ತುಮಕೂರು: ದಲಿತ ಮಹಿಳೆ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾ ನ್ಯಾಯಾಲಯ 21 ಜನರಿಗೆ ಜೀವಾವಧಿ ಶಿಕ್ಷೆ ನೀಡಿ ಐತಿಹಾಸಿಕ ತೀರ್ಪು‌ ಪ್ರಕಟಿಸಿದೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಪಾಲಪುರ ಗ್ರಾಮದಲ್ಲಿ‌ 2010 ಜೂನ್ 28 ರಂದು ನಡೆದಿದ್ದ ದಲಿತ ಮಹಿಳೆ ಹೊನ್ನಮ್ಮ ಳ ಭೀಕರ ಹತ್ಯೆ ಪ್ರಕರಣ ಇಡೀ ರಾಜ್ಯಾದ್ಯಂತ ಗಮನ ಸೆಳೆದಿತ್ತು. ಹೊನ್ನಮ್ಮನ ಮನೆಯಲ್ಲಿ ಮರದ ತುಂಡುಗಳನ್ನ ಕಳ್ಳತನ ಮಾಡಿದ್ದಾರೆ ಎಂದು ಗ್ರಾಮಸ್ಥರ ಮೇಲೆ ಪೊಲೀಸ್ ಠಾಣೆಗೆ ಹೊನ್ನಮ್ಮ ದೂರು ನೀಡಿದ್ದರು. ಗ್ರಾಮಸ್ಥರ ಮೇಲೆ ದೂರು ನೀಡಿದರೆಂದು ದ್ವೇಷದಿಂದ ಗ್ರಾಮದ ಕೆಲವರು ಒಟ್ಟಾಗಿ ಸೇರಿ ಹೊನ್ನಮ್ಮಳ ಮೇಲೆ‌ ಹಲ್ಲೆ ನಡೆಸಿ, ಚರಂಡಿಗೆ ಹಾಕಿ ತಲೆ ಮೇಲೆ ಕಲ್ಲು ಚಪ್ಪಡಿಗಳನ್ನ ಹಾಕಿ ಬರ್ಬರವಾಗಿ ಹತ್ಯೆಗೈದಿದ್ದರು.

ಈ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಹೊನ್ನಮ್ಮಳ‌ ಸಂಬಂಧಿ ಕರಿಯಮ್ಮ ಗ್ರಾಮದ 27 ಜನರ ವಿರುದ್ದ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 27 ಜನರ ವಿರುದ್ಧ IPC1860(143,147, 148,302,149 ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ 1989 ರ ಸೆಕ್ಷನ್ 3 ಅಡಿ ಎಫ್ ಐ ಆರ್ ದಾಖಲಾಗಿತ್ತು. 14 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಇಂದು ತುಮಕೂರಿನ 3 ನೇ ಅಧಿಕ‌ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ ನಾಗೀರೆಡ್ಡಿ  ಜೀವಾವಧಿ‌ ಶಿಕ್ಷೆ ನೀಡಿ ಐತಿಹಾಸಿಕ ತೀರ್ಪು ಪ್ರಕಟಿಸಿದ್ದಾರೆ.‌ 27 ಜನರ ಪೈಕಿ 6 ಜನ ಮೃತ ಪಟ್ಟಿದ್ದು ಉಳಿದ 21 ಜನರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 13,500 ರೂ ದಂಡ ವಿಧಿಸಿದ್ದಾರೆ‌.

ಗೋಪಾಲಪುರ ಗ್ರಾಮದ 1.ರಂಗನಾಥ, 2.ಮಂಜುಳ, 3.ತಿಮ್ಮರಾಜು, 4.ರಾಜು (ದೇವರಾಜು), 5.ಶ್ರೀನಿವಾಸ್, 6.ಆನಂದ (ಆನಂದಸ್ವಾಮಿ), 7.ವೆಂಕಟಸ್ವಾಮಿ, 8.ವೆಂಕಟೇಶ್, 9.ನಾಗರಾಜು, 10.ರಾಜಪ್ಪ, 11.ಮೀಸೆ ಹನುಮಂತಯ್ಯ, 12.ಗಂಗಾಧರ (ಗಂಗಣ್ಣ), 13.ನಂಜುಂಡಯ್ಯ (ಪರಿಶಿಷ್ಟ ಜಾತಿ), 14.ಸತ್ಯಪ್ಪ- ಸತೀಶ (ಪರಿಶಿಷ್ಟ ಜಾತಿ), 15.ಚಂದ್ರಶೇಖರ (ಚಂದ್ರಯ್ಯ),16 ರಂಗಯ್ಯ (ರಾಮಯ್ಯ), 17.ಉಮೇಶ್, 18.ಚನ್ನಮ್ಮ, 19.ಮಂಜಣ್ಣ, 20.ಮಂಜು, 21.ಸ್ವಾಮಿ (ಮೋಹನ್ ಕುಮಾರ್) ಗೆ ಒಟ್ಟು 21 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಇನ್ನೂ ಹನುಮಂತಯ್ಯ (ಪರಿಶಿಷ್ಟ ಜಾತಿ),  ವೆಂಕಟೇಶ್‌, ರಾಮಯ್ಯ, ರಾಮಯ್ಯ, ದಾಸಪ್ಪ, ಬುಳ್ಳೆ ಹನುಮಂತಯ್ಯ ಮೃತಪಟ್ಟಿದ್ದಾರೆ.

ಹಂದನಕೆರೆ ಪೊಲೀಸ್ ಠಾಣೆಯ ಅಂದಿನ ಡಿವೈಎಸ್ಪಿ ಶಿವರುದ್ರಸ್ವಾಮಿ ನೇತೃತ್ವದ ತನಿಖಾ ತಂಡ ಆರೋಪಿಗಳ ವಿರುದ್ದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ಸರ್ಕಾರಿ‌ ಅಭಿಯೋಜಕಿ ಬಿ.ಎಸ್ ಜ್ಯೋತಿ ವಾದ ಮಂಡಿಸಿದ್ದರು.14 ವರ್ಷಗಳ ‌ಸುದೀರ್ಘ ವಿಚಾರಣೆ ನಡೆಸಿದ ತುಮಕೂರು 3ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿ ದಲಿತ ಮಹಿಳೆಯ ಭೀಕರ ಹತ್ಯೆಗೆ ನ್ಯಾಯ ದೊರಕಿಸಿಕೊಟ್ಟಿದೆ.

ನೀರು ಕೇಳಿದರು ಕೊಡದೇ ಚಪ್ಪಡಿ ಕಲ್ಲು ಎತ್ತಿ ಹಾಕಿ ಕೊಂದರು.

ಬಿಜೆಪಿ ಕಾರ್ಯಕರ್ತೆಯಾಗಿದ್ದ ಹೊನ್ನಮ್ಮ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಳು.‌‌‌ಜೊತೆಗೆ  ದೇವಸ್ಥಾನ, ಚರಂಡಿ ಇನ್ನಿತರೆ ಗ್ರಾಮದಲ್ಲಿ ಸಮಸ್ಯೆಗಳ ವಿರುದ್ದ ಧ್ವನಿಯೆತ್ತಿದ್ದರು. ಇದೇ ಕಾರಣಕ್ಕೆ ಗ್ರಾಮದಲ್ಲಿ ಹಲವರ ಜೊತೆ ಹೊನ್ನಮ್ಮ ವೈಶಮ್ಯ ಕಟ್ಟಿಕೊಂಡಿದ್ದರು. ಅಲ್ಲದೆ ಡಾಬಾ ನಡೆಸುತ್ತಿದ್ದ ಹೊನ್ನಮ್ಮನ ಮನೆಯಲ್ಲಿ ಶೇಖರಣೆ ಮಾಡಿದ್ದ ಮರದ ತುಂಡುಗಳು ಕಳುವಾಗಿದೆ ಎಂದು ಗ್ರಾಮಸ್ಥರ ವಿರುದ್ದ ಪೊಲೀಸರಿಗೆ ದೂರು‌ ನೀಡಿದ್ದಳು. ಇದರಿಂದ ಕೋಪಗೊಂಡು ಹೊನ್ನಮ್ಮಳ ಮೇಲೆ ಕೊಲೆ ಸಂಚು ರೂಪಿಸುತ್ತಾರೆ.

ಹುಳಿಯಾರಿಗೆ ಹೋಗಿದ್ದ ಹೊನ್ನಮ್ಮ ಗ್ರಾಮಕ್ಕೆ‌ ಸಂಜೆ 7 ಗಂಟೆಗೆ ಹಿಂತಿರುಗುತ್ತಾಳೆ. ಹೊನ್ನಮ್ಮಳನ್ನ ಹತ್ಯೆ ಮಾಡಲು ಗುಂಪು ಕಟ್ಟಿಕೊಂಡು ಹೊಂಚುಹಾಕಿ ಕಾಯುತ್ತಿದ್ದ ಗ್ರಾಮದ ಕೆಲವರು ಹೊನ್ನಮ್ಮ ಬರುತ್ತಿದ್ದಂತೆ ಏಕಾಏಕಿ‌ ಹಲ್ಲೆ ಮಾಡಿ ಕಪಾಳಕ್ಕೆ ಹೊಡೆದು ಕೆಳಗೆ ಬೀಳಿಸಿ ಬಳಿಕ ಕಲ್ಲು ಚಪ್ಪಡಿಗಳನ್ನ ಹೊನ್ನಮ್ಮಳ ಮೇಲೆ ಹಾಕಿ ಗಂಭೀರವಾಗಿ ಗಾಯಗೊಳಿಸುತ್ತಾರೆ. ಗಂಭೀರವಾಗಿ ಗಾಯಗೊಂಡು‌ ನಿತ್ರಾಣಗೊಂಡಿದ್ದ ಹೊನ್ನಮ್ಮ ಕುಡಿಯಲು ನೀರು ಕೊಡುವಂತೆ ಬೇಡಿಕೊಳ್ಳುತ್ತಾಳೆ. ಆದರೂ ನೀರು ಕೊಡದೆ ಮೃಗಗಳಂತೆ ವರ್ತಿಸಿ ಇನ್ನಷ್ಟು ಹಲ್ಲೆಗೆ ಮುಂದಾಗುತ್ತಾರೆ.

ಕೊಲೆಯಾದ ಹೊನ್ನಮ್ಮ.

ನನ್ನ ಪ್ರಾಣ ಉಳಿಸಿ, ಊರೇ ಬಿಟ್ಟು ಹೋಗುತ್ತೇನೆ ಎಂದು ಕೈ ಮುಗಿದು ಬೇಡಿಕೊಂಡರು ಬಿಡದೇ ಹೊನ್ನಮ್ಮಳನ್ನ ಚರಂಡಿಗೆ ಹಾಕಿ ಮನಸೋ ಇಚ್ಚೆ ಕಲ್ಲು ಚಪ್ಪಡಿಗಳನ್ನ ತಲೆಯ ಮೇಲೆ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ, ಇಂದು ಹೊನ್ನಮ್ಮನ ಕೊಲೆ ಅಪರಾಧಿಗಳಿಗೆ ಶಿಕ್ಷೆಯಾಗಿದ್ದು ಆಕೆಗೆ ಶಾಂತಿ‌ ಸಿಕ್ಕಿದೆ ಎಂದು ಸರ್ಕಾರಿ ಅಭಿಯೋಜಕಿ ಬಿ ಎಸ್ ಜ್ಯೋತಿ ತಿಳಿಸಿದರು.

ಸರ್ಕಾರಿ‌ ಅಭಿಯೋಜಕಿ ಬಿ ಎಸ್ ಜ್ಯೋತಿ.

ಜಾತಿಯನ್ನು ಲೆಕ್ಕಿಸದೇ ಸ್ನೇಹಿತೆಗೆ ನ್ಯಾಯ ಕೊಡಿಸಿದ ಮಿನಮ್ಮಾ..

ದಲಿತ ಮಹಿಳೆ ಹೊನ್ನಮ್ಮ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಮೀನಮ್ಮ ಈ ಪ್ರಕರಣದ ಐತಿಹಾಸಿಕ ತೀರ್ಪಿಗೆ ಕಾರಣೀಭೂತರು. ಹೊನ್ನಮ್ಮ ಹಾಗೂ ಮೀನಮ್ಮ( ಮೀನಾಕ್ಷಮ್ಮ) ಇಬ್ಬರು ಸ್ನೇಹಿತೆಯರಾಗಿದ್ದರು. ಇಬ್ಬರು ಸದಾ ಒಟ್ಟಿಗೆ ಇದ್ದು ಇವರ ತಂಟೆಗೆ ಹೊದರೆ ಜನ್ಮ ಜಾಲಾಡಿ ಬಿಡುತ್ತಿದ್ದರು. ಹಾಗಾಗಿ ಇವರು ಬಂದ್ರೆ ಗಂಡಸರು ತಲೆ ತಗ್ಗಿಸಿ ಸ್ಥಳದಿಂದ ಹೊರಟು ಬಿಡುತ್ತಿದ್ದರು. ಮಕ್ಕಳ ಮೇಲೆ ಅಷ್ಟೇ ತುಂಬಾ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದರು ಎಂದು ಮೀನಮ್ಮ ಹಾಗೂ ಹೊನ್ನಮ್ಮಳ ಸ್ನೇಹದ ಬಗ್ಗೆ ಶಿಕ್ಷೆಗೆ ಗುರಿಯಾದವರ ಸಂಭಂದಿಕರೇ ಹೇಳಿಕೊಳ್ಳುತ್ತಾರೆ. ಸ್ನೇಹಿತೆ ಹೊನ್ನಮ್ಮಳನ್ನ ಮೀನಮ್ಮನ ಮನೆಯ ಮುಂದೆಯೇ ಬರ್ಬರವಾಗಿ ಹತ್ಯೆ ಮಾಡುತ್ತಾರೆ.

ಮೃತ ಹೊನ್ನಮ್ಮಳ ಸೇಹಿತೆ ಮೀನಮ್ಮ.

ಸ್ನೇಹಿತೆ ಹೊನ್ನಮ್ಮಳ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಮೀನಮ್ಮನಿಗೆ ಒತ್ತಡ, ಬೆದರಿಕೆ, ಸಾಕ್ಷಿ ನಾಶ ಎಲ್ಲಾ ಪ್ರಯತ್ನವೂ ನಡೆಯುತ್ತದೆ. ಈ ಬಗ್ಗೆ ಹಲವು ಸಂಘಟನೆಗಳೂ ಸಾಕ್ಷಿ ರಕ್ಷಣೆ ಮಾಡುವಂತೆ ಹೋರಾಟ ಮಾಡಿ ಮೀನಮ್ಮನಿಗೆ ಸಾಥ್ ನೀಡುತ್ತವೆ. ಎಷ್ಟೇ ಒತ್ತಡ, ಬೆದರಿಕೆ ಬಂದರೂ ಜಗ್ಗದೆ ತನ್ನ ಜಾತಿಯರ ವಿರುದ್ದವೇ ಸಾಕ್ಷೀ ಹೇಳಿ ನ್ಯಾಯದ ಪರ ನಿಂತು ಸ್ನೇಹಿತೆಯ ಸಾವಿಗೆ ನ್ಯಾಯ ಕೊಡಿಸಿ ದಿಟ್ಟತನ ಮೆರೆದಿದ್ದಾರೆ ಮೀನಮ್ಮ.

ತುಮಕೂರು‌ ಜಿಲ್ಲೆಯ ಇತಿಹಾಸದಲ್ಲೆ‌ ಮೊದಲ ಭಾರಿಗೆ ಒಂದೇ ಪ್ರಕರಣದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

ವರದಿ: ಮಂಜುನಾಥ ಜಿ ಎನ್.

1 COMMENT

  1. ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆಗೆ ಗುರಿಪಡಿಸುತ್ತದೆ. ಹೈ ಕೋರ್ಟ್ ಅದನ್ನು ವಜಾಗೊಳಿಸಿ ಜಾಮೀನು ನೀಡುತ್ತದೆ. ಸುಪ್ರೀಂ ಕೋರ್ಟ್ ನಿರಪರಾಧಿ ಎಂದು ಕೇಸ್ ವಜಾ ಗೊಳಿಸುತ್ತದೆ ಅಷ್ಟರಲ್ಲಿ ಕೊಲೆಯಾದವಾರ ಪರಿವಾರದ ಮೊಮ್ಮಕ್ಕಳು ಕೇಸನ್ನು ನಡೆಸುತ್ತಿರುತ್ತಾರೆ. ಕೊಲೆ ಮಾಡಿದವರು ಇಬ್ಬರು ಇಲ್ಲ ಮೂರು ಜನ ಬದುಕಿರುತ್ತಾರೆ.

LEAVE A REPLY

Please enter your comment!
Please enter your name here