ತುಮಕೂರು : ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 2ರಂದು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.

ಮುಖ್ಯಮಂತ್ರಿಗಳ ಆಗಮನ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಪಾಲನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣ ಕೈಗಾರಿಕೆ, ಕಾರ್ಮಿಕ, ರೇಷ್ಮೆ, ಕಂದಾಯ, ವಿಕಲ ಚೇತನರ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ, ಹಾಲು ಒಕ್ಕೂಟ, ವಿವಿಧ ನಿಗಮಗಳು, ಎನ್‍ಆರ್‍ಎಲ್‍ಎಂ ಸೇರಿದಂತೆ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸುವ ಯೋಜನೆಗಳಡಿ 1.46 ಲಕ್ಷ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ಶಂಕುಸ್ಥಾಪನೆ ಮತ್ತು ಉದ್ಘಾಟನೆಗೆ ಸಿದ್ಧವಿರುವ ಲೋಕೋಪಯೋಗಿ, ಅಗ್ನಿಶಾಮಕ, ಪೊಲೀಸ್, ಸಣ್ಣ ನೀರಾವರಿ, ಸಮಾಜ ಕಲ್ಯಾಣ, ಕೃಷಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಕೊಳಗೇರಿ ಅಭಿವೃದ್ಧಿ ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳಿಂದ ಸುಮಾರು 1500 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೈಗೊಳ್ಳಲಾಗುವ 929ಕೋಟಿ ರೂ. ವೆಚ್ಚದ ಒಟ್ಟು 825 ಕಾಮಗಾರಿಗಳ ಶಿಲಾನ್ಯಾಸ ಹಾಗೂ 94 ಕೋಟಿ ರೂ. ವೆಚ್ಚದ ಪೂರ್ಣಗೊಂಡಿರುವ ಒಟ್ಟು 66 ಕಾಮಗಾರಿಗಳ ಉದ್ಘಾಟನೆಯನ್ನು ನೆರವೇರಿಸಲಾಗುವುದು. ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ವತಿಯಿಂದ 253 ಕೋಟಿ ರೂ., ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ 263 ಕೋಟಿ ರೂ., ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ 194 ಕೋಟಿ ರೂ., ಲೋಕೋಪಯೋಗಿ ಇಲಾಖೆಯ 188 ಕೋಟಿ ರೂ., ಸಣ್ಣ ನೀರಾವರಿ ಇಲಾಖೆಯಲ್ಲಿ 57 ಕೋಟಿ ರೂ., ಸಮಾಜ ಕಲ್ಯಾಣ ಇಲಾಖೆಯ 35 ಕೋಟಿ ರೂ., ಅಗ್ನಿಶಾಮಕ ಇಲಾಖೆಯ 3 ಕೋಟಿ ರೂ., ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ 12 ಕೋಟಿ ರೂ., ಕೆಆರ್‍ಐಡಿಎಲ್‍ನ 11 ಕೋಟಿ ರೂ., ಕೃಷಿ ಇಲಾಖೆಯ 2 ಕೋಟಿ ರೂ., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 3 ಕೋಟಿ ರೂ., ಪೊಲೀಸ್ ಇಲಾಖೆಯ 0.71 ಕೋಟಿ ರೂ. ಸೇರಿದಂತೆ ಸುಮಾರು 1500 ಕೋಟಿ ರೂ. ಕಾಮಗಾರಿಗಳಿಗೆ ಕಾರ್ಯಕ್ರಮದಲ್ಲಿ ಅಡಿಗಲ್ಲು ಹಾಗೂ ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದರು.

ನಮ್ಮ ಸರ್ಕಾರದಿಂದ ಜನಸಮುದಾಯಕ್ಕೆ ಭರವಸೆ ನೀಡಿದಂತೆ ವಿನೂತನ ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ವಿರೋಧ ಪಕ್ಷಗಳ ಟೀಕೆ-ಟಿಪ್ಪಣಿಗಳಿಗೆ ಉತ್ತರ ನೀಡುತ್ತಿದ್ದೇವೆ. ಈ ಕಾರ್ಯಕ್ರಮದಿಂದ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುತ್ತಿರುವ ವಿಪಕ್ಷದವರ ನಡವಳಿಕೆ ಜನರಿಗೆ ತಿಳಿಯಲಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಸರ್ಕಾರ ದಿವಾಳಿಯಾಗಿದೆ. ಕಾಮಗಾರಿಗಳ ಅನುಷ್ಠಾನಕ್ಕೆ ಹಣವಿಲ್ಲವೆಂದು ವಿರೋಧ ಪಕ್ಷದವರು ಮಾಡುವ ಟೀಕೆಗಳಿಗೆ ಈ ಕಾರ್ಯಕ್ರಮ ಉತ್ತರವಾಗಲಿದೆ ಎಂದರು.
ಕರ್ನಾಟಕ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದ್ದರೂ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿಲ್ಲ ಎಂದು ಮಹಾರಾಷ್ಟ್ರ ಚುನಾವಣೆಯಲ್ಲಿ ವಿರೋಧಪಕ್ಷದವರು ಜಾಹೀರಾತು ನೀಡಿದ್ದು, ಇದಕ್ಕೆಲ್ಲ ಉತ್ತರ ಕೊಡುವ ಸಂದರ್ಭ ಬಂದಿದೆ ಎಂದು ತಿಳಿಸಿದರು.

ಈ ಬೃಹತ್ ಕಾರ್ಯಕ್ರಮದಲ್ಲಿ ರೈತರಿಗೆ ಬೆಳೆ ಕಟಾವು ಯಂತ್ರ, ಟ್ರ್ಯಾಕ್ಟರ್, ಮಿನಿ ಟ್ರ್ಯಾಕ್ಟರ್, ರೋಟಾವೇಟರ್, ಹಾರ್ವೆಸ್ಟರ್, ಕಟ್ಟರ್ಸ್, ಟಿಲ್ಲರ್ ಸೇರಿದಂತೆ ಆಧುನಿಕ ಕೃಷಿ ಉಪಕರಣಗಳು, ವಿವಿಧ ನಿಗಮಗಳಿಂದ ಟ್ಯಾಕ್ಸಿ ಸೇರಿದಂತೆ ಒಟ್ಟು 1.46 ಲಕ್ಷ ಫಲಾನುಭವಿಗಳಿಗೆ 236 ಕೋಟಿ ರೂ. ವೆಚ್ಚದ ಸವಲತ್ತುಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಕ್ರಿಕೆಟ್ ಸ್ಟೇಡಿಯಂಗೆ 41 ಎಕರೆ:-

ಹಲವಾರು ದಶಕಗಳಿಂದ ಜಿಲ್ಲೆಯಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡಬೇಕೆಂಬ ಒತ್ತಾಯವಿದ್ದು, ಈ ನಿಟ್ಟಿನಲ್ಲಿ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಗೊಲ್ಲಹಳ್ಳಿಯಲ್ಲಿ 41 ಎಕರೆ ಪ್ರದೇಶವನ್ನು ಗುರುತಿಸಿ, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‍ಗೆ ನೀಡಲಾಗಿದೆ. ಮುಖ್ಯಮಂತ್ರಿಗಳು ಡಿಸೆಂಬರ್ 2ರಂದು ಅತ್ಯಾಧುನಿಕ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೂ ಶಂಕುಸ್ಥಾಪನೆ ನೆರವೇರಿಸುವ ಸಾಧ್ಯತೆ ಇದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಮಾದರಿಯಲ್ಲಿ ಅತ್ಯಾಧುನಿಕ ಕ್ರಿಕೆಟ್ ಸ್ಟೇಡಿಯಂ ಇದಾಗಲಿದೆ ಎಂದು ತಿಳಿಸಿದರು.

ಅರ್ಹರಿಗೆ ಮಾತ್ರ ಬಿಪಿಎಲ್ ಕಾರ್ಡ್:-

ವಿರೋಧ ಪಕ್ಷದವರು ಬಿಪಿಎಲ್ ಪಡಿತರ ಚೀಟಿಗಳ ಬಗ್ಗೆ ಜನರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಆದಾಯ ತೆರಿಗೆ ಪಾವತಿಸುವವರು, ಸರ್ಕಾರಿ ನೌಕರರು, ನಾಲ್ಕು ಚಕ್ರ ವಾಹನ(ವೈಟ್ ಬೋರ್ಡ್) ಹೊಂದಿರುವವರು ನಿಯಮಾವಳಿಯನ್ವಯ ಬಿಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹರಿರುವುದಿಲ್ಲ. ರಾಜ್ಯದಲ್ಲಿ ಅಂಕಿ ಅಂಶಗಳ ಪ್ರಕಾರ ಶೇ. 80ರಷ್ಟು ಕುಟುಂಬಗಳು ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿವೆ. ಕರ್ನಾಟಕವು ದೇಶದಲ್ಲಿ ತೆರಿಗೆ ಪಾವತಿಸುವಲ್ಲಿ 2ನೇ ಸ್ಥಾನದಲ್ಲಿದ್ದರೂ ಶೇ.80ರಷ್ಟು ಬಿಪಿಎಲ್ ಕುಟುಂಬವಿರಲು ಹೇಗೆ ಸಾಧ್ಯ? ಜಿಲ್ಲೆಯಲ್ಲಿ 4547 ಆದಾಯ ತೆರಿಗೆ ಪಾವತಿದಾರರು, 219 ಸರ್ಕಾರಿ ನೌಕರರು, ವಾರ್ಷಿಕ 1.20 ಲಕ್ಷ ರೂ.ಗಳಿಗಿಂತಲೂ ಹೆಚ್ಚು ಕೌಟುಂಬಿಕ ಆದಾಯ ಹೊಂದಿರುವವರು ಸೇರಿ 19 ಸಾವಿರಕ್ಕು ಹೆಚ್ಚು ಪಡಿತರ ಚೀಟಿಯನ್ನು ಹೊಂದಿದ್ದಾರೆ. ಅನರ್ಹ ಬಿಪಿಎಲ್ ಪಡಿತರ ಚೀಟಿ ಹೊಂದಿದವರನ್ನು ಪತ್ತೆಹಚ್ಚಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಿಪಿಎಲ್ ಕುಟುಂಬದ ಅರ್ಹರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಬೇಕೆಂಬ ದೃಷ್ಟಿಯಿಂದ ಅನರ್ಹ ಪಡಿತರ ಚೀಟಿಯನ್ನು ರದ್ದುಪಡಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂಬ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವ ಸಲುವಾಗಿ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲಾಗುತ್ತಿದೆ ಎಂದು ವಿರೋಧಪಕ್ಷದವರು ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ಸ್ಪಷ್ಟಪಡಿಸಿದರು.

ಜನರ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ :-

ರಾಜ್ಯದ ಜನತೆ ನಮ್ಮ ಸರ್ಕಾರದ ಮೇಲೆ ಇಟ್ಟಿರುವ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಹಲವಾರು ಭರವಸೆಗಳನ್ನು ಈಡೇರಿಸಿದ್ದೇವೆ. ಐದು ವರ್ಷ ಕಳೆಯುವುದರೊಳಗೆ ಎಲ್ಲ ಭರವಸೆಗಳನ್ನು ಹಂತಹಂತವಾಗಿ ಅನುಷ್ಠಾನಗೊಳಿಸುತ್ತೇವೆ ಎಂದು ಹೇಳಿದರು.
ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬೀದಿ ನಾಯಿಗಳ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ನಗರ ವ್ಯಾಪ್ತಿಯಲ್ಲಿ 3000 ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲು ಪಾಲಿಕೆ ಮುಂದಾಗಿದ್ದು, ಈಗಾಗಲೇ 700 ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಹಾಗೂ ಆ್ಯಂಟಿ ರೇಬಿಸ್ ವ್ಯಾಕ್ಸಿನೇಷನ್ ಮಾಡಲಾಗಿದೆ ಎಂದು ತಿಳಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಒಂದು ಬಾರಿ ತೀರುವಳಿ (ಒಟಿಎಸ್) ಮೂಲಕ ಆಸ್ತಿ ತೆರಿಗೆ ಬಾಕಿ ಪಾವತಿಸಲು ಅವಕಾಶ ನೀಡಿರುವಂತೆ ಪಾಲಿಕೆಯಲ್ಲಿಯೂ ಅವಕಾಶ ಕಲ್ಪಿಸಬೇಕು ಎಂಬ ಪತ್ರಕರ್ತರ ಮನವಿಗೆ ಸ್ಪಂದಿಸಿದ ಅವರು ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ ಪಾಲಿಕೆಯಲ್ಲೂ ಸಹ ಒಂದು ಬಾರಿ ತೀರುವಳಿ(ಒಟಿಎಸ್)ಗೆ ಸಮಯ ನಿಗಧಿ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮೊದಲ ಬಾರಿಗೆ ನವಂಬರ್ 24ರಂದು ರಾಜ್ಯ ಮಟ್ಟದ ಪತ್ರಕರ್ತರ ಕ್ರಿಡಾಕೂಟವನ್ನು ಆಯೋಜಿಸಲಾಗಿದೆ. ಜಿಲ್ಲೆಯ ಪತ್ರಕರ್ತರು ಕ್ರಿಯಾಶೀಲರಾಗಿ ಎಲ್ಲಾ ಕ್ರೀಡೆಗಳಲ್ಲೂ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಹಾರೈಸಿದರು.

ಇದಕ್ಕೂ ಮುನ್ನ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ರಾಜ್ಯ ಮಟ್ಟದ ಪತ್ರಕರ್ತರ ಕ್ರೀಡಾಕೂಟದ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು. ಹೊರ ಜಿಲ್ಲೆಗಳಿಂದ ಕ್ರೀಡಾಕೂಟಕ್ಕೆ ಆಗಮಿಸುವವರ ವಾಸ್ತವ್ಯ, ಕ್ರೀಡಾಂಗಣದ ಸ್ವಚ್ಛತೆ, ನಿರಂತರ ವಿದ್ಯುತ್ ಸಂಪರ್ಕ, ಮೂಲಭೂತ ಸೌಕರ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಜಿಲ್ಲಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here