ನ್ಯೂಸ್ ವೆಬ್ ಸೈಟ್ ಮೇಲೆ ಚೀನಾ ದಬ್ಬಾಳಿಕೆ.

ಹಾಂಗ್ ಕಾಂಗ್: ಹಾಂಗ್ ಕಾಂಗ್ ಮೇಲಿನ ಚೀನಾದ ದಬ್ಬಾಳಿಕೆ ಮುಂದುವರಿದಿದೆ. ಪ್ರಜಾಪ್ರಭುತ್ವ ಪರ ಮಾತನಾಡುವ, ಹೋರಾಟ ಮಾಡುವವರನ್ನು ದೇಶದ್ರೋಹ ಪ್ರಕರಣ ದಾಖಲಿಸಿ ಹಾಂಗ್ ಕಾಂಗ್ ನಲ್ಲಿ ಜೈಲಿಗೆ ಅಟ್ಟಲಾಗುತ್ತಿದೆ.

ಹಾಂಗ್ ಕಾಂಗ್ ಮೂಲದ ನ್ಯೂಸ್ ವೆಬ್‌ಸೈಟ್ ‘ಸಿಟಿಜನ್ ನ್ಯೂಸ್’ ಭಾನುವಾರ ತನ್ನ ಸೇವೆಗಳನ್ನು ನಿಲ್ಲಿಸಿದೆ. ಇದಕ್ಕೂ ಮುನ್ನ ಪ್ರಜಾಪ್ರಭುತ್ವದ ಪರ ಧ್ವನಿ ಎತ್ತಿದ ನ್ಯೂಸ್ ವೆಬ್‌ಸೈಟ್‌ಗಳ ಕಚೇರಿಯ ಮೇಲೆ ಪೊಲೀಸರು ದಾಳಿ ನಡೆಸಿ ದೇಶದ್ರೋಹದ ಆರೋಪ ಹೊರಿಸಿ ಏಳು ಜನರನ್ನು ಬಂಧಿಸಲಾಗಿತ್ತು. ಹಾಂಗ್ ಕಾಂಗ್ ನಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಪ್ರಶ್ನೆಗಳ ಉದ್ಭವಿಸುತ್ತಿರುವಾಗಲೇ ಸಿಟಿಜನ್ ನ್ಯೂಸ್ ವೆಬ್‌ಸೈಟ್ ಈ ಘೋಷಣೆ ಮಾಡಿದೆ. ಚೀನಾ ಇತ್ತೀಚಿನ ದಿನಗಳಲ್ಲಿ ಹಾಂಗ್ ಕಾಂಗ್‌ನಲ್ಲಿ ತನ್ನ ಚಟುವಟಿಕೆಗಳನ್ನು ತೀವ್ರಗೊಳಿಸಿದೆ.

ಸಿಟಿಜನ್ ನ್ಯೂಸ್ ಸ್ಥಗಿತಗೊಂಡ ಬಳಿಕ ಧನ್ಯವಾದ ತಿಳಿಸಿದ ವೆಬ್ ಸೈಟ್

“ಜನವರಿ 4ರಿಂದ ತಮ್ಮ ವೆಬ್ ಸೈಟ್ ನಲ್ಲಿ ಹೊಸ ಸುದ್ದಿಗಳನ್ನು ಹಂಚಿಕೊಳ್ಳುವುದಿಲ್ಲ ಹಾಗೂ ಸಂಸ್ಥೆಯನ್ನು ಮುಚ್ಚಲಾಗುವುದು ಎಂದು ‘ಸಿಟಿಜನ್ ನ್ಯೂಸ್’ ಭಾನುವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಸಿಟಿಜನ್ ನ್ಯೂಸ್ ನೀಡಿರುವ ಹೇಳಿಕೆಯಲ್ಲಿ, “ನಾವು ಈ ಸ್ಥಳವನ್ನು ಪ್ರೀತಿಸುತ್ತೇವೆ. ದುಃಖಕರವೆಂದರೆ ನಾವು ಕೇವಲ ಮಳೆ ಅಥವಾ ಬಲವಾದ ಗಾಳಿಯಂತಹ ಸವಾಲುಗಳನ್ನು ಎದುರಿಸುತ್ತೇವೆ. ಆದರೆ ಚಂಡಮಾರುತಗಳು ಮತ್ತು ಸುನಾಮಿಗಳನ್ನು ಎದುರಿಸಲು ಸಾಧ್ಯವಿಲ್ಲ. ನಮ್ಮ ಮೂಲ ತತ್ವಗಳನ್ನು ನಾವು ಎಂದಿಗೂ ಮರೆತಿಲ್ಲ. ಕಳೆದೆರಡು ವರ್ಷಗಳಲ್ಲಿ ಸಮಾಜದಲ್ಲಿ ಆಗಿರುವ ಮಹತ್ತರ ಬದಲಾವಣೆಗಳು ಹಾಗೂ ಮಾಧ್ಯಮಗಳ ಹದಗೆಟ್ಟ ವಾತಾವರಣದಿಂದಾಗಿ ಇನ್ನು ಮುಂದೆ ನಾವು ಯಾವುದೇ ಭಯವಿಲ್ಲದೆ ನಮ್ಮ ಹಾದಿಯಲ್ಲಿ ನಡೆಯಲು ಸಾಧ್ಯವಾಗುತ್ತಿಲ್ಲ ಎಂಬುದು ಬೇಸರದ ಸಂಗತಿ.” ಎಂದು ಸೋಷಿಯಲ್ ಮೀಡಿಯಾದಲ್ಲಿ ತನ್ನ ನೋವನ್ನು ಪತ್ರಿಕೆ ಹಂಚಿಕೊಂಡಿದೆ.

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಸುದ್ದಿ ಸಂಪಾದಕರು ಜೈಲಿಗೆ

ಆಪಲ್ ಡೈಲಿ ಮತ್ತು ಸ್ಟ್ಯಾಂಡ್ ನ್ಯೂಸ್ ನಂತರ ಇತ್ತೀಚಿನ ದಿನಗಳಲ್ಲಿ ಸಿಟಿಜನ್ ನ್ಯೂಸ್ ಬಾಗಿಲು ಬಂದ್ ಮಾಡಿರುವ ಮೂರನೇ ವೆಬ್ ಸೈಟ್ ಆಗಿದೆ. 2019 ರಲ್ಲಿ ಬೃಹತ್ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳು ನಡೆದ ಬಳಿಕ, ಹಾಂಗ್ ಕಾಂಗ್‌ನಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಚೀನಾ ಜಾರಿಗೆ ತಂದಿತು. ಈ ಕಾಯ್ದೆ ಪ್ರಕಾರ ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಕರ್ತರನ್ನು ಚೀನಾ ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸುತ್ತಿದೆ. ಸಿಟಿಜನ್ ನ್ಯೂಸ್ ವೆಬ್ ಸೈಟ್ ಸ್ಥಗಿತಗೊಳಿಸುವ ಘೋಷಣೆ ಮಾಡುವುದಕ್ಕೂ ಮುನ್ನ ಸ್ಟ್ಯಾಂಡ್ ನ್ಯೂಸ್ ಮೇಲೆ ದಾಳಿ ನಡೆಸಿ ಸಂಪಾದಕ ಮತ್ತು ಮಾಜಿ ಬೋರ್ಡ್ ಸದಸ್ಯರು ಸೇರಿದಂತೆ 7 ಮಂದಿಯನ್ನು ದೇಶದ್ರೋಹದ ಆಧಾರದ ಮೇಲೆ ಬಂಧಿಸಲಾಗಿತ್ತು.

error: Content is protected !!