ಹಾಸನಾಂಬೆ ದರ್ಶನಕ್ಕೆ ಭಕ್ತರ ದಂಡು: ಇನ್ನೂ ಐದು ದಿನಗಳು ಮಾತ್ರ.

ಹಾಸನ:  ಹಾಸನಾಂಬೆ ದರ್ಶನಕ್ಕಾಗಿ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರ ದಂಡೆ ಹರಿದು ಬರುತ್ತಿದ್ದು ದರ್ಶನಕ್ಕೆ ಇನ್ನು 5 ದಿನಗಳು ಮಾತ್ರ ಉಳಿದಿದೆ. ಈ ವರ್ಷ 10 ದಿನಗಳು ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮೊದಲ ಮೂರು ದಿನಗಳ ಕಾಲ ಕಡಿಮೆ ಸಂಖ್ಯೆಯಲ್ಲಿ ಭಕ್ತರು ದೇವಿ ದರ್ಶನಕ್ಕೆ ಆಗಮಿಸಿದ್ದರು. ನಟ ಪುನೀತ್ ರಾಜ್ಕುಮಾರ್ ವಿಧಿವಶರಾದಾಗ ಅಭಿಮಾನಿಗಳು ದುಃಖತಪ್ತರಾಗಿ ದೇವಸ್ಥಾನದ ಕಡೆಗೆ ಹೆಜ್ಜೆ ಹಾಕಿಲಿಲ್ಲ ಎಂಬುದು ಕೂಡ ಒಂದು ಕಾರಣವಾಗಿತ್ತು. ಆದರೆ ಇಂದು (ನವೆಂಬರ್ 1) ಭಾರೀ ಸಂಖ್ಯೆಯಲ್ಲಿ ದೇಗುಲದತ್ತ ಭಕ್ತರು ಆಗಮಿಸಿದ್ದಾರೆ.

ಬೆಳಿಗ್ಗೆಯಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ದೇವಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಶಕ್ತಿದೇವತೆಯ ಆಶೀರ್ವಾದ ಪಡೆದರು. ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಜೊತೆಗೆ ಹೊರ ರಾಜ್ಯಗಳಿಂದಲೂ ಆಗಮಿಸಿದ್ದ ಅಪಾರ ಭಕ್ತರು ಕೊವಿಡ್ ಆತಂಕದ ಕಾರಣ ಎರಡು ವರ್ಷಗಳಿಂದ ಹಾಸನಾಂಬೆ ನೋಡದೆ ಆಗಿದ್ದ ನಿರಾಸೆ ನೀಗಿಸಿಕೊಂಡು ಇಷ್ಠಾರ್ಥ ಸಿದ್ದಿಸುವ ದೇವಿಗೆ ನಮಿಸಿದರು. ಒಂದೆಡೆ ಭಕ್ತರು ದಂಡು ಆಗಮಿಸಿದರೆ ಇನ್ನೊಂದೆಡೆ ಗೃಹ ಸಚಿವ ಆರಗ ಜ್ಞಾನೇಂದ್ರ, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಸೇರಿ ಹಲವರು ದೇವಿ ದರ್ಶನ ಮಾಡಿ ಪುನೀತರಾದರು.

ಹಾಸನದ ಅಧಿ ದೇವತೆ ರಾಜ್ಯದ ಶಕ್ತಿದೇವತೆಗಳಲ್ಲಿ ಒಬ್ಬಳಾದ ಹಾಸನಾಂಬೆ ದರ್ಶನೋತ್ಸವದ ಐದನೇ ದಿನ ಇಡೀ ಹಾಸನ ನಗರ ಕಳೆಗಟ್ಟಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಹಾಸನಾಂಬೆ ದರ್ಶನ ಮಾಡಿ ಪುನೀತರಾದರು. ಕಳೆದ ವರ್ಷ ಕೊವಿಡ್ ಆತಂಕದಿಂದ ಹಾಸನಾಂಬೆ ನೇರ ದರ್ಶನಕ್ಕೆ ಅವಕಾಶ ಸಿಕ್ಕಿರಲಿಲ್ಲ. ಆದರೆ ಎರಡು ವರ್ಷಗಳ ಬಳಿಕ ಸಿಕ್ಕ ಅವಕಾಶದಿಂದಾಗಿ ಇಂದು ಭಾರೀ ಸಂಖ್ಯೆಯಲ್ಲಿ ಭಕ್ತರು ದೇವಿ ದರ್ಶನಪಡೆದರು.

ಬೆಳಿಗ್ಗೆಯಿಂದಲೂ ಕೂಡ ಸರತಿ ಸಾಲುಗಳು ತುಂಬಿ ತುಳುಕುತ್ತಿದ್ದು, ಶಿಸ್ತಿನಿಂದ ಸರತಿ ಸಾಲುಗಳಲ್ಲಿ ನಿಂತು ದೇವಿ ದರ್ಶನ ಪಡೆದರು. ಇನ್ನು ಸಾಮಾನ್ಯ ಭಕ್ತರ ಜೊತೆಗೆ ರಾಜಕೀಯ ನಾಯಕರು ಕೂಡ ಇಂದು ಹಾಸನಾಂಬೆಯ ದರ್ಶನ ಪಡೆದರು.

ಬಾಗಿಲು ಮುಚ್ಚೋವೇಳೆ ಹಚ್ಚಿಟ್ಟ ದೀಪ ಆರುವುದಿಲ್ಲ. ಹೂ ಬಾಡೋದಿಲ್ಲ ಎಂಬ ನಂಬಿಕೆ ಇಲ್ಲಿನ ಭಕ್ತರದ್ದು. ಈ ವರ್ಷ ಭಕ್ತರ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ದೇವಿಗೆ ದರ್ಶನಕ್ಕೆ ಅವಕಾಶ ನೀಡಿದ್ದು, ಈ ವರ್ಷ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಒಟ್ಟಿನಲ್ಲಿ ಶಕ್ತಿದೇವತೆ, ಅಧಿ ದೇವತೆ ಹಾಸನಾಂಬೆ ಮಹಿಮೆ ಮೇಲೆ ನಂಬಿಕೆಯಿಂದಲೇ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

Leave a Reply

Your email address will not be published. Required fields are marked *

error: Content is protected !!