ತುಮಕೂರು: ಜಮೀನು ವಿವಾದ ಹಿನ್ನೆಲೆ ವೃದ್ದೆಯ ತೆಂಗಿನ ತೋಟವನ್ನ ರಾತ್ರೋ ರಾತ್ರಿ ದುಷ್ಕರ್ಮಿಗಳು ದಾರುಣವಾಗಿ ಕಡಿದುರುಳಿಸಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ತುರುವೇಕೆರೆ ತಾಲೂಕಿನ ಅಪ್ಪಸಂದ್ರ ಗ್ರಾಮದ ವೃದ್ದೆ ಸಿದ್ದಗಂಗಮ್ಮ ಎಂಬುವರಿಗೆ ಸೇರಿದ 42 ತೆಂಗಿನ ಮರಗಳನ್ನ ಕಿಡಿಗೇಡಿಗಳು ಕಡಿದುರುಳಿಸಿದ್ದಾರೆ. ಸುಮಾರು 12 ವರ್ಷಗಳಿಂದ ಕಷ್ಟ ಪಟ್ಟು ಕಾಪಾಡಿಕೊಂಡು ಬಂದಿದ್ದ ತೆಂಗಿನ ತೋಟ ಫಲ ಬಿಡುವ ಹೊತ್ತಿನಲ್ಲಿ ದುಷ್ಕರ್ಮಿಗಳ ದ್ವೇಷದ ಅಟ್ಟಹಾಸಕ್ಕೆ ಬಲಿಯಾಗಿದೆ.
ಜಮೀನು ವಿವಾದ : ಎದುರಾಳಿಗಳ ಕೃತ್ಯ ಆರೋಪ.
ವೃದ್ದೆ ಸಿದ್ದಗಂಗಮ್ಮ ಅವರಿಗೆ ಅಪ್ಪಸಂದ್ರ ಗ್ರಾಮದ ಸರ್ವೆ ನಂ 120 ರಲ್ಲಿ 04 ಎಕರೆ 01 ಗುಂಟೆ ಭೂಮಿ ಪಿತ್ರಾರ್ಜಿತವಾಗಿ ಬಂದಿತ್ತು. ಕೆಲವು ವರ್ಷಗಳಿಂದ ಪಕ್ಕದ ಜಮೀನಿನ ಕಾಳೇಗೌಡರ ಮಕ್ಕಳಾದ ಉಮೇಶ, ರಾಜ ಹಾಗೂ ವೃದ್ದೆ ಸಿದ್ದಗಂಗಮ್ಮ ನಡುವೆ ಜಮೀನು ವಿವಾದವಿತ್ತು. ಇತ್ತೀಚೆಗೆ ಸರ್ವೆ ಅಧಿಕಾರಿಗಳು ಭೇಟಿ ನೀಡಿ ಇಬ್ಬರ ಜಮೀನು ಸರ್ವೆ ಮಾಡಿ ಗಡಿ ಗುರುತು ಮಾಡಿದ್ದರು. ಒತ್ತುವರಿಯಾಗಿದ್ದ ಸುಮಾರು 30 ಗುಂಟೆ ಭೂಮಿಯನ್ನ ಸಿದ್ದಗಂಗಮ್ಮ ಅವರಿಗೆ ಬಿಡಿಸಿಕೊಟ್ಟಿದ್ದರು. ಇದೇ ಕಾರಣಕ್ಕೆ ಉಮೇಶ, ರಾಜ ತೆಂಗಿನ ಮರಗಳನ್ನ ಕಡಿದು ಹಾಕಿದ್ದಾರೆ ಎಂದು ವೃದ್ದೆ ಸಿದ್ದಗಂಗಮ್ಮ ಆರೋಪಿಸಿದ್ದಾರೆ.
ಅತಿಕ್ರಮ ಪ್ರವೇಶ ಮಾಡಿ ತೆಂಗಿನ ಮರಗಳನ್ನು ಕಡಿದಿದ್ದಾರೆ ಅಂತಾ ವೃದ್ಧೆಯ ಸಂಬಂಧಿಕರು ಆರೋಪಿಸಿದ್ದಾರೆ. ಈ ಕುರಿತು ವೃದ್ಧೆ ಸಿದ್ಧಗಂಗಮ್ಮ ದಂಡಿನಶಿವರ ಪೊಲೀಸರಿಗೆ ದೂರು ನೀಡಿದ್ದು ಸೂಕ್ತ ರಕ್ಷಣೆ ಮತ್ತು ಪರಿಹಾರ ಕೊಡಿಸಿ ಅಂತಾ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.