ಪರಿಷತ್ ಚುನಾವಣೆ; ಸಿಗ್ತಿಲ್ಲ ಗೆಲುವಿನ ಪಕ್ಕಾಲೆಕ್ಕ, ಗೆಲ್ಲೋದ್ಯಾರು?:

ತುಮಕೂರು: ಪ್ರತಿಷ್ಠೆಯಿಂದ ನಡೆದ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಚುನಾವಣೆಯ ಮತದಾನ ಮುಗಿದಿದ್ದು, ಇದೀಗ ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ.

ಹೌದು, ಪರಿಷತ್ ಚುನಾವಣೆಯಲ್ಲಿ ಒಟ್ಟು ಏಳು ಜನ ಅಭ್ಯರ್ಥಿಗಳು ಕಣದಲ್ಲಿದ್ದರಾದರೂ ಪರಸ್ಪರ ಅತ್ಯಂತ ಪ್ರತಿಷ್ಠೆಯಿಂದ ಕಣದಲ್ಲಿದ್ದವರು ಮೂವರು ಮಾತ್ರ.
ಇನ್ನೂ ಪಕ್ಷೇತರರ ಅಭ್ಯರ್ಥಿಗಳು ಕಣದಲ್ಲಿದ್ದರೆ ಹೊರತು, ಗೆಲುವಿನ ಉಮೇದಿಯಿಂದಲ್ಲ ಎಂಬುದು ಕೆಲವರ ಅಭಿಪ್ರಾಯ.

ತ್ರಿಕೋನ ಸ್ಪರ್ಧೆಯಲ್ಲಿ ಗೆಲ್ಲೋದ್ಯಾರು?:

ವಿಧಾನ ಪರಿಷತ್‌ ಚುನಾವಣೆ ತ್ರಿಕೋನ ಸ್ಪರ್ಧೆಯಾಗಿ ಏರ್ಪಟ್ಟಿತ್ತು. ರಾಜಕೀಯ ಅಂದಾಕ್ಷಣ ಹಣಬಲ, ರಾಜಕೀಯ ಬಲ, ಜಾತಿ ಬಲ ಇದೆಲ್ಲವೂ ಇರುವುದು ಸಹಜ. ಆದರೆ, ಕಳೆದ 2015ರ ಬಳಿಕ ರಾಜಕೀಯ ತಂತ್ರಗಾರಿಕೆಯ ವರಸೆಗಳೂ ಬದಲಾಗಿವೆ. ವೈಯಕ್ತಿಕ ಟೀಕೆಗಳು ಗಾಸಿಫ್ ಬಾಗಿಲೂ ತಟ್ಟುತ್ತಿವೆ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಗುಣವಂತರೆಲ್ಲ, ಈಗಿನ ರಾಜಕೀಯ ಮತ್ತು ತಂತ್ರಗಾರಿಕೆ ಕುರಿತು ಕೊಂಚ ಬೇಸರಗೊಂಡಿದ್ದಾರೆ. ಚುನಾವಣೆ ಅಂದಾಕ್ಷಣ ಗೆಲುವಿಗಾಗಿ ಯಾವ ಹಂತದ ತಂತ್ರಗಾರಿಕೆ ಕೂಡ ನಡೆಯುತ್ತವೆ ಎಂಬುದು ಕಳೆದ 2018ರ ಚುನಾವಣೆಯಿಂದ ಸ್ಪಷ್ಟವಾಗಿ ಗೋಚರಿಸುತ್ತಲೇ ಇದೆ. ಅದೆಲ್ಲ ಒಂದೆಡೆ ಇರಲಿ. ಈ ಬಾರಿಯ ಪರಿಷತ್‌ ಚುನಾವಣೆಯೂ ಕಳೆದ ಬಾರಿಯಂತೆ ತ್ರಿಕೋನ ಸ್ಪರ್ಧೆಯಾಗಿತ್ತು

ಹಣವಂತರ ಚುನಾವಣೆ ಎಂದ ಗುಣವಂತರು!:

ಗೆದ್ದವರೆಲ್ಲ ಸೇರಿ ಒಬ್ಬರನ್ನು ಗೆಲ್ಲಿಸುವ ಚುನಾವಣೆಯೇ ಈ ವಿಧಾನ ಪರಿಷತ್‌ ಚುನಾವಣೆ. ಗ್ರಾಪಂ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಂಸದರು, ಶಾಸಕರು, ವಿಧಾನಪರಿಷತ್‌ ಸದಸ್ಯರು ಇಲ್ಲಿ ಮತದಾರರು. ಇವರೆಲ್ಲ ತಮ್ಮ ತಮ್ಮಚುನಾವಣೆಯಲ್ಲಿ ಗೆಲ್ಲಲು ಮಾಡಿದ ಪ್ರಯಾಸವೇ ಈಗಿನ ಅಭ್ಯರ್ಥಿಗಳೂ ಮಾಡುವುದು ಸಹಜ.

ಗ್ರಾಪಂ ಸದಸ್ಯರು, ತಮ್ಮ ವಾರ್ಡ್‌ನಲ್ಲಿ ಆಯ್ಕೆಯಾಗಲು ಸಾಕಷ್ಟು ತನು-ಮನ-ಧನ ಹಾಕಿರುತ್ತಾರೆ. ಹೀಗಾಗಿ ಪರಿಷತ್‌ ಚುನಾವಣೆಯಲ್ಲಿ ಅವರೂ ಒಂದಷ್ಟು ನಿರೀಕ್ಷೆ ಇಟ್ಟುಕೊಳ್ಳುವುದು ಸಹಜ. ಇದೆಲ್ಲದರ ಮಧ್ಯೆ ಪಕ್ಷನಿಷ್ಠೆ, ಪ್ರತಿಷ್ಠೆಗಳೂ ಇಲ್ಲಿ ಅತಿಹೆಚ್ಚು ಲೆಕ್ಕಕ್ಕೆ ಬರುತ್ತವೆ.

ಒಟ್ಟಾರೆ ಮೂವರಲ್ಲಿ ಪ್ರಬಲ ಪೈಪೋಟಿಯ ಚುನಾವಣೆ ಮುಗಿದಿದೆ. ಮತದಾನೋತ್ತರ ಗೆಲುವಿನ ಲೆಕ್ಕಾಚಾರದ ಮಾತು ಜೋರಾಗಿ ಕೇಳಿ ಬರುತ್ತಿವೆ. ಮೂವರು ಅಭ್ಯರ್ಥಿಗಳೂ ತಮ್ಮ ಪರವಾಗಿ ತಾಲೂಕುವಾರು ಬರಲಿರುವ ಮತಗಳ ಲೆಕ್ಕಮಾಡಿಕೊಂಡು, ಫಲಿತಾಂಶದ ದಿನಕ್ಕಾಗಿ ಕಾಯುತ್ತಿದ್ದಾರೆ. ಒಂದಂತೂ ಸತ್ಯ, ಗುಣವಂತರು ಹೇಳುವಂತೆ, ಇದು ಹಣವಂತರ ಚುನಾವಣೆ

ಸೋಲು ಗೆಲುವಿನ ಲೆಕ್ಕಾಚಾರ:

ಕೆಲ ಅಭ್ಯರ್ಥಿಗಳು ಬೆಂಬಲಿಗರು ಮತ್ತು ಕಾರ್ಯಕರ್ತರೊಂದಿಗೆ ಸೇರಿ ಕ್ಷೇತ್ರದಲ್ಲಿ ಸ್ಥಾಪನೆಯಾಗಿದ್ದ ಬೂತ್‌ಗಳಲ್ಲಿ ನಡೆದಿರುವ ಶೇಕಡವಾರು ಮತದಾನ ಪ್ರಮಾಣ ಹಾಗೂ ಯಾವ ಮತದಾರರು ಮತದಾನ ಮಾಡಿದ್ದಾರೆ ಎಂಬ ಪಟ್ಟಿ ಹಿಡಿದು ಗೆಲವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಅಭ್ಯರ್ಥಿ ಬೆಂಬಲಿಗರಿಂದ ದೇವರ ಮೊರೆ :

ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೂ ಮುನ್ನಾ ಗೆಲವಿಗೆ ಪ್ರಾರ್ಥಿಸಿ ದೇವರ ಮೊರೆ ಹೋಗಿದ್ದರು. ಇದೀಗ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿ ಹಾಗೂ ಅವರ ಬೆಂಬಲಿಗರು ಮತದಾನ ಮುಗಿಯುತ್ತಿದ್ದಂತೆ ದೇಗುಲಕ್ಕೆ ಭೇಟಿ ನೀಡಿ ಆಶೀರ್ವಾದ ಬೇಡುತ್ತಿದ್ದಾರೆ.

ಬೆಟ್ಟಿಂಗ್‌ ಜೋರು

ವಿಧಾನ ಪರಿಷತ್‌ ಚುನಾವಣೆಯ ಸೋಲು ಗೆಲುವಿನ ಚರ್ಚೆಗಳು, ಊಹಾಪೋಹದ ಮಾತುಗಳ ಜತೆಗೆ ಬೆಟ್ಟಿಂಗ್‌ ಕೂಡ ಜೋರಾಗಿಯೇ ನಡೆದಿದೆ.

ಚುನಾವಣೆಯಲ್ಲಿ ಇಂತಹ ಅಭ್ಯರ್ಥಿಯೇ ಗೆಲ್ಲುತ್ತಾರೆ. ಈ ಅಭ್ಯರ್ಥಿಯು ಇಷ್ಟೇ ಮತಗಳ ಅಂತರದಲ್ಲಿ ಪರಾಭವಗೊಳ್ಳುತ್ತಾರೆ ಎಂಬ ಇತ್ಯಾದಿ ವಿಚಾರಗಳ ಲೆಕ್ಕಾಚಾರದ ಮೇಲೆ ಬೆಟ್ಟಿಂಗ್‌ ನಡೆಯುತ್ತಿದೆ. ಅಭ್ಯರ್ಥಿಗಳು ಬೆಟ್ಟಿಂಗ್‌ ಆಡುವವರ ಪಾಲಿಗೆ ರೇಸ್‌ ಕುದುರೆಯಾಗಿದ್ದಾರೆ.

ಫಲಿತಾಂಶ ಬಂದಾಗ ಯಾರು ಗೆಲ್ಲುತ್ತಾರೋ ಗೊತ್ತಿಲ್ಲ. ಆದರೆ, ಈಗ ಬೆಟ್ಟಿಂಗ್‌ ಆಡುವವರ ಪಾಲಿಗಂತೂ ಇವರ ಗೆಲ್ಲುವ ಫೇವರೆಟ್‌ ಅಭ್ಯರ್ಥಿಗಳಾಗಿದ್ದಾರೆ.

error: Content is protected !!