ದಲಿತರ ಸ್ಮಶಾನ ಅಭಿವೃದ್ದಿಗೆ ನಿಗದಿಯಾದ ಅನುಧಾನ ಖರ್ಚು ಮಾಡಲು ತಾಕೀತು

ತುಮಕೂರು:ದಲಿತ ಸಮುದಾಯದ ಸ್ಮಶಾನಗಳ ಅಭಿವೃದ್ದಿಗೆಂದು ಮೀಸಲಿರಿಸಿದ ಹಣವನ್ನು ಖರ್ಚು ಮಾಡದೇ ದಲಿತರಿಗೆ ಅನ್ಯಾಯ ಮಾಡುತ್ತಿರುವುದು ಸರಿಯಲ್ಲ. ದಲಿತರಿಗೆ ಅನ್ಯಾಯವಾದರೆ ಸಹಿಸಲ್ಲ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಶಾರದ ನರಸಿಂಹಮೂರ್ತಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ನಡೆದ ಸಾಮಾನ್ಯ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಬೆಳ್ಳಾವಿ ಹೋಬಳಿಯ ಬಳ್ಳಾಪುರ ಗ್ರಾಮದ ದಲಿತರ ಸ್ಮಶಾನ ಅಭಿವೃದ್ದಿಗೆ 12 ಲಕ್ಷ ರೂಗಳನ್ನು ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಿತಿ ಕೇಂದ್ರ ಹಣ ನೀಡಿ 3 ವರ್ಷ ಕಳೆದರೂ ಅರ್ಧ ಕಾಮಗಾರಿ ಮಾಡಿ ನಿಲ್ಲಿಸಲಾಗಿದೆ.ಇತ್ತ ಸರಕಾರದಲ್ಲಿ ಹಣ ಇದ್ದಂತೆಯೂ ಇಲ್ಲ. ಅತ್ತ ದಲಿತರ ಸ್ಮಶಾನ ಅಭಿವೃದ್ದಿಯಾದಂತೆಯೂ ಇಲ್ಲ.ದಲಿತರೆಂದರೆ ಅಷ್ಟೊಂದು ನಿರ್ಲಕ್ಷವೇ ಎಂದು ಅಸಮಾಧಾನ ವ್ಯಕ್ತಪಡಿಸಿದ ಉಪಾಧ್ಯಕ್ಷರು,ಸದರಿ ಅಭಿವೃದ್ದಿ ಕಾಮಗಾರಿಗಳ ಜೊತೆಗೆ,ಮಲ್ಲಸಂದ್ರದಲ್ಲಿ ದಲಿತರ ಸ್ಮಶಾನ ಅಭಿವೃದ್ದಿಗೆ ಬಿಡುಗಡೆಯಾಗಿರುವ 14 ಲಕ್ಷ ರೂಗಳನ್ನು ಸಮರ್ಪಕವಾಗಿ ಖರ್ಚು ಮಾಡುವಂತೆ ನಿರ್ಮಿತಿ ಕೇಂದ್ರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಸಕ್ತ ಸಾಲಿನಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಗೆ ಅನಿರ್ಬಂಧಿತ ಅನುದಾನದಲ್ಲಿ ೪ ಕೋಟಿ ರೂಗಳು, 3054ರ ಲೆಕ್ಕಶೀರ್ಷಿಕೆಯಲ್ಲಿ 10 ಕೋಟಿ ಹಾಗೂ 2702 ಲೆಕ್ಕ ಶೀರ್ಷಿಕೆಯಲ್ಲಿ ೧ ಕೋಟಿ ಹಾಗೂ ವಿವಿಧ ಇಲಾಖೆಗಳ ಲಿಂಕ್ ಡಾಕ್ಯಮೆಂಟ್‌ನಲ್ಲಿ ಸುಮಾರು 02 ಕೋಟಿ ರೂಗಳ ಅನುದಾನ ದೊರೆತಿದೆ.ಈ ಎಲ್ಲಾ ಅನುದಾನದ ಕಾಮಗಾರಿಗಳು ಈಗಾಗಲೇ ಆರಂಭವಾಗಿದ್ದು,ಮಾರ್ಚ್ 15 ರೊಳಗೆ ಕಾಮಗಾರಿ ಪೂರ್ಣಗೊಳಿಸಿ,ಖಜಾನೆಗೆ ಹಣ ಬಿಡುಗಡೆಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ಉಪಾಧ್ಯಕ್ಷೆ ಶ್ರೀಮತಿ ಶಾರದ ನರಸಿಂಹಮೂರ್ತಿ ನೀಡಿದರು.

ಹವಾಮಾನ ಇಲಾಖೆಯ ವರದಿಯ ಪ್ರಕಾರ ಮುಂದಿನ ಮೂರು ತಿಂಗಳಗಳ ಕಾಲ ಬಿಸಿಲಿನ ಪ್ರಕರತೆ ಹೆಚ್ಚಾಗಲಿದೆ. ಹೀಗಾಗಿ ಜಿಲ್ಲಾ ಪಂಚಾಯಿತಿ ಗ್ರಾಮೀಣ ಕುಡಿಯುವ  ನೀರು ಮತ್ತು ನೈರ್ಮಲ್ಯ ಇಲಾಖೆ ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಕೊಳವೆ ಬಾವಿಗಳನ್ನು ಅಳಗೊಳಿಸುವುದು,ಟ್ಯಾಂಕರ್ ಮೂಲಕ ನೀರು ಸರಬರಾಜು ಇಂತಹ ಕಾರ್ಯಗಳಿಗೆ ಸದ್ದಾ ಸಿದ್ದರಾಗಿರಬೇಕಾಗುತ್ತದೆ.ಅದರಲ್ಲಿಯೂ ಬಾರಿ ಬೇಸಿಗೆಯಲ್ಲಿ ಶಾಲಾ ಕಾಲೇಜುಗಳು, ಅಂಗನವಾಡಿಗಳಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಉಪಾಧ್ಯಕ್ಷೆ ಶಾರದ ನರಸಿಂಹಮೂರ್ತಿ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.

ಜಿಲ್ಲೆಯ ಹಲವು ಕಡೆಗಳಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಓವರ್ ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಿ, ಎರಡು ಮೂರು ವರ್ಷಗಳೇ ಕಳೆದರೂ ಅವುಗಳಿಗೆ ನೀರು ತುಂಬಿಸುವ ಕೆಲಸ ಆಗಿಲ್ಲ. ಇದರಿಂದಾಗಿ ಇಡೀ ಯೋಜನೆಯ ಉದ್ದೇಶವೇ ವಿಫಲವಾಗಿದೆ.ಬೇಸಿಗೆಯ ವೇಳೆಗಾದರೂ ಈಗಾಗಲೇ ನಿರ್ಮಾಣಗೊಂಡಿರುವ ಓವರ್ ಹೆಡ್ ಟ್ಯಾಂಕುಗಳಿಗೆ ಕುಡಿಯುವ ನೀರು ತುಂಬಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದರು.

ಸಭೆಯಲ್ಲಿ ಸಾಮಾನ್ಯ ಸ್ಥಾಯಿ ಸಮಿತಿಯ ಸದಸ್ಯರಾದ ಡಾ.ನವ್ಯ ಬಾಬು, ನರಸಿಂಹಮೂರ್ತಿ, ಅನಿತಾಸಿದ್ದೇಗೌಡ ಹಾಗೂ ಸದಸ್ಯ ಕಾರ್ಯದರ್ಶಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

error: Content is protected !!