ತುಮಕೂರು: ದೇವಸ್ಥಾನದ ಗರ್ಭಗುಡಿಯಲ್ಲಿರುವ ವಿಗ್ರಹಗಳಿಗೆ ಕೋಳಿ ಮೊಟ್ಟೆ ಹೊಡೆದು ಅಪವಿತ್ರಗೊಳಿಸಿ ಭಕ್ತರ ಧಾರ್ಮಿಕ ಭಾವನೆಗಳಿಗೆ ದಕ್ಕೆಯುಂಟು ಮಾಡುತ್ತಿದ್ದ ಕಿಡಿಗೇಡಿಯನ್ನ ಪೊಲೀಸರು ಬಂದಿಸಿದ್ದಾರೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಘಟನೆ ನಡೆದಿದ್ದು ತಾಲ್ಲೂಕಿನ ಕಾಡೇನಹಳ್ಳಿ ನಿವಾಸಿ ಮಂಜುನಾಥ(29) ಎಂಬಾತನನ್ನ ಪೊಲೀಸರು ಬಂದಿಸಿದ್ದಾರೆ. ಮೂಲತಃ ಕುರುಬರಹಳ್ಳಿ ನಿವಾಸಿಯಾದ ಬಂದಿತ ಆರೋಪಿ ಮಂಜುನಾಥ ಕಾಡೇನಹಳ್ಳಿಯಲ್ಲಿ ವಾಸವಿದ್ದ ಕೂಲಿ ಕೆಲಸ ಮಾಡಿಕೊಂಡಿದ್ದ. ಕೆಲವು ದಿನಗಳಿಂದ ತಾಲ್ಲೂಕಿನ ವಿವಿಧ ದೇವಾಲಯಗಳಿಗೆ ತೆರಳಿ ಗರ್ಭಗುಡಿಯ ದೇವರ ವಿಗ್ರಹಗಳಿಗೆ ಕೋಳಿ ಮೊಟ್ಟೆ ಹೊಡೆದು ಯತ್ನಿಸಿ ವಿಕೃತಿ ಮೆರೆಯುತ್ತಿದ್ದ ಎಂದು ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ತಾಲ್ಲೂಕಿನ ಭಾವನಹಳ್ಳಿ ಶ್ರೀ ನಿರ್ವಾಣಸ್ವಾಮಿ ದೇವಸ್ಥಾನ ಹಾಗೂ ದಬ್ಬೇಘಟ್ಟ ಗ್ರಾಮದ ಶ್ರೀ ಮರುಳ ಸಿದ್ದೇಶ್ವರ ಸ್ವಾಮಿ ದೇವಸ್ಥಾನಗಳಲ್ಲಿ ಮೊಟ್ಟೆ ಹೊಡೆದು ವಿಕೃತಿ ಮೆರೆದಿದ್ದ, ಬಳಿಕ ಅ.8 ರಂದು ಗೋಡೆಕೆರೆ ಸಿದ್ದರಾಮೇಶ್ವರ ದೇವಸ್ಥಾನದ ವೀರಭದ್ರೇಶ್ವರ ಹಾಗೂ ಪಕ್ಕದಲ್ಲಿರುವ ಲಿಂಗಕ್ಕೆ ಮೊಟ್ಟೆ ಹೊಡೆದಿದ್ದ. ಇದನ್ನ ಗಮನಿಸಿದ ಗ್ರಾಮಸ್ಥರು ಆರೋಪಿ ಮಂಜುನಾಥನನ್ನ ಸಾಕ್ಷಿ ಸಮೇತ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿ ಮಂಜುನಾಥ ವಿರುದ್ದ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.