ತುಮಕೂರು: ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿನ  ಶೌಚದಗುಂಡಿಯಿಂದ ತುಂಬಿ ಹರಿಯುತ್ತಿದ್ದ ಮಲವನ್ನ ದಲಿತರಿಂದ ಸ್ವಚ್ಚಗೊಳಿಸಿರುವ ಅಮಾನವೀಯ ಘಟನೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಸ್ವಕ್ಷೇತ್ರ ಕೊರಟಗೆರೆಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಹೃದಯಭಾಗದಲ್ಲಿರುವ ಕೆ ಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ನಾಗರೀಕ ‌ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ನಿಲ್ದಾಣದ ಒಳಗಿರುವ ಸಾರ್ವಜನಿಕ ಶೌಚಾಲಯದ ಪಿಟ್ ತುಂಬಿ ಹರಿಯುತ್ತಿದ್ದನ್ನ ದಲಿತರಿಂದ ಸ್ವಚ್ಚಗೊಳಿಸುವ ಕೆಲಸ ಮಾಡಿಸಲಾಗಿದೆ. ತುಮಕೂರು ಮೂಲದ ಪರಿಶಿಷ್ಟ ಜಾತಿಗೆ ಸೇರಿದ 10 ವರ್ಷದ ಬಾಲಕಾರ್ಮಿಕ ಹಾಗೂ ಓರ್ವ ವ್ಯಕ್ತಿ ನಿಲ್ದಾಣದಲ್ಲಿ ಮಲವನ್ನ ಸ್ವಚ್ಚಗೊಳಿಸುತ್ತಿದ್ದ ದೃಷ್ಯ ಮಾಧ್ಯಮದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ದಲಿತರಿಂದ ಮಲ ಸ್ವಚ್ಚಗೊಳಿಸುವ ಕೆಲಸ ಮಾಡಿಸುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಸಿಬ್ಬಂದಿ ಮಾಧ್ಯಮದವರನ್ನ ಕಂಡ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾನೆ. ಮಾಧ್ಯಮ ದವರು ಬಾಲಕನನ್ನ ಮಾತನಾಡಿಸಿದ ವೇಳೆ ಶೌಚಾಲಯದ ನಿರ್ವಹಣೆ ಮಾಡುತ್ತಿದ್ದ ಕುಮಾರಣ್ಣ ಎಂಬುವರು ನಮಗೆ ಈ ಕೆಲಸ ಮಾಡುವಂತೆ ಹೇಳಿದ್ದಾರೆ, ನಾನು ಪರಿಶಿಷ್ಟ ಜಾತಿಗೆ  ಸೇರಿದ್ದು ತನಗೆ 10 ವರ್ಷ ವಯಸ್ಸು ಎಂದು ಬಾಲಕ ಹೇಳಿಕೊಂಡಿದ್ದಾನೆ. ಮಾಧ್ಯಮದವರ ಜೊತೆಗೆ ಮಾತನಾಡುತ್ತಿದ್ದ ಬಾಲಕನಿಗೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಸಿಬ್ಬಂದಿ ದೂರದಿಂದಲೇ ಕೈಸನ್ನೆ ಮಾಡಿ ಮಾತನಾಡದಂತೆ ಗದರಿಸುತ್ತಾನೆ. ಕೂಡಲೇ ಬಾಲಕ ತಾವು ಕೆಲಸ ಮಾಡಲು ಬಳಸುತ್ತಿದ್ದ ಗುದ್ದಲಿ, ಬಾಣಲಿ ತೆಗೆದುಕೊಂಡು ಅಸಹಾಯಕತೆಯಿಂದ ಅಲ್ಲಿಂದ ಶೌಚಾಲಯದ ಕಡೆ ತೆರಳಿದ್ದು ಸಿಬ್ಬಂದಿಯ ದೌರ್ಜನ್ಯಕ್ಕೆ ಸಾಕ್ಷಿಯಾಯಿತು.

ಪಟ್ಟಣ ಪಂಚಾಯ್ತಿಯಲ್ಲಿ ಇರುವ ಸೆಪ್ಟಿಕ್ ಟ್ಯಾಂಕ್ ಯಂತ್ರದ ಮೂಲಕ ತುಂಬಿದ ಶೌಚಗುಂಡಿಯನ್ನ ಸ್ವಚ್ಚಗೊಳಿಸದೇ ನಿಲ್ದಾಣದ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದಾರೆ. ಶೌಚಗುಂಡಿ ತುಂಬಿ ನಿಲ್ದಾಣದ ಫ್ಲಾಟ್ ಫಾರಂಗೆ ಹರಿಯತೊಡಗಿದೆ. ಇದು ನಿಲ್ದಾಣದಲ್ಲಿ ದುರ್ನಾತ ಆವರಿಸಿ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಒಡಾಡುವಂತ ಪರಿಸ್ಥಿತಿ ಉಂಟುಮಾಡಿದೆ. ಈ ನಿಲ್ದಾಣಕ್ಕೆ ಬರುವ ಅದೆಷ್ಟು ಜನ ಪ್ರಯಾಣಿಕರು ರೋಗ ರುಜಿನಗಳಿಗೆ ತುತ್ತಾಗಿದ್ದರೋ ದೇವರೆ ಬಲ್ಲ. ಇಂತಹ ಸ್ಥಿತಿಯಲ್ಲಿ ಬಡವರು ದಲಿತರ ಅಸಹಾಯಕತೆಯನ್ನ ದುರ್ಬಳಕೆ ಮಾಡಿಕೊಂಡು ಅವರಿಂದ ಬರಿಗೈಯಲ್ಲಿ ಸ್ವಚ್ಚತೆ ಮಾಡಿಸಿರುವುದು ನಿಜಕ್ಕೂ ಖಂಡನಾರ್ಹವಾಗಿದೆ.

ಬಸ್ ನಿಲ್ದಾಣದೊಳಗೆ ನೂರಾರು ಪ್ರಯಾಣಿಕರ ಸಮ್ಮುಖದಲ್ಲೆ ಸುಡುವ ಬಿಸಿಲಿನಲ್ಲಿ ಬರಿ ಮೈಯಲ್ಲಿದ್ದ ಆ ದಲಿತ ಬಾಲಕ ಮಲವನ್ನ ಬಾಚುತ್ತಿದ್ದದ್ದು ಮಾತ್ರ ಇಡೀ ಮನುಕುಲವನ್ನೆ ಪ್ರಶ್ನಿಸಿದೆ. ಬಾಲಕ ಹಾಗೂ ವ್ಯಕ್ತಿ ಇಬ್ಬರಿಂದ ಬರಿ ಕೈಗಳಲ್ಲಿ ನಿಲ್ದಾಣದಿಂದ ಬೇರೆಡೆಗೆ ಮಲ ಎತ್ತುವ ಕೆಲಸ ಮಾಡಿಸುವ ಮೂಲಕ ಮಾನವ ಹಕ್ಕು ಉಲ್ಲಂಘನೆ, ಹಾಗೂ ಮಲ ಹೊರುವ ಪದ್ದತಿ ನಿಷೇಧ ಕಾನೂನು ಉಲ್ಲಂಘನೆ ಮಾಡಲಾಗಿದೆ.

ಮಾನವನಿಂದ ಮಲ ಹೊರುವ ಪದ್ದತಿ ನಿಷೇಧ ಹಾಗೂ ಬಾಲಕಾರ್ಮಿಕ ಪದ್ದತಿ ನಿಷೇಧ ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ ಅಧಿಕಾರಿಗಳ ಸಮ್ಮುಖದಲ್ಲೆ ಉಲ್ಲಂಘನೆಯಾಗಿರುವುದು ನಿಜಕ್ಕೂ ದುರಂತ. ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ಸ್ವಕ್ಷೇತ್ರದಲ್ಲಿರುವ ಬಸ್ ನಿಲ್ದಾಣದಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಅಧಿಕಾರಿ, ಸಿಬ್ಬಂದಿಗಳು ನಿರ್ಭೀತಿಯಿಂದ ದಲಿತರ ಕೈಯಲ್ಲಿ ಇಂತಹ ಅನಿಷ್ಟದ ಕೆಲಸ ಮಾಡಿಸಿರುವುದು ಸಚಿವರ ಕಾರ್ಯದಕ್ಷತೆಯನ್ನೇ ಅಣಕಿಸುವಂತೆ ಮಾಡಿದೆ.

ವರದಿ: ಮಂಜುನಾಥ್‌. ಜಿ ಎನ್, ತುಮಕೂರು.

LEAVE A REPLY

Please enter your comment!
Please enter your name here