ಚಿಕ್ಕಣ್ಣದೇವರಹಟ್ಟಿ ಜಾತ್ರೆಯಲ್ಲಿ ಡಿ.ಸಿ.ಗೌರಿಶಂಕರ್ ಭಾಗಿ

ತುಮಕೂರು: ತಾಲ್ಲೂಕಿನ ಪ್ರಖ್ಯಾತ ಶ್ರೀ ಚಿಕ್ಕಣ್ಣ ಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಭಾಗವಹಿಸಿ, ಚಿಕ್ಕಣ್ಣ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಚಿಕ್ಕಣ್ಣ ದೇವರ ಹಟ್ಟಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಚಿಕ್ಕಣ್ಣ ಸ್ವಾಮಿ ಭಾಗದ ಜನರ ಆರಾಧ್ಯ ದೈವವಾಗಿದ್ದು, ವರ್ಷ ಉತ್ತಮ ಮಳೆ ಬೆಳೆಯಾಗಲಿ, ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.

ಚಿಕ್ಕಣ್ಣ ದೇವರಹಟ್ಟಿಯ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧನಾಗಿದ್ದು, ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ಈಗಾಗಲೇ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಯನ್ನು ಮಾಡಿದ್ದು, ಗ್ರಾಮಸ್ಥರು ಹಾಗೂ ಭಕ್ತಾದಿಗಳಿಗೆ ಅನುಕೂಲವಾಗಲೆಂದು ಶುದ್ಧಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದು, ಶೀಘ್ರವಾಗಿ ಘಟಕವನ್ನು ಸ್ಥಾಪಿಸುವುದಾಗಿ ಹೇಳಿದರು.

ಹೆಬ್ಬೂರು, ನಾಗವಲ್ಲಿ ಸೇರಿದಂತೆ ದೂರದ ಊರಗಳಿಂದ ಚಿಕ್ಕಣ್ಣಸ್ವಾಮಿ ದೇವರ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲವನ್ನು ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಬದ್ಧನಾಗಿದ್ದು, ಚಿಕ್ಕಣ್ಣ ದೇವರಹಟ್ಟಿಯನ್ನು ಉತ್ತಮ ಪ್ರವಾಸಿ ಸ್ಥಳವನ್ನಾಗಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.

ಹಿಂದುಳಿದಿರುವ ಯಾದವ ಸಮುದಾಯದ ಅಭಿವೃದ್ಧಿಗಾಗಿ ಕ್ಷೇತ್ರವನ್ನು ಗುಡಿಸಲು ಮುಕ್ತಗೊಳಿಸಲು ಸಹಕಾರ ನೀಡಬೇಕೆಂದು ಮನವಿ ಮಾಡಿದ ಅವರು ಕಂದಾಯ ಗ್ರಾಮಗಳನ್ನಾಗಿ ರೂಪಿಸುವ ಮೂಲಕ ಗೊಲ್ಲರ ಹಟ್ಟಿಗಳಿಗೆ ಮೂಲಸೌಕರ್ಯ ಒದಗಿಸಲು ಕ್ರಮವಹಿಸುವುದಾಗಿ ತಿಳಿಸಿದರು.

ವೇಳೆ ಚಿಕ್ಕಣ್ಣಹಟ್ಟಿ ದೇಗುಲದ ಪ್ರಧಾನರಾದ ಪಾಪಣ್ಣ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರಾಮಚಂದ್ರಪ್ಪ, ವೆಂಕಟೇಶ್‌ಗೌಡ, ಸಿರಾಕ್ ರವಿ, ಕೆ.ವಿ.ರಾಜು, ಬಳ್ಳಗೆರೆ ರಾಜು, ಗೋವಿಂದಪ್ಪ ಸೇರಿದಂತೆ ಜೆಡಿಎಸ್ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಶಾಲೆ ಉದ್ಘಾಟನೆ: ತುಮಕೂರು ಗ್ರಾಮಾಂತರ ಬೆಳ್ಳಾವಿಯಲ್ಲಿ ಸುಮಾರು 44 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತವಾದ ನೂತನ ಶಾಲಾ ಕಟ್ಟಡದ ಉದ್ಘಾಟನೆಯನ್ನು ತುಮಕೂರು ಗ್ರಾಮಾಂತರ ಜನಪ್ರಿಯ ಶಾಸಕರಾದ ಡಿಸಿ ಗೌರಿಶಂಕರ್ ರವರು ನೆರವೇರಿಸಿದರು.

ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳು ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಇರಬೇಕು, ರೈತಾಪಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕೆಂಬ ಸದುದ್ದೇಶದಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದು, ಇಂಗ್ಲೀಷ್ ಮಾಧ್ಯಮದಲ್ಲಿ ಮಕ್ಕಳು ಕಲಿಯಬೇಕು ಎಂಬ ಉದ್ದೇಶದಿಂದ ಆಂಗ್ಲ ಭಾಷಾ ಶಿಕ್ಷಕರಿಗೆ ವೇತನವನ್ನು ವೈಯಕ್ತಿಕವಾಗಿ ನೀಡಿದ್ದೇನೆ, ಮಕ್ಕಳು ಉತ್ತಮವಾಗಿ ಕಲಿಯುವ ಮೂಲಕ ಉನ್ನತ ಸ್ಥಾನವನ್ನು ಅಲಂಕರಿಸಬೇಕು ಎಂದು ಕರೆ ನೀಡಿದರು.

ಕೋವಿಡ್ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳು ಜಾಗರೂಕತೆಯನ್ನು ವಹಿಸಬೇಕಿದ್ದು, ಸಾಮಾಜಿಕ ಅಂತರ, ಸರ್ಕಾರದ ನಿಯಮಗಳನ್ನು ಪಾಲಿಸುವುದರೊಂದಿಗೆ ಇತರರನ್ನು ಪಾಲಿಸುವಂತೆ ಪ್ರೇರೇಪಿಸಬೇಕು, ಮನೆಗಳಲ್ಲಿ ಪೋಷಕರಿಗೆ ಕೋವಿಡ್ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ವೇಳೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರಾಮಚಂದ್ರಪ್ಪ, ಜಯಂತ್‌ಗೌಡ, ಹಿರೇಹಳ್ಳಿ ಮಹೇಶ್, ಉಮೇಶ್, ಕೆಂಪನರಸಯ್ಯ, ತಾ.ಪಂ.ಸದಸ್ಯ ಶಿವಣ್ಣ ಸೇರಿದಂತೆ ಇತರರಿದ್ದರು.

error: Content is protected !!