ಭ್ರಷ್ಟಾಚಾರ ತಡೆಗೆ ಜನತಾದರ್ಶನ ಸಹಕಾರಿ: ಡಿ.ಸಿ.ಗೌರಿಶಂಕರ್

ತುಮಕೂರು: ಖಾತೆ ಬದಲಾವಣೆ, ಪೌತಿ ಬದಲಾವಣೆ, ಸಂಧ್ಯಾಸುರಕ್ಷಾ ಯೋಜನೆ, ಪಿಂಚಣಿ, ಮನೆ, ನಿವೇಶನ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಹೊತ್ತು ಬಂದ ಸಾರ್ವಜನಿಕರಿಗೆ ಗ್ರಾಮಾಂತರ ಶಾಸಕರ ಡಿ.ಸಿ.ಗೌರಿಶಂಕರ್ ಅವರ ಜನತಾದರ್ಶನ ಪರಿಹಾರ ದೊರಕುವಂತೆ ಮಾಡಿದೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜನತಾದರ್ಶನದ ಪ್ರೇರಣೆಯಿಂದ ತುಮಕೂರು ಗ್ರಾಮಾಂತರ ಕ್ಷೇತ್ರದ ಜನರ ಸಮಸ್ಯೆಯನ್ನು ಬಗೆಹರಿಸುವುದರೊಂದಿಗೆ ಜನರನ್ನು ನೇರವಾಗಿ ತಲುಪಲು ಕೋವಿಡ್ ನಂತರ ಜನತಾದರ್ಶನ ಪ್ರಾರಂಭಿಸಿದ್ದು, ಜನತಾ ದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ಜನತಾ ದರ್ಶನದಲ್ಲಿ 1245 ವಿವಿಧ ಸಮಸ್ಯೆಯನ್ನು ಒಳಗೊಂಡ ಅರ್ಜಿಗಳು ಸಲ್ಲಿಕೆಯಾಗಿದ್ದು, ೫೦೦ಕ್ಕೂ ಹೆಚ್ಚು ಅರ್ಜಿಗಳನ್ನು ಸ್ಥಳದಲ್ಲಿ ಪರಿಹರಿಸಲಾಗಿದೆ ಎಂದು ಶಾಸಕ ಗೌರಿಶಂಕರ್ ತಿಳಿಸಿದರು.

ತಾಲ್ಲೂಕು ಕಚೇರಿಯಲ್ಲಿ ಸಣ್ಣಪುಟ್ಟ ಕೆಲಸಗಳಿಗಾಗಿ ಸಾರ್ವಜನಿಕರನ್ನು ಅಲೆದಾಡಿಸುತ್ತಿದ್ದು, ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ ಎನ್ನುವ ದೂರುಗಳು ಕೇಳಿಬಂದಿದ್ದು, ಭ್ರಷ್ಟಾಚಾರ ತಡೆಯಲು ಜನತಾದರ್ಶನ ಸಹಕಾರಿಯಾಗಿದ್ದು, ಸಾರ್ವಜನಿಕರು ಜನತಾ ದರ್ಶನದಲ್ಲಿ ಸಲ್ಲಿಸಿದ ಅರ್ಜಿಗಳಿಗೆ ತಿಂಗಳೊಳಗೆ ಪರಿಹಾರ ಕಂಡುಕೊಳ್ಳುವುದಲ್ಲದೇ, ಅರ್ಜಿ ಪೂರ್ಣಗೊಳ್ಳುವವರೆಗೆ ಶಾಸಕರ ಕಚೇರಿಯ ಸಿಬ್ಬಂದಿ ಗಮನಹರಿಸಲಿದ್ದಾರೆ, ಅರ್ಜಿಯ ಸ್ಥಿತಿಗತಿಯ ಬಗ್ಗೆ ಅರ್ಜಿದಾರರಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ಶಾಸಕರ ನಡಿಗೆ ಹಳ್ಳಿ ಕಡೆಗೆ ಎನ್ನುವ ಧ್ಯೇಯದೊಂದಿಗೆ ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರತಿ ಸೋಮವಾರ ಹೋಬಳಿ ಮಟ್ಟದಲ್ಲಿ ಜನತಾದರ್ಶನ ಹಾಗೂ ಪ್ರತಿ ತಿಂಗಳಿಗೊಮ್ಮೆ ತಾಲ್ಲೂಕು ಕಚೇರಿಯಲ್ಲಿ ಜನತಾದರ್ಶನವನ್ನು ಏರ್ಪಡಿಸಲಾಗುವುದು, ಜನತಾದರ್ಶನ ನಿರಂತರವಾಗಿ ನಡೆದರೆ ವರ್ಷದೊಳಗೆ ಕಂದಾಯ ಇಲಾಖೆ ಸಮಸ್ಯೆಗಳಿಂದ ತಾಲ್ಲೂಕು ಮುಕ್ತವಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಹೊನ್ನಸಂದ್ರ ಗ್ರಾಮಸ್ಥರು, 1974 ರಿಂದ ಮನೆಕಟ್ಟಿಕೊಂಡು ವಾಸ ಮಾಡುತ್ತಿದ್ದು, ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರು ಸಹ ಗ್ರಾಮ ಲೆಕ್ಕಿಗ ಶಿವಕುಮಾರ್ ಅವರು ಇಲ್ಲಸಲ್ಲದ ನೆಪ ಹೇಳಿಕೊಂಡು, ಒಂದು ವರ್ಷದಿಂದ ಅಲೆಸುತ್ತಿದ್ದಾರೆ. ಅಕ್ರಮ ಸಕ್ರಮ ಯೋಜನೆಯಡಿ ಅರ್ಹರಾಗಿದ್ದರು ಸಹ ಗ್ರಾಮ ಲೆಕ್ಕಿಗರು, ತಹಶೀಲ್ದಾರ್ ಅವರಿಗೆ ವರದಿ ಸಲ್ಲಿಸುತ್ತಿಲ್ಲ, ಗ್ರಾಮ ಪಂಚಾಯತಿಯಿಂದ ಮನೆಗಳಿಗೆ ವಿದ್ಯುತ್, ನೀರಿನ ಸೌಲಭ್ಯ ನೀಡಿದ್ದರು ಸಹ ಅಲೆಸುತ್ತಿದ್ದಾರೆ ಎಂದು ದೂರಿದರು.

ಗ್ರಾಮ ಲೆಕ್ಕಿಗ ಶಿವಕುಮಾರ್ ಅವರನ್ನು ಸ್ಥಳಕ್ಕೆ ಕರೆಸಿದ ಶಾಸಕರು, ಹೊನ್ನಸಂದ್ರದ ಗ್ರಾಮಸ್ಥರಿಗೆ 15 ದಿನದಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ಖಾತೆಯನ್ನು ಮಾಡಿಕೊಡಬೇಕು, ಹಣ ಬೇಕಿದ್ದರೆ ನಾನೇ ಕೊಡುತ್ತೇನೆ ಎಂದು ತಾಕೀತು ಮಾಡಿದ ಶಾಸಕರು, ತಹಶೀಲ್ದಾರ್ ಮೋಹನ್ ಕುಮಾರ್ ಅವರಿಗೆ ಈ ಸಮಸ್ಯೆಯನ್ನು ವೈಯಕ್ತಿಕವಾಗಿ ತೆಗೆದುಕೊಂಡು ಬಗೆಹರಿಸುವಂತೆ ಸೂಚಿಸಿದರು.

ಭ್ರಷ್ಟ ಅಧಿಕಾರಿಗಳಿಗೆ ತರಾಟೆ.

ಹೊನ್ನುಡಿಕೆ ಕಲ್ಲುಪಾಳ್ಯ ಶೆಟ್ಟಾಳಯ್ಯ ಎಂಬುವರು, ಖಾತೆ, ಪಹಣಿ ಮಾಡಿಸಿಕೊಡಲು ಗ್ರಾಮ ಲೆಕ್ಕಿಗ ಪ್ರವೀಣ್ ಮೂರು ವರ್ಷದ ಹಿಂದೆ 50 ಸಾವಿರ ಹಣವನ್ನು ಪಡೆದುಕೊಂಡಿದ್ದು, ಕೆಲಸವನ್ನು ಮಾಡಿಕೊಡುತ್ತಿಲ್ಲ, ಹಣವನ್ನು ನೀಡುತ್ತಿಲ್ಲ ಎಂದು ಶಾಸಕರಿಗೆ ದೂರು ನೀಡಿದರು. ಶಾಸಕ ಗೌರಿಶಂಕರ್ ಅವರು, ಪ್ರವೀಣ್ ಅವರನ್ನು ಸ್ಥಳಕ್ಕೆ ಕರೆಸುವಂತೆ ತಹಶೀಲ್ದಾರ್ ಮೋಹನ್‌ಕುಮಾರ್ ಅವರಿಗೆ ಸೂಚಿಸಿದರು ಸಹ, ಪ್ರವೀಣ್ ಜನತಾದರ್ಶನಕ್ಕೆ ಬರಲಿಲ್ಲ, ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಇನ್ನೊಂದು ತಿಂಗಳಲ್ಲಿ ಖಾತೆ, ಪಹಣಿ ಮಾಡಿಕೊಡಬೇಕು, 50 ಸಾವಿರಕ್ಕೆ ಬಡ್ಡಿಯನ್ನು ಸೇರಿಸಿ ಕೊಡಿಸುವಂತೆ ತಹಶೀಲ್ದಾರ್‌ಗೆ ತಾಕೀತು ಮಾಡಿದರು.

ಹೆತ್ತೇನಹಳ್ಳಿ ಗ್ರಾಮದ ಮಾಜಿ ಸೈನಿಕ ನಟರಾಜ್ ಅವರು ಭೂಮಿ ಮಂಜೂರು ಮಾಡುವಂತೆ ಶಾಸಕರಿಗೆ ಸಲ್ಲಿಸಿದ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ ಅವರು ೧೫ ದಿನದಲ್ಲಿ ಮಾಜಿ ಸೈನಿಕ ನಟರಾಜ್ ಅವರಿಗೆ ಕಾನೂನು ಪ್ರಕಾರ ನೀಡಬೇಕಾಗಿರುವ ಭೂಮಿಯನ್ನು ಮಂಜೂರು ಮಾಡುವಂತೆ ತಹಶೀಲ್ದಾರ್ ಮೋಹನ್‌ಕುಮಾರ್ ಹಾಗೂ ಸಂಬಂಧಪಟ್ಟ ಕಂದಾಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಕೌತಮಾರನಹಳ್ಳಿ ಗ್ರಾಮದ ವೃದ್ಧೆ ಜಯಮ್ಮ ಎಂಬುವರು, ಮನೆ ಮಂಜೂರು ಮಾಡುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು, ನನ್ನ ಮಗನಿಗೆ ಪೊಲೀಯೋ ಆಗಿದ್ದು, ಮಳೆಯಿಂದಾಗಿ ಮನೆ ಬೀಳುವ ಹಂತದಲ್ಲಿದ್ದು, ಅಜ್ಜ-ಮಗನೊಂದಿಗೆ ಮನೆಯ ಹೊರಗೆ ಬದುಕುತ್ತಿದ್ದೇನೆ, ಮನೆ ಮಂಜೂರು ಮಾಡುವಂತೆ ಒಂದು ವರ್ಷದ ಹಿಂದೆಯೇ ಅರ್ಜಿ ಸಲ್ಲಿಸಿದ್ದೇ, ಈಗ ಪಿಂಚಣಿಯೂ ನಿಂತು ಹೋಗಿದೆ ಎಂದು ಅಳಲು ತೋಡಿಕೊಂಡಿದ್ದರು

ಜಯಮ್ಮ ಅವರನ್ನು ಸಂತೈಸಿದ ಶಾಸಕರು, ಮನೆ ಮಂಜೂರು ಮಾಡಿಸುವ ಜವಾಬ್ದಾರಿ ನನ್ನದು, ಅಧಿಕಾರಿಗಳು ನಿಂತಿರುವ ಪಿಂಚಣಿಯನ್ನು ಮಂಜೂರು ಮಾಡಿಕೊಡುವಂತೆ ಸೂಚಿಸಿದರು. ಜನತಾದರ್ಶನದಲ್ಲಿ 2000 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಮುಖಂಡರಾದ ರಾಮಚಂದ್ರಪ್ಪ, ಹಾಲನೂರು ಅನಂತ್‌ಕುಮಾರ್, ಹಿರೇಹಳ್ಳಿ ಮಹೇಶ್, ಸುವರ್ಣಗಿರಿ ಕುಮಾರ್, ಗಂಗಣ್ಣ, ಪಾಲಾಕ್ಷಯ್ಯ, ನರುಗನಹಳ್ಳಿ ವಿಜಯಕುಮಾರ್, ಉಮೇಶ್ ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!