ತುಮಕೂರು : ಜಿಲ್ಲೆಯ ಕುಣಿಗಲ್ ತಾಲ್ಲೂಕು ಹುಲಿಯೂರು ದುರ್ಗ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಆರ್. ವಿನಾಯಕ ಅವರು ಸುಳ್ಳು ದಾಖಲೆ ಸೃಷ್ಟಿಸಿ ವಂಚಿಸಿದ್ದಾರೆ ಎಂಬ ಸಾರ್ವಜನಿಕರ ಆರೋಪಕ್ಕೆ ಸಂಬಂಧಿಸಿದಂತೆ ಉಪ ಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ವಿನಾಯಕ ಅವರನ್ನು ಪ್ರಶ್ನಿಸಿದಾಗ ಸರಿಯಾದ ರೀತಿಯಲ್ಲಿ ದಾಖಲೆ ನೀಡದೆ ಉತ್ತರ ನೀಡಲು ತಡವರಿಸಿದ ಪ್ರಸಂಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆಯಿತು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೋಕಾಯುಕ್ತ ಪ್ರಕರಣಗಳ ತನಿಖೆ ಮತ್ತು ವಿಲೇವಾರಿ ಸಭೆಯಲ್ಲಿ ಈ ಪ್ರಸಂಗ ಜರುಗಿತು. ದೂರುದಾರರು ಮತ್ತು ಪ್ರತಿ ದೂರುದಾರರ ಸಮ್ಮುಖದಲ್ಲಿ ಪ್ರಕರಣಗಳ ವಿಚಾರಣೆ ನಡೆಸಿ, ಪಿಡಿಓ ವಿನಾಯಕ ಅವರಿಗೆ ಎಚ್ಚರಿಕೆ ನೀಡಿದ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಸಾರ್ವಜನಿಕ ಸೇವೆಯಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ವಂಚಿಸುವುದು ಅಪರಾಧ. ಇಂತಹ ಅಪರಾಧಗಳನ್ನು ಲೋಕಾಯುಕ್ತ ಸಹಿಸುವುದಿಲ್ಲ. ಸಾರ್ವಜನಿಕರನ್ನು ವಂಚಿಸುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು.

ಕಾನೂನು ತೊಡಕಿಲ್ಲದ ಅರ್ಜಿಗಳನ್ನು ವಿಳಂಬ ಮಾಡದೆ ಶೀಘ್ರವಾಗಿ ವಿಲೇವಾರಿ ಮಾಡಬೇಕು. ಸಕಾರಣವಿಲ್ಲದೆ ಸಾರ್ವಜನಿಕರನ್ನು ಸರ್ಕಾರಿ ಕಚೇರಿಗೆ ಅಲೆದಾಡಿಸಬಾರದು. ಅಗತ್ಯ ದಾಖಲೆಗಳಿಲ್ಲದೆ ಕಾನೂನು ಬಾಹಿರವಾಗಿ ಖಾತೆ ಮಾಡಿ ಕೊಟ್ಟಿರುವ ದೂರುಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ವೀಕೃತವಾಗಿವೆ. ನಿಯಮಗಳನ್ನು ಮೀರಿ ಇಷ್ಟ ಬಂದಂತೆ ಕರ್ತವ್ಯ ನಿರ್ವಹಿಸುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಮಧುಗಿರಿ ತಾಲ್ಲೂಕಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಅನುದಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ಸಲ್ಲಿಕೆಯಾಗಿದ್ದ ದೂರನ್ನು ಪರಿಶೀಲಿಸಿದ ಅವರು ಸುವರ್ಣ ಸನಿವಾಸ ಪ್ರೌಢಶಾಲೆಯು ನೋಂದಣಿಯಾಗದೆ ಸರ್ಕಾರಿ ಅನುದಾನವನ್ನು ಬಳಸಿಕೊಳ್ಳುತ್ತಿದೆ. ಕೂಡಲೇ ಸಂಸ್ಥೆಯ ವಿರುದ್ಧ ಕ್ರಮ ಕೈಗೊಂಡು ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ದಾಖಲಿಸುವ ವ್ಯವಸ್ಥೆ ಮಾಡಬೇಕು ಎಂದು ಮಧುಗಿರಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಲೋಕಾಯುಕ್ತದ ವಿವಿಧ ಅಧಿಕಾರಿಗಳು, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮಹಾ ನಗರ ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ಎಲ್ಲಾ ತಾಲ್ಲೂಕಿನ ತಹಶೀಲ್ದಾರರು, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here