‘ಜೈ ಭೀಮ್’ ದೃಶ್ಯಕ್ಕೆ ದ್ರಾವಿಡ ಭಾಷಿಗರ ಮೆಚ್ಚುಗೆ

ದೇಶದಲ್ಲಿ ಹಿಂದಿ ಹೇರಿಕೆ ವಿರುದ್ಧ ಮೊದಲಿನಿಂದಲೂ ಗಟ್ಟಿಯಾಗಿ ಪ್ರತಿರೋಧ ಒಡ್ಡುತ್ತಿರುವುದು ತಮಿಳುನಾಡು. ದ್ರಾವಿಡ ಭಾಷೆಗಳಿಗೆ ಮನ್ನಣೆ ಸಿಗಬೇಕು. ಹಿಂದಿ ಹೇರಿಕೆ ಸಹಿಸುವುದಿಲ್ಲ ಎಂಬುದನ್ನು ಪ್ರತಿ ಬಾರಿಯು ಒಂದಲ್ಲ ಒಂದು ವೇದಿಕೆ ಮೂಲಕ ತಿಳಿಸುತ್ತಿದ್ದಾರೆ. ಇದನ್ನೇ ’ಜೈ ಭೀಮ್’ ಚಿತ್ರದಲ್ಲೂ ಅಳವಡಿಸಿದ್ದಾರೆ.

ಈ ಬಾರಿ ನಟ ಸೂರ್ಯ ಅಭಿನಯದ ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ’ಜೈ ಭೀಮ್’ ಚಿತ್ರದಲ್ಲಿ ಮತ್ತೆ ಹಿಂದಿ ಹೇರಿಕೆ ವಿರುದ್ಧ ಪ್ರತಿರೋಧ ವ್ಯಕ್ತವಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಿದೆ.

ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರಾಜ್ ಅವರು ಹಿಂದಿ ಭಾಷೆಯಲ್ಲಿ ಉತ್ತರ ನೀಡುವ ವ್ಯಕ್ತಿಯ ಕೆನ್ನೆಗೆ  ಹೊಡೆಯುವ ದೃಶ್ಯವೊಂದು ಜೈ ಭೀಮ್ ಚಿತ್ರದಲ್ಲಿದೆ. ಈ ದೃಶ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಪರ ವಿರೋಧ ಚರ್ಚೆಗಳು ನಡೆಯುತ್ತಿದೆ

ಚಿತ್ರದಲ್ಲಿ ಉನ್ನತ ಪೊಲೀಸ್ ಅಧಿಕಾರಿ ಪೆರುಮಾಳ್‌ಸ್ವಾಮಿ (ಪರಮೇಶ್ವರಪ್ಪ) ಪಾತ್ರ ನಿರ್ವಹಿಸಿರುವ ಪ್ರಕಾಶ್‌ ರಾಜ್ ಅವರು ಪಾತ್ರದಾರಿಯೊಬ್ಬರಿಂದ ಮಾಹಿತಿ ಪಡೆಯುವ ವೇಳೆ ಆತ ಹಿಂದಿಯಲ್ಲಿ ಉತ್ತರಿಸಲು ಪ್ರಯತ್ನಿಸುತ್ತಾರೆ. ಆಗ ಪ್ರಕಾಶ್ ರೈ ಪಾತ್ರಧಾರಿಗೆ ಕಪಾಳಕ್ಕೆ ಹೊಡೆಯುವ ದೃಶ್ಯ ಇದೆ. ಯಾಕೆ ನನಗೆ ಹೊಡೆಯುತ್ತೀರಿ ಎಂದು ಆತ ತಮಿಳಿನಲ್ಲೇ ಪ್ರಕಾಶ್ ರೈಗೆ ಪ್ರಶ್ನಿಸುತ್ತಾನೆ. ಆಗ ‘ತಮಿಳಿನಲ್ಲಿ ಮಾತಾಡು’ ಎಂದು ಪ್ರಕಾಶ್ ರೈ ಉತ್ತರಿಸುತ್ತಾರೆ.

ಈ ಸಿನಿಮಾದ ಕನ್ನಡ ಅವತರಣಿಕೆಯಲ್ಲಿ, ಯಾಕೆ ಸಾರ್ ಹೊಡೆದಿದ್ದು ಎಂದು ಆತ ಕೇಳುತ್ತಾನೆ. ‘ಕನ್ನಡದಲ್ಲಿ ಮಾತಾಡು’ ಎಂದು ಪ್ರಕಾಶ್ ರೈ ಎಚ್ಚರಿಸುತ್ತಾರೆ. ಇದೇ ಸಿನಿಮಾದ ತೆಲುಗು ಅವತರಣಿಕೆಯಲ್ಲಿ ‘ಯಾಕೆ ಕಪಾಳಕ್ಕೆ ಹೊಡೆಯುತ್ತೀರಿ’ ಎಂದು ತೆಲುಗಿನಲ್ಲೇ ಕೇಳಿದಾಗ ‘ತೆಲುಗಿನಲ್ಲಿ ಮಾತಾಡು’ ಎಂದು ಎಚ್ಚರಿಸುತ್ತಾರೆ ಪ್ರಕಾಶ್ ರೈ. ಮಲಯಾಳಂ ಅವತರಣಿಕೆಯಲ್ಲೂ ಇದೇ ರೀತಿಯ ಸಂಭಾಷಣೆ ಬಂದು ಹೋಗುತ್ತದೆ. ಈ ದೃಶ್ಯಗಳು ಈಗ ಹೊಸ ಚರ್ಚೆಗೆ ಎಡೆಮಾಡಿಕೊಟ್ಟಿವೆ.

ಟ್ವಿಟರ್‌ ಬಳಕೆದಾರ ಅಮಿತ್ ಕುಮಾರ್‌ ಅವರು, ’ಜೈ ಭೀಮ್‌ ಚಿತ್ರದಲ್ಲಿ ಹಿಂದಿ ಮಾತಾಡುವ ವ್ಯಕ್ತಿಗೆ ಹೊಡೆಯುವ ಮೂಲಕ ಪ್ರಕಾಶ್‌ ರಾಜ್ ಅವರ ಪ್ರಪೊಗಾಂಡಾದೊಂದಿಗೆ ಕಾಣಿಸಿಕೊಂಡಿದ್ದಾರೆ’ ಎಂದು ಟ್ವಿಟ್ ಮಾಡಿದ್ದಾರೆ.

ಈ ಟ್ವೀಟ್‌ಗಳಿಗೆ ಟಾಂಗ್ ಕೊಟ್ಟಿರುವ ’ಹಿಂದಿ ಹೇರಿಕೆ ನಿಲ್ಲಿಸಿ’ (Stop hindi imposition) ಬಳಗ ಹಿಂದಿ ಚಿತ್ರಗಳಲ್ಲಿ ತಮಿಳು ಮಾತಾಡುವವರನ್ನು ಹೇಗೆ ಹಿಂದಿ ಮಾತಾಡುವಂತೆ ಒತ್ತಾಯಿಸಲಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ.

“ರಕ್ತಸ್ರಾವವಾದಾಗ ಹಿಂದಿಯವರಿಗೆ ಬರುವುದು ರಕ್ತ ಮತ್ತು ಹಿಂದಿಯೇತರರಿಗೆ ಟೊಮೇಟೊ ಚಟ್ನಿ ಹರಿಯುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
“ಸ್ಕ್ಯಾಮ್ 1992 ವೆಬ್ ಸರಣಿಯಲ್ಲಿ ಹಿಂದಿ ಗೊತ್ತಿಲ್ಲದ ಕಾರಣಕ್ಕಾಗಿ ಹಿಂದಿಯೇತರ ಭಾರತೀಯನಿಗೆ ಬೆದರಿಕೆ ಹಾಕುವುದು, ಬೆದರಿಸುವುದು ಸಂಪೂರ್ಣವಾಗಿ ಸರಿಯಾಗಿದೆ. ಆದರೆ ಜೈ ಭೀಮ್‌ ಚಿತ್ರದಲ್ಲಿ ಹಿಂದಿಯೇತರ ಭಾರತೀಯನೊಬ್ಬ ಹಿಂದಿಯವರಿಗೆ ಅದನ್ನೇ ಮಾಡಿದರೆ ನೋವಾಗುತ್ತದೆ” ಎಂದು ಎರಡು ಚಿತ್ರದ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಹಿಂದಿ ಹೇರಿಕೆ ವಿರುದ್ಧ ಇರುವ ಈ ದೃಶ್ಯವನ್ನು ಹಲವು ದ್ರಾವಿಡ ಭಾಷಿಗರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಇದಕ್ಕಿಂತ ಇನ್ನೆನ್ನು ಮನರಂಜನೆ ಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಈ ಸಿನಿಮಾ ಹಿಂದಿಯಲ್ಲಿಯೂ ಬಿಡುಗಡೆಯಾಗಿದೆ. ಆದರೆ, ಹಿಂದಿ ಅವತರಣಿಕೆಯ ಈ ದೃಶ್ಯದ, ಯಾಕೆ ಸಾರ್ ಹೊಡೆದಿದ್ದು ಎಂದು ಆತ ಕೇಳುತ್ತಾನೆ. ‘ಸತ್ಯ ಹೇಳು’ ಎಂದು ಪ್ರಕಾಶ್ ರೈ ಎಚ್ಚರಿಸುತ್ತಾರೆ.

ದ್ರಾವಿಡ ಭಾಷೆಗಳ ಮೇಲೆ ಹಿಂದಿ ಹೇರಿಕೆ ಮಾಡಿರುವುದನ್ನು ಪ್ರತಿ ಹಂತದಲ್ಲೂ ವಿರೋಧಿಸಲಾಗುತ್ತಿದ್ದು, ಹಿಂದಿ ದಿವಸ್ ಆಚರಣೆಗೂ ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು.

error: Content is protected !!