ತುಮಕೂರು : ರಾಜ್ಯದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನೆಲಮಂಗಲ – ತುಮಕೂರಿನವರೆಗೆ 6 ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ಹಾಗೂ ಸಂಸದ ವಿ. ಸೋಮಣ್ಣ ತಿಳಿಸಿದರು.
ಜಿಲ್ಲೆಯ ತುರುವೇಕೆರೆ ತಾಲೂಕಿನ ಸಂಪಿಗೆ ರೋಡ್ ರೈಲ್ವೆ ನಿಲ್ದಾಣದಲ್ಲಿ ಇಂದು ಸಂಜೆ ರೈಲ್ವೇ ನಿಲ್ದಾಣ ಪರಿವೀಕ್ಷಣೆ ಹಾಗೂ ಯಶವಂತಪುರ-ಚಿಕ್ಕಮಗಳೂರು ಎಕ್ಸ್‌ಪ್ರೆಸ್ ಗೆ ಹೆಚ್ಚುವರಿ ರೈಲು ನಿಲುಗಡೆಗೆ ಚಾಲನೆ ನೀಡಿ ಮಾತನಾಡಿದ ಅವರು ಜಿಲ್ಲೆಯಲ್ಲಿ ರೈಲ್ವೇ ಕಾಮಗಾರಿಗಳಲ್ಲದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೂ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಂಪಿಗೆ ರೋಡ್ ರೈಲ್ವೆ ನಿಲ್ದಾಣದಲ್ಲಿ ಹೆಚ್ಚು ಪ್ರಯಾಣಿಕರು ಸಂಚರಿಸುವುದರಿಂದ ಎಕ್ಸ್ ಪ್ರೆಸ್ ರೈಲುಗಳನ್ನೂ ಹೆಚ್ಚುವರಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದ್ದು, ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಯಶವಂತಪುರ ಮತ್ತು ಚಿಕ್ಕಮಗಳೂರು ನಡುವೆ ಸಂಚರಿಸುವ ಎಕ್ಸ್ ಪ್ರೆಸ್ ರೈಲು ಸಂಖ್ಯೆ 16240/16239 ಅನ್ನು ಸಂಪಿಗೆ ರೋಡ್ ರೈಲ್ವೆ ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆಗೆ ಇಂದಿನಿಂದ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಹೆಚ್ಚುವರಿ ನಿಲುಗಡೆಯು ಸಂಪಿಗೆ ರೋಡ್ ರೈಲ್ವೆ ನಿಲ್ದಾಣದಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆಯಲ್ಲದೆ ಈ ಪ್ರದೇಶದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ರೈಲ್ವೇ ನಿಲುಗಡೆಯ ಸಮಯದ ವಿವರ :-
ನವೆಂಬರ್ 15ರಿಂದ 2025ರ ಫೆಬ್ರವರಿ 15ರವರೆಗೆ ಜಾರಿಗೆ ಬರುವಂತೆ ರೈಲು ಸಂಖ್ಯೆ 16240 ಯಶವಂತಪುರ-ಚಿಕ್ಕಮಗಳೂರು ಎಕ್ಸ್ ಪ್ರೆಸ್ ಸಂಜೆ 5:04ಗಂಟೆಗೆ ಸಂಪಿಗೆ ರೋಡ್ ನಿಲ್ದಾಣವನ್ನು ತಲುಪಿ ಸಂಜೆ 5:05ಗಂಟೆಗೆ ಹೊರಡಲಿದೆ. ನಂತರ ನವೆಂಬರ್ 16 ರಿಂದ ಫೆಬ್ರವರಿ 15, 2025 ರವರೆಗೆ ಜಾರಿಗೆ ಬರುವಂತೆ ರೈಲು ಸಂಖ್ಯೆ 16239 ಚಿಕ್ಕಮಗಳೂರು-ಯಶವಂತಪುರ ಎಕ್ಸ್ ಪ್ರೆಸ್ ಬೆಳಿಗ್ಗೆ 11:13ಗಂಟೆಗೆ ಸಂಪಿಗೆ ರೋಡ್ ನಿಲ್ದಾಣವನ್ನು ತಲುಪಿ ಬೆಳಿಗ್ಗೆ 11:14ಗಂಟೆಗೆ ಹೊರಡಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ, ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಮಸಾಲ ಜಯರಾಮ, ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಯೋಗೇಶ್ ಮೋಹನ್, ನೈರುತ್ಯ ರೈಲ್ವೆ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಡಾ. ಅನೂಪ್ ದಯಾನಂದ ಸಾಧು, ಕಾರ್ಯಕ್ರಮದ ವ್ಯವಸ್ಥಾಪಕ ಹೆಚ್. ಎನ್. ಶ್ರೀನಿವಾಸ್ ಸೇರಿದಂತೆ ರೈಲ್ವೇ ಇಲಾಖೆಯ ಅಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.