ), ಪಾಸ್ ಪೋರ್ಟ್   ಅಳತೆಯ ಇತ್ತೀಚಿನ ಭಾವಚಿತ್ರ, ಮೀಸಲಾತಿ ಕೋರಿದ್ದಲ್ಲಿ ಜಾತಿ ದೃಢೀಕರಣ ಪತ್ರ, ವಯಸ್ಸನ್ನು ದೃಢೀಕರಿಸುವ ದಾಖಲೆ(ಜನನ ಪ್ರಮಾಣ ಪತ್ರ/ಎಸ್ಸೆಸ್ಸೆಲ್ಸಿ ಅಂಕಪಟ್ಟಿ/ಶಾಲಾ ವರ್ಗಾವಣೆ ಪ್ರಮಾಣ ಪತ್ರ)ಗಳನ್ನು ಲಗತ್ತಿಸಬೇಕು. 

ಸಮಿತಿ ಸದಸ್ಯರಾಗ ಬಯಸುವವರು ಹಿಂದೂ ಧರ್ಮಕ್ಕೆ ಸೇರಿದ ವ್ಯಕ್ತಿಗಳಾಗಿರಬೇಕು. ದೇವರಲ್ಲಿ ನಂಬಿಕೆಯುಳ್ಳವರಾಗಿದ್ದು, ೨೫ ವರ್ಷ ಅಥವಾ ಮೇಲ್ಪಟ್ಟ ವಯಸ್ಸಿನವರಾಗಿರಬೇಕು. ಉತ್ತಮ ವರ್ತನೆ ಹಾಗೂ ಹೆಸರು ಹೊಂದಿರಬೇಕು ಹಾಗೂ ಸಂಸ್ಥೆಯು ಇರುವ ಪ್ರದೇಶದಲ್ಲಿ ಗೌರವಕ್ಕೆ ಪಾತ್ರನಾಗಿರಬೇಕು.

ಅರ್ಜಿದಾರನು ಯಾವುದೇ ಹಂತದಲ್ಲಿ ಯಾವುದೇ ರಾಜಕೀಯ ಪದಾಧಿಕಾರಿಯಾಗಿರುವ ಯಾವೊಬ್ಬ ವ್ಯಕ್ತಿಯೂ ವ್ಯವಸ್ಥಾಪನಾ ಸಮಿತಿ ಸದಸ್ಯನಾಗಲು ಅರ್ಹರಿರುವುದಿಲ್ಲ. ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ವ್ಯವಸ್ಥಾಪನಾ ಸಮಿತಿಗಳಿಗೆ ಸದಸ್ಯನಾಗಿರಬಾರದು. ಸಕ್ಷಮ ನ್ಯಾಯಾಲಯದಿಂದ ಅವಿಮುಕ್ತ ದಿವಾಳಿಯೆಂದು ಘೋಷಿತನಾಗಿರಬಾರದು. ಅಸ್ವಸ್ಥಚಿತ್ತನಾಗಿದ್ದು ಮತ್ತು ಹಾಗೆಂದು ಸಕ್ಷಮ ನ್ಯಾಯಾಲಯದಿಂದ ಘೋಷಿತನಾಗಿರಬಾರದುಮೂಕನಾಗಿದ್ದರೆ/ಕುಷ್ಟ ರೋಗ ಹಾಗೂ ಯಾವುದೇ ಭಯಂಕರ ಅಥವಾ ಸಾಂಕ್ರಾಮಿಕ ಖಾಯಿಲೆಯಿಂದ ಪೀಡಿತನಾಗಿರಬಾರದು. ಸಂಸ್ಥೆಯ ಯಾವುದೇ ಸ್ವತ್ತಿನ/ ಮಾಡಿಕೊಳ್ಳಲಾದ ಯಾವುದೇ ಕರಾರಿನ ಸಂಬಂಧದಲ್ಲಿ ಈಗಿರುವ ಗುತ್ತಿಗೆಯಲ್ಲಿ, ಸಂಸ್ಥೆಗಾಗಿ ಮಾಡಲಾದ ಕಾಮಗಾರಿಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಹಿತಾಸಕ್ತಿ ಹೊಂದಿರುವ ವ್ಯಕ್ತಿಯಾಗಿರಬಾರದು. ಸಂಸ್ಥೆಗೆ ಕೊಡಬೇಕಾದ ಯಾವುದೇ ಪ್ರಕಾರದ ಬಾಕಿಯನ್ನು ಕೊಡದೆ ಉಳಿಸಿಕೊಂಡಿರಬಾರದು. ಸಂಸ್ಥೆಯ ಪರವಾಗಿ/ವಿರುದ್ಧವಾಗಿ ಕಾನೂನು ವೃತ್ತಿಗಾರನಾಗಿ ಹಾಜರಾಗುತ್ತಿರಬಾರದು.

ನೈತಿಕ ಅಧಃಪತನವನ್ನು ಒಳಗೊಳ್ಳುವ ಒಂದು ಅಪರಾಧಕ್ಕಾಗಿ ಕ್ರಿಮಿನಲ್ ನ್ಯಾಯಾಲಯದಿಂದ ಶಿಕ್ಷಿತನಾಗಿದ್ದು ಮತ್ತು ಅಂಥ ಶಿಕ್ಷೆಯನ್ನು ಹಿಂತೆಗೆದುಕೊಂಡಿದ್ದರೆ ಅಥವಾ ಅಪರಾಧವನ್ನು ಕ್ಷಮಿಸಿರದಿದ್ದರೆ ಅಥವಾ ಯಾವಾಗಲಾದರೂ  ಸಂಸ್ಥೆಯ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸಿದ್ದರೆ/ ಅಂಥ ಸಂಸ್ಥೆಯ ಅರ್ಚಕನಾಗಿ ಅಲ್ಲದೆ ಯಾವುದೆ ಪದವನ್ನು ಧಾರಣ ಮಾಡಿದ್ದರೆ /ಒಬ್ಬ   ನೌಕರನಾಗಿದ್ದರೆ, ಅಂಥ ಸಂಸ್ಥೆಯಿಂದ ಯಾವುದೇ ಉಪಲಬ್ದಿಗಳನ್ನು ಅಥವಾ ಅನುಷಂಗಿಕ ಲಾಭವನ್ನು ಸ್ವೀಕರಿಸುವ ವ್ಯಕ್ತಿಯಾಗಿದ್ದರೆ ಅರ್ಜಿ ಸಲ್ಲಿಸಲು ಅರ್ಹನಿರುವುದಿಲ್ಲ.

ಮದ್ಯಪಾನ ಅಥವಾ ಮಾದಕ ದ್ರವ್ಯ ಸೇವನೆಯ ದುರ್ವ್ಯಸನಿಯಾಗಿದ್ದರೆ, ಹಿಂದೂ ಅಲ್ಲದಿದ್ದರೆ ಅಥವಾ ಹಿಂದೂ ಆಗಿದ್ದು, ತರುವಾಯದಲ್ಲಿ  ಯಾವುದೇ ಇತರೆ ಧರ್ಮಕ್ಕೆ ಪರಿವರ್ತಿತನಾಗಿದ್ದರೆ ಅಂತಹ ವ್ಯಕ್ತಿಗಳು ಯಾವುದೇ ಅಧಿಸೂಚಿತ ಸಂಸ್ಥೆಯ ವ್ಯವಸ್ಥಾಪನಾ ಸಮಿತಿಯ ಸದಸ್ಯನಾಗಿ ನೇಮಕಗೊಳ್ಳಲು ಅಥವಾ ಮುಂದುವರೆಯಲು ಅನರ್ಹನಾಗಿರುತ್ತಾನೆ.

ಅರ್ಜಿ ಸಲ್ಲಿಸುವವರು ತಮ್ಮ ಅರ್ಜಿಯಲ್ಲಿ ಪೂರ್ಣ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಸ್ವಷ್ಟವಾಗಿ ನಮೂದಿಸಬೇಕು.  ಆಸಕ್ತ ಭಕ್ತಾದಿಗಳು ನಿಗಧಿತ ಅರ್ಜಿ ನಮೂನೆ-1(ಬಿ)(ನಿಯಮ-22 ರಂತೆ)ಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮಾರ್ಚ್ 25 ರೊಳಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಜರಾಯಿ ಶಾಖೆಗೆ ಸಲ್ಲಿಸಬೇಕು. ನಿಗಧಿತ  ಅರ್ಜಿ ನಮೂನೆಯನ್ನು ಆಯಾ ತಾಲೂಕು ಕಚೇರಿ ಮುಜರಾಯಿ ಶಾಖೆ/ ಜಿಲ್ಲಾಧಿಕಾರಿಗಳ ಕಚೇರಿ ಮುಜರಾಯಿ ಶಾಖೆ ಅಥವಾ ಜಾಲತಾಣ www.temples.karnataka.gov.in ನಲ್ಲಿ ಪಡೆದು ಕೊಳ್ಳಬಹುದು.ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ತಿನ ಅಧ್ಯಕ್ಷ ವೈ.ಎಸ್. ಪಾಟೀಲ ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!