ಸೊನೆ ಮಳೆಯಲ್ಲೆ ಅಲೆಮಾರಿ ಗುಡಿಸಲುಗಳ ತೆರವು: ಹಸಿವಿನಿಂದ ಮಕ್ಕಳು ಕಂಗಾಲು.

ಅಲೆಮಾರಿ ಕುಟುಂಬಗಳು ವಾಸವಿದ್ದ ಗುಡಿಸಲುಗಳನ್ನ ಇಂದು ತಿಪಟೂರು ತಾಲ್ಲೂಕು ಆಡಳಿತ‌ ಬಿಗಿ ಪೋಲಿಸ್ ಬಂದೊಬಸ್ತ್ ನಲ್ಲಿ ಜೆಸಿಬಿಗಳ ಮೂಲಕ‌ ತೆರವುಗೊಳಿಸುತ್ತಿದೆ.

ತಿಪಟೂರು ನಗರದ ಹಾಸನ ಸರ್ಕಲ್ ಬಳಿ ರೈಲ್ವೇ ಹಳಿ ಪಕ್ಕದ ಸರ್ಕಾರಿ ಜಮೀನಿನಲ್ಲಿ ಉತ್ತರ ಕರ್ನಾಟಕ ಮೂಲದ ಅಲೆಮಾರಿ ಕುಟುಂಬಗಳು ಹತ್ತಾರು ವರ್ಷಗಳಿಂದ ಅನಧಿಕೃತವಾಗಿ ಗುಡಿಸಲುಗಳನ್ನ ನಿರ್ಮಿಸಿಕೊಂಡು ವಾಸವಿದ್ದರು.ಇಂದು ಬೆಳ್ಳಂ ಬೆಳಗ್ಗೆ ಕಾರ್ಯಾಚರಣೆಗಿಳಿದಿರುವ ತಿಪಟೂರು ತಾಲ್ಲೂಕು ಆಡಳಿತ ತಹಸಿಲ್ದಾರ್ ಚಂದ್ರಶೇಖರಯ್ಯ ಹಾಗೂ ಡಿವೈಎಸ್ಪಿ ಚಂದನ್ ಕುಮಾರ್ , ನಗರಸಭೆ ಪೌರಾಯುಕ್ತ ಉಮಾಕಾಂತ್ ನೇತೃತ್ವದಲ್ಲಿ ಬಿಗಿಪೋಲಿಸ್ ಬಂದೋಬಸ್ತ್ ಏರ್ಪಡಿಸಿ ಜೆಸಿಬಿಗಳ ಮೂಲಕ ಗುಡಿಸಲುಗಳನ್ನ ತೆರವುಗೊಳಿಸಲಾಗುತ್ತಿದೆ.

ಗುಡಿಸಲಿನಲ್ಲಿ ವಾಸವಿದ್ದ ಮಕ್ಕಳು, ಮಹಿಳೆಯರು ಬೀದಿಗೆ ಬಿದ್ದಿದ್ದು ಎರಡು ದಿನಗಳ ಕಾಲಾವಕಾಶ ‌ಕೊಡಿ ಕಾಲಿ ಮಾಡುತ್ತೆವೆ ಎಂದು ಅಧಿಕಾರಿಗಳ‌ ಕಾಲು ಹಿಡಿದು ಅಂಗಲಾಚಿದ್ರು ಅಧಿಕಾರಿಗಳ ಮನ ಕರಗಲಿಲ್ಲ. ಸೊನೆ ಮಳೆಯಲ್ಲಿಯೇ ಮಕ್ಕಳು ಮಹಿಳೆಯರು ಮುರಿದು ಬಿದ್ದ ಗುಡಿಸಲಿನ ಅವಶೇಷಗಳನ್ನ ಎತ್ತಿಟ್ಟುಕೊಳ್ಳುತ್ತಿದ್ರೆ, ಮಕ್ಕಳು ಹಸಿವಿನಿಂದ ಅಳುತ್ತಾ ನಿಂತಿದ್ದರೂ ಅಧಿಕಾರಿಗಳು ಮಾನವೀಯತೆ ಮರೆತು ವರ್ತಿಸಿದ್ದಾರೆ.

ಅಲೆಮಾರಿಗಳ ಗುಡಿಸಲುಗಳನ್ನ ಏಕಾಏಕಿ ತೆರವುಗೊಳಿಸಿರುವುದನ್ನ ಪ್ರಶ್ನಿಸಿದ ಸಾಮಾಜಿಕ ಕಾರ್ಯಕರ್ತ ಮತಿಘಟ್ಟ ಸಂತೋಷ್ ಎಂಬಾತನನ್ನ ಪೋಲೀಸರು ಬಂದಿಸಿದ್ದಾರೆ.ಈ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಸಂತೋಷ್ ರಾತ್ರಿಯಿಡಿ ಮಳೆ ಸುರಿದು ಇಡೀ ಗುಡಿಸಲುಗಳು ನೆನೆದು ತೆಪ್ಪೆಯಾಗಿವೆ ಈ ಸಂದರ್ಭದಲ್ಲಿ ತಾಲ್ಲೂಕು ಆಡಳಿತ ಮಾನವೀಯತೆ ಇಲ್ಲದೆ ಏಕಾಏಕಿ ಜೆಸಿಬಿಗಳ‌ ಮೂಲಕ ತೆರವುಗೊಳಿಸುತ್ತಿರುವುದು ಖಂಡನೀಯ. ಈಗೆ ಏಕಾಏಕಿ ತೆರವುಗೊಳಿಸಿದ್ರೆ ಸಣ್ಣ ಸಣ್ಣ ಮಕ್ಕಳಿರುವ ಅಲೆಮಾರಿ ಕುಟುಂಬಗಳು ಬೀದಿಗೆ ಬೀಳುತ್ತವೆ. ಮಳೆಯಲ್ಲಿ ಎಲ್ಲಿಗೆ ಹೋಗಬೇಕು ಇದು ಮಾನವ ಹಕ್ಕು ಉಲ್ಲಂಘನೆ ಎಂದು ತಾಲ್ಲೂಕು ಆಡಳಿತದ ವಿರುದ್ದ ಕಿಡಿಕಾರಿದ್ದಾರೆ.

ಈ ಬಗ್ಗೆ ವರದಿ ಮಾಡಲು ಸ್ಥಳಕ್ಕೆ ತೆರಳಿದ ಪತ್ರಕರ್ತರ ಜೊತೆ ಕನಿಷ್ಠ ಸೌಜನ್ಯವಿಲ್ಲದೆ ಕಟುವಾಗಿಯೇ ವರ್ತಿಸಿದ ಡಿವೈಎಸ್ಪಿ ಚಂದನ್ ಕುಮಾರ್ ವರದಿ ಮಾಡಲು ಬಿಡದೆ ಪತ್ರಿಕಾ ಸ್ವಾತಂತ್ರ್ಯ ಕ್ಕೆ ದಕ್ಕೆ ಉಂಟುಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!