ವರದಿ: ರಮೇಶ್ ಗೌಡ, ಗುಬ್ಬಿ.

ಗುಬ್ಬಿ: ನಿಖಿಲ್ ಕುಮಾರಸ್ವಾಮಿ ಅವರ ಪಟ್ಟಾಭಿಷೇಕಕ್ಕೆ ದೇವೇಗೌಡರು ಆಂಬುಲೆನ್ಸ್ ನಲ್ಲಿ ಬರ್ತಾರೆ ಎಂದು ವ್ಯಂಗ್ಯವಾಡುವ ಮಧ್ಯೆ ಪಟ್ಟಾಭಿಷೇಕ ಗ್ಯಾರಂಟಿ ಎಂಬುದು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಸೋಲು ಅವರ ಬಾಯಲ್ಲೇ ಬರುತ್ತಿದೆ. ನಿಖಿಲ್ ಗೆಲುವು ಖಚಿತ ಎಂದು ತುರುವೇಕೆರೆ ಶಾಸಕ ಎಂ..ಟಿ.ಕೃಷ್ಣಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಸಿ.ಎಸ್.ಪುರ, ಮಾವಿನಹಳ್ಳಿ ಹಾಗೂ ಚಂಗಾವಿ ಕೆರೆಗಳು ತುಂಬಿ ಹರಿದ ಹಿನ್ನಲೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಣೆ ಮಾಡಿದ ನಂತರ ಮಾತನಾಡಿ ಮಾಜಿ ಸಂಸದ ಸುರೇಶ್ ಅವರು ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿರುವುದು ಖಂಡನೀಯ. ಮಾಜಿ ಪ್ರಧಾನಿ ಅವರ ವರ್ಚಸ್ಸು ಎಲ್ಲರಿಗೂ ತಿಳಿದಿದೆ. ಆಂಬುಲೆನ್ಸ್ ಎಂಬ ಮಾತು ಸರಿಯಲ್ಲ. ಹೆಲಿಕಾಪ್ಟರ್ ನಲ್ಲಿ ಬಂದು ಪಟ್ಟಾಭಿಷೇಕ ನೆರವೇರಿಸುತ್ತಾರೆ. ಗೆಲುವಿನ ಸೂಚನೆಗೆ ಹತಾಶೆಯಲ್ಲಿ ಅಸಂಬದ್ಧ ಪದ ಬಳಕೆ ಸಲ್ಲದು ಎಂದು ಖಂಡಿಸಿದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಯೋಗೀಶ್ವರ್ ಅವರಿಗೆ ಟಿಕೆಟ್ ನೀಡಲು ಕುಮಾರಣ್ಣ ಆಹ್ವಾನ ನೀಡಿದ್ದರು. ಆದರೆ ಈ ಮೊದಲೇ ಒಪ್ಪಂದ ಮಾಡಿಕೊಂಡ ಹಿನ್ನಲೆ ಟಿಕೆಟ್ ನೀಡಲಿಲ್ಲ ಎಂದು ಸಿಂಪತಿ ಗಿಟ್ಟಿಸಿಕೊಳ್ಳುವ ನಾಟಕ ಎಲ್ಲರಿಗೂ ತಿಳಿದಿದೆ ಎಂದು ಕುಟುಕಿದ ಅವರು ತುಮುಲ್ ಒಕ್ಕೂಟದ ಚುನಾವಣೆಯಲ್ಲಿ ತುರುವೇಕೆರೆ ತಾಲ್ಲೂಕಿನ ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವನವಿದೆ. ಕಾಂಗ್ರೆಸ್ ಪಕ್ಷ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಆದರೆ ನಾವು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಾಗುತ್ತಿದ್ದೇವೆ. ನಮ್ಮಲ್ಲಿ 113 ಮತಗಳಿದ್ದು 95 ಮತಗಳಿಗೆ ಖುದ್ದು ಭೇಟಿ ಮಾಡಿ ಮನವಿ ಮಾಡಿದ್ದೇನೆ ಎಂದರು.

ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರುದ್ಧ ಬೃಹತ್ ಪಾದಯಾತ್ರೆ ಖಂಡಿತಾ ಮಾಡುತ್ತೇವೆ. 70 ಕಿಮೀ ನಾಲೆಯಿಂದ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ನಡೆಸುತ್ತೇವೆ. ಹೆದ್ದಾರಿ ಬಂದ್ ಆಗಲಿದೆ. ಕೆಲ ಮುಖಂಡರು ಪೊಲೀಸ್ ಕೇಸ್ ಎಂದು ಹೆದರಿ ತಪ್ಪಿಸಿಕೊಳ್ಳುತ್ತಾರೆ. ಯಾರೋ ಎದೆಗುಂದುವ ಅವಶ್ಯವಿಲ್ಲ. ರೈತರು ಯಡೆಮಟ್ಟೆ ಜೊತೆ ಬರಲು ಖುದ್ದು ನಾನೇ ಕರೆ ನೀಡಿದ್ದೇನೆ. ಪೊಲೀಸರು ಸಾವಿರಾರು ರೈತರನ್ನು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಪಟ್ಟ ಕೆರೆಗಳು ಹೆಚ್ಚಾಗಿವೆ. ಹೇಮಾವತಿ ಅಚ್ಚುಕಟ್ಟು ಪ್ರದೇಶ ಘೋಷಣೆಗೆ ತುರುವೇಕೆರೆ ತಾಲ್ಲೂಕಿನ 55 ಸಾವಿರ ಹೆಕ್ಟೇರ್ ಜಮೀನು ಸೇರಿದೆ. ಗುಬ್ಬಿ ತಾಲ್ಲೂಕಿನ ಅಚ್ಚುಕಟ್ಟು ವಿಚಾರ ಅಲ್ಲಿನ ಶಾಸಕರು ಮಾತನಾಡುತ್ತಾರೆ ಎಂದು ಉತ್ತರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಚನ್ನನೇಹಳ್ಳಿ ಮೂರ್ತಣ್ಣ, ನಂಜೇಗೌಡ, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ನರಸೇಗೌಡ, ಹೋಬಳಿ ಅಧ್ಯಕ್ಷ ಜಗದೀಶ್, ಯುವ ಜೆಡಿಎಸ್ ಅಧ್ಯಕ್ಷ ನವೀನ್ ಕುಮಾರ್, ಶಾಸಕರ ಪುತ್ರ ವೆಂಕಟೇಶ್, ವೀರಣ್ಣಗುಡಿ ರಾಮಣ್ಣ, ಮಾವಿನಹಳ್ಳಿ ರವಿ, ಕೆ.ರಾಮಣ್ಣ, ಈಶ್ವರ್, ಕೃಷ್ಣೇಗೌಡ, ಅವ್ವೇರಹಳ್ಳಿ ಕೃಷ್ಣಪ್ಪ ಇತರರು ಇದ್ದರು.

LEAVE A REPLY

Please enter your comment!
Please enter your name here