ಜ.3 ರಿಂದ 15 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಅಭಿಯಾನ: ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಜ.3 ರಿಂದ 15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿಯಾನ ಹಾಗೂ ಜನವರಿ 10 ರಿಂದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ ಸಹ ಅಸ್ವಸ್ಥತೆ ಹೊಂದಿರುವ 60 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ ಲಸಿಕೆ ನೀಡಲು ಕೆಲವು ನಿಬಂಧನೆಗಳನ್ನು ವಿಧಿಸಿ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.

ಇತ್ತೀಚಿಗೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ನಿರ್ದೇಶಿಸಿದಂತೆ ಈ ಮಾರ್ಗಸೂಚಿಗಳನ್ನು ಕೈಗೊಳ್ಳಲಾಗಿದೆ ಎಂದು ಅಭಿಯಾನ ನಿರ್ದೇಶಕಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಅರುಂಧತಿ ಅವರು ತಿಳಿಸಿದ್ದಾರೆ.

15 ರಿಂದ 18 ವರ್ಷದೊಳಗಿನ ಹೊಸ ಫಲಾನುಭವಿಗಳಿಗೆ ಹೊಸ ನಿಬಂಧನೆಗಳು ಇಂತಿದೆ.

* 2007ನೇ ಇಸವಿಯಲ್ಲಿ ಜನಿಸಿರುವ ಮತ್ತು 2007ನೇ ಇಸವಿಗೂ ಮುನ್ನ ಜನಿಸಿರುವ ಮಕ್ಕಳು ಕೋವಾಕ್ಸಿನ್ ಲಸಿಕೆ ಪಡೆಯಲು ಅರ್ಹರಿರುತ್ತಾರೆ. ಈ ಮಕ್ಕಳಿಗೆ ಈಗಾಗಲೇ ಚಾಲ್ತಿಯಲ್ಲಿರುವಂತೆ ಕೋವಾಕ್ಸಿನ್ ಲಸಿಕೆ 2 ಡೋಸ್ ಲಸಿಕೆಯನ್ನು 28 ದಿನಗಳ ಅಂತರದಲ್ಲಿ ನೀಡಲಾಗುತ್ತದೆ.

* ಲಸಿಕಾಕರಣಕ್ಕೆ ಮುನ್ನ ಮಕ್ಕಳ ಪೋಷಕರಿಗೆ ವಿಶೇಷ ಜಾಗೃತಿ ಸಭೆಗಳನ್ನು ನಡೆಸಿ ಲಸಿಕಾಕರಣದ ಮಹತ್ವ ಮತ್ತು ಅವಶ್ಯಕತೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಅವರ ಸಂದೇಶಗಳನ್ನು ನಿವಾರಿಸುವುದು

* ಫಲಾನುಭವಿ ಮತ್ತು ಮಕ್ಕಳು ಸ್ವಂತ ದೂರವಾಣಿ ಸಂಖ್ಯೆ ಬಳಸಿ ಅಥವಾ ಕೋವಿನ್ ನಲ್ಲಿ ಈಗಾಗಲೇ ಇರುವ ತಂದೆ-ತಾಯಿಗಳ ಪೋಷಕರ ಅಕೌಂಟ್ ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಇದು ಯಾವುದೂ ಲಭ್ಯವಿಲ್ಲದಿದ್ದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರ ದೂರವಾಣಿ ಸಂಖ್ಯೆ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

* ಕೋವಿಡ್-19 ಲಸಿಕಾಕರಣ ಪ್ರಕ್ರಿಯೆಗಾಗಿ ಶಾಲೆಯ ಗುರುತಿನ ಚೀಟಿ ಅಥವಾ ಆಧಾರ್ ಬಳಸಿ ಫೋಟೋ ಐಡಿಯನ್ನು ಹಾಜರುಪಡಿಸಬೇಕು

* ಅಸ್ವಸ್ಥತೆ ಹೊಂದಿರುವ ಮಕ್ಕಲಿಗೆ ಲಸಿಕೆ ನೀಡಲು ಪೋಷಕರ ಸಹಮತ ಅಗತ್ಯ. ಆರೋಗ್ಯ ಕೇಂದ್ರಗಳಲ್ಲಿಯೇ ವೈದ್ಯರಿಂದ ಮೇಲ್ವಿಚಾರಣೆ ನಡೆಸಬೇಕು
* ಶಿಕ್ಷಣ ಸಂಸ್ಥೆಗಳಲ್ಲಿ ಲಸಿಕೆ ಪಡೆಯದವರನ್ನು ಗುರುತಿಸಿ, ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಿಸಲು ವ್ಯವಸ್ಥೆ ಮಾಡಬೇಕು
* ಖಾಸಗಿ ಶಾಲೆಗಳು ಇಷ್ಟಪಟ್ಟಲ್ಲಿ ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಲಸಿಕಾ ಅಭಿಯಾನ ಕೈಗೊಳ್ಳಲು ಅವಕಾಶ ನೀಡಬಹುದು.

* ಎಲ್ಲಾ ಹಂತಗಳಲ್ಲಿ ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದರೊಂದಿಗೆ ಕೋವಿಡ್-19 ಲಸಿಕಾಕರಣದ ಮಾರ್ಗೂಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ಬೂಸ್ಟರ್ ಡೋಸ್: ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಹಾಗೂ ಸಹ ಅಸ್ವಸ್ಥತೆ ಹೊಂದಿದ 60 ವರ್ಷ ಮೇಲ್ಪಟ್ಟ ನಾಗರಿಕರು ಈಗಾಗಲೇ ಅಸ್ತಿತ್ವದಲ್ಲಿರುವ ತಮ್ಮ ಕೋವಿನ್ ಅಕೌಂಟ್ ಮೂಲಕ ಲಸಿಕೆ ಪಡೆಯಬಹುದಾಗಿದೆ.

error: Content is protected !!