ಸ್ಮಾರ್ಟ್‌ಸಿಟಿ ನಗರಪಾಲಿಕೆ ಆಡಳಿತದಲ್ಲಿ ಭ್ರಷ್ಟಾಚಾರ:ಎಸ್.ಶಿವಣ್ಣ ಆರೋಪ

ತುಮಕೂರು:ತುಮಕೂರು ಮಹಾನಗರಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿ ವತಿಯಿಂದ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳು ಸಂಪೂರ್ಣ ಕಳಪೆ ಗುಣಮಟ್ಟದ್ದಾಗಿದ್ದು, ಸಾಕಷ್ಟು ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ.ಈ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ,ಜನಾಂದೋಲನ ರೂಪಿಸುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ದ ಹೋರಾಟ ರೂಪಿಸುವುದಾಗಿ ಮಾಜಿ ಮಂತ್ರಿ ಸೊಗಡು ಶಿವಣ್ಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಪಾಲಿಕೆಯಲ್ಲಿ ನಾಗರಿಕರಿಗೆ ಯಾವ ಕೆಲಸಗಳು ಆಗುತ್ತಿಲ್ಲ.ಬದಲಾಗಿ ಮದ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು,ಹಣವಿಲ್ಲದೆ ಯಾವುದೇ ಕೆಲಸಗಳು ಆಗುವುದೇ ಇಲ್ಲ ಎಂಬ ಸ್ಥಿತಿಗೆ ನಗರಪಾಲಿಕೆ ಆಡಳಿತ ತಲುಪಿದೆ ಎಂದು ಶಿವಣ್ಣ ಆರೋಪಿಸಿದರು.

ನಗರಪಾಲಿಕೆ ಆಡಳಿತದಲ್ಲಿ ಅಧಿಕಾರಿಗಳು ನರಭಕ್ಷಕರಂತೆ ವರ್ತಿಸುತ್ತಿದ್ದು, ಖಾತೆ ಬದಲಾವಣೆ,ಆಸ್ತಿ ತೆರಿಗೆ ಪಾವತಿ, ಮನೆ ನಿರ್ಮಾಣಕ್ಕೆ ಲೇಸನ್ಸ್ ನೀಡುವುದು ಸೇರಿದಂತೆ ಯಾವುದೇ ಕೆಲಸ ಆಗಬೇಕೆಂದು ಅರ್ಜಿ ಸಲ್ಲಿಸಿದರೂ, ಅಧಿಕಾರಿಗಳೇ ನಾಗರಿಕರು ನೀಡಿದ ಅರ್ಜಿಗಳಲ್ಲಿನ ಕೆಲ ದಾಖಲೆ ಕಿತ್ತು,ದಾಖಲೆಗಳನ್ನು ತಂದು ಕೊಡಿ ಎಂದು ಸತಾಯಿಸಿ, ಹಣ ನೀಡಿದ ಮೇಲೆ ಕೆಲಸ ಮಾಡಿಕೊಡುತ್ತಿದ್ದಾರೆ. ಇದರಿಂದ ಜನರು ಬೇಸತ್ತು ಹೋಗಿದ್ದಾರೆ. ಪ್ರಸ್ತುತ ಬಿಜೆಪಿ ಪಕ್ಷದವರೇ ಮೇಯರ್ ಆಗಿ ಕೆಲಸ ಮಾಡುತಿದ್ದಾರೆ.ಹಾಗೆಂದ ಮಾತ್ರಕ್ಕೆ ಬಿಜೆಪಿ ಪಕ್ಷದಲ್ಲಿ ಇರುವವರೆಲ್ಲ ಸತ್ಯಹರಿಶ್ಚಂದ್ರರಲ್ಲ ಎಂದು ಪ್ರಶ್ನೆಯೊಂದಕ್ಕೆ ಮಾಜಿ ಸಚಿವರು ಉತ್ತರಿಸಿದರು.

ಈ ಹಿಂದೆ ನಗರದ ಬಿ.ಹೆಚ್.ರಸ್ತೆ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದ ಆಸ್ತಿಯ ಮಾಲಿಕರನ್ನು ಕರೆದು,ಅವರಿಗೆ ಮನವರಿಕೆ ಮಾಡಿಕೊಟ್ಟು,ಕಾಮಗಾರಿಗಳು ನಡೆಯಲು ಸಹಕರಿಸುವಂತೆ ಮನವಿ ಮಾಡಲಾ ಗಿತ್ತು.ಆದರೆ ಈಗ ಸದರಿ ಕಾಮಗಾರಿಯನ್ನು ಯಾರು ಮಾಡುತ್ತಿದ್ದಾರೆ.ನಗರಪಾಲಿಕೆಯೋ, ಸ್ಮಾರ್ಟಸಿಟಿಯೋ ಅಥವಾ ಲೋಕೋಪಯೋಗಿ ಇಲಾಖೆ ಎಂಬ ಗೊಂದಲ ಕಾಡುತ್ತಿದೆ.ಕೇವಲ ಎರಡು ಬದಿಯಲ್ಲಿದ್ದ ಚರಂಡಿಯ ಸ್ಲಾಬ್‌ಗಳನ್ನು ಮಾತ್ರ ಬದಲಾಯಿಸಿ,ಇಡೀ ಕಾಮಗಾರಿ ನಡೆಸಿರುವಂತೆ ಬಿಲ್ ಮಾಡಲಾಗುತ್ತಿದೆ.ಇದರ ವಿರುದ್ದ ಹೋರಾಟ ನಡೆಸಲು ಮುಂದಾಗಿರುವುದಾಗಿ ಸೊಗಡು ಶಿವಣ್ಣ ತಿಳಿಸಿದರು.

ತುಮಕೂರು ನಗರದ ಚಿಕ್ಕಪೇಟೆಯ ರಸ್ತೆ,ಮಂಡಿಪೇಟೆ ರಸ್ತೆ ಹಾಗು ಜೆ.ಸಿ. ರಸ್ತೆ ಕಾಮಗಾರಿಗಳು ಆರಂಭವಾಗಿ ಒಂದು ವರ್ಷವೇ ಕಳೆದಿದ್ದರೂ ಕಾಮಗಾರಿ ಮುಗಿದಿಲ್ಲ.ಜನರು ದೂಳು,ಮಣ್ಣಿನಿಂದ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ.ಇದರ ಜೊತೆಗೆ ನಗರಪಾಲಿಕೆಯಲ್ಲಿ ಸ್ವತಹಃ ಪಾಲಿಕೆಯ ಆಯುಕ್ತರೇ ಅಕ್ರಮ ಖಾತೆಗಳಲ್ಲಿ ಭಾಗಿಯಾಗಿದ್ದಾರೆ ಎಂಬು ಅನುಮಾನ ಗಳನ್ನು ಸಾರ್ವಜನಿಕರು ವ್ಯಕ್ತಪಡಿಸುತಿದ್ದು,ನಗರಪಾಲಿಕೆಯ ಯಾವುದೆ ಕೆಲಸಗಳು ಪ್ರಾಪರ್ ಚಾನಲ್ನಲ್ಲಿ ಆಗುತ್ತಿಲ್ಲ. ಸಂಪೂರ್ಣ ಗಣಕೀಕೃತಗೊಂಡಿದ್ದರೂ ಸಹ,ನೇರವಾಗಿ ದಾಖಲೆಗಳಿಗೆ ಸಹಿ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿವೆ ಎಂದು ಮಾಜಿ ಮಂತ್ರಿ ಸೊಗಡು ಶಿವಣ್ಣ ನುಡಿದರು.

 ತುಮಕೂರು ಮಹಾನಗರಪಾಲಿಕೆ ಮತ್ತು ಸ್ಮಾರ್ಟ್‌ಸಿಟಿಯಿಂದ ನಡೆದಿರುವ ಕಾಮಗಾರಿಗಳ ಬಗ್ಗೆ ಆರ್.ಟಿ.ಐ ಮೂಲಕ ಮಾಹಿತಿ ಪಡೆದು, ಆಗಿರುವ ಅನ್ಯಾಯಗಳ ಬಗ್ಗೆ ಕರಪತ್ರ ಮುದ್ರಿಸಿ, ಜನರಿಗೆ ಹಂಚುವ ಮೂಲಕ ಅವರಲ್ಲಿ ಜಾಗೃತಿ ಮೂಡಿಸಿ, ಜನಾಂದೋಲನ ರೂಪಿಸುವುದಾಗಿ ಸೊಗಡು ಶಿವಣ್ಣ ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

error: Content is protected !!