ದೇಶದ ಸ್ವಾತಂತ್ಯ್ರದ ಕುರಿತು ವಿವಾದಾತ್ಮಕ ಹೇಳಿಕೆ: ನಟಿ ಕಂಗನಾ ವಿರುದ್ದ ದೂರು ದಾಖಲು

ಬಾಲಿವುಡ್‌‌ ನಟಿ ಕಂಗನಾ ರಣಾವತ್‌ ‘ಭಾರತದ ಸ್ವಾತಂತ್ಯ್ರ’ದ ಕುರಿತು ನೀಡಿರುವ ಹೇಳಿಕೆಯ ವಿರುದ್ದ ಗುರುವಾರ ಮುಂಬೈನಲ್ಲಿ ದೂರು ದಾಖಲಾಗಿದೆ. ಆಮ್ ಆದ್ಮಿ ಪಕ್ಷ(ಎಎಪಿ)ದ ರಾಷ್ಟ್ರೀಯ ಕಾರ್ಯಾಧ್ಯಕ್ಷೆ ಪ್ರೀತಿ ಮೆನನ್ ಅವರು ಈ ದೂರು ದಾಖಲಿಸಿದ್ದು, ಅವರ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಂಗನಾ ರಣಾವತ್ ನೀಡಿರುವ ದೇಶದ್ರೋಹಿ ಮತ್ತು ಪ್ರಚೋದಕ ಹೇಳಿಕೆಗಳಿಗಾಗಿ ಸೆಕ್ಷನ್ 504, 505 ಮತ್ತು 124A ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿ ಮುಂಬೈ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದೇವೆ ಎಂದು ಪ್ರೀತಿ ಮೆನನ್ ಟ್ವೀಟ್ ಮಾಡಿದ್ದಾರೆ.

ನಟಿ ಕಂಗನಾ ರಣಾವತ್ ಟೈಮ್ಸ್ ನೌ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, “1947 ರಲ್ಲಿ ಭಾರತಕ್ಕೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ, ಭಿಕ್ಷೆ. ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014 ರಲ್ಲಿ” ಎಂದು ಹೇಳಿದ್ದರು.

ಬಿಜೆಪಿಯ ಕಟ್ಟಾ ಬೆಂಬಲಿಗರಲ್ಲಿ ಒಬ್ಬರಾದ ನಟಿ ಕಂಗನಾ ರಣಾವತ್ ವಿರುದ್ಧ ಬಿಜೆಪಿ ನಾಯಕ ವರುಣ್ ಗಾಂಧಿ ಕೂಡಾ ವಾಗ್ದಾಳಿ ನಡೆಸಿದ್ದು, ಇಂತಹ ಆಲೋಚನೆಯನ್ನು ನಾನು ಹುಚ್ಚುತನ ಎನ್ನಬೇಕೋ…ದೇಶದ್ರೋಹ ಎನ್ನಬೇಕೋ..? ಎಂದು ಪ್ರಶ್ನಿಸಿದ್ದಾರೆ.

“ಒಮ್ಮೆ ಮಹಾತ್ಮಾ ಗಾಂಧಿಯವರ ತ್ಯಾಗ ಮತ್ತು ತಪಸ್ಸಿಗೆ ಅವಮಾನ, ಕೆಲವೊಮ್ಮೆ ಅವರ ಕೊಲೆಗಾರನಿಗೆ ಗೌರವ. ಈಗ ಹುತಾತ್ಮ ಮಂಗಲ್ ಪಾಂಡೆಯಿಂದ ಹಿಡಿದು ರಾಣಿ ಲಕ್ಷ್ಮೀಬಾಯಿ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಬಗ್ಗೆ ತಿರಸ್ಕಾರ. ಇಂತಹ ಆಲೋಚನೆಯನ್ನು ನಾನು ಹುಚ್ಚುತನ ಎನ್ನಲೋ…ದೇಶದ್ರೋಹ ಎನ್ನಲೋ…” ಎಂದು ವರುಣ್ ಗಾಂಧಿ ಪ್ರಶ್ನಿಸಿದ್ದಾರೆ.

ಇನ್ನು ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಗುಜರಾತ್‌ ಶಾಸಕ ಜಿಗ್ನೇಶ್ ಮೇವಾನಿ, 2014 ರ ನಂತರ ನಟಿ ಕಂಗನಾ ರಣಾವತ್ ಅವರಷ್ಟು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾರು ಅನುಭವಿಸಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

“ಆರ್ಟಿಕಲ್ 19 ರ ಮೂಲಕ ಖಾತರಿಪಡಿಸಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಬುಲ್ಶಿಟ್ ಹೇಳಿಕೆಗಳನ್ನೂ ನೀಡಲು ಅವಕಾಶ ನೀಡುತ್ತದೆ. 2014 ರ ನಂತರ ನಟಿ ಕಂಗನಾ ರಣಾವತ್ ಅವರಷ್ಟು ಆರ್ಟಿಕಲ್ 19 ಅನ್ನು ಯಾವ ಭಾರತೀಯ ಪ್ರಜೆಯೂ ಅನುಭವಿಸಿಲ್ಲ” ಎಂದು ಜಿಗ್ನೇಶ್ ಮೇವಾನಿ ಟ್ವೀಟ್ ಮಾಡಿದ್ದಾರೆ.

error: Content is protected !!