ಕೆ.ಎನ್. ರಾಜಣ್ಣ ನಾನು 4೦ ವರ್ಷದಿಂದ ಸ್ನೇಹಿತರು: ಜಿ.ಎಸ್.ಬಸವರಾಜು

ತುಮಕೂರು: ಅನಾರೋಗ್ಯ ಕಾರಣದಿಂದ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದೆ. ಹೀಗಾಗಿ ಕ್ಷೇತ್ರಗಳಿಗೆ ಹೋಗಿ ಪ್ರಚಾರ ಮಾಡಲು ಸಾಧ್ಯವಾಗಿಲ್ಲ ಎಂದಿರುವ ಸಂಸದ ಜಿ.ಎಸ್. ಬಸವರಾಜು ಅವರು, ಈ ಬಾರಿ ಮೇಲ್ಮನೆಗೆ ಬಿಜೆಪಿ ಅಭ್ಯರ್ಥಿ ಪ್ರವೇಶಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಮಹಾನಗರ ಪಾಲಿಕೆಯ ಮತಗಟ್ಟೆಯಲ್ಲಿ ಮತಚಲಾವಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದೇನೆ. ಈ ಬಾರಿ ನಮ್ಮ ಪಕ್ಷದ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂದರು.

ಆರೋಗ್ಯ ಸಮಸ್ಯೆಯಿಂದ ಕ್ಷೇತ್ರಗಳಿಗೆ ಹೋಗಿ ಪ್ರಚಾರ ಮಾಡಲು ಸಾಧ್ಯವಾಗಿಲ್ಲ. ಆದರೆ ಮುಖಂಡರಿಗೆ ದೂರವಾಣಿ ಕರೆ ಮಾಡಿ ಮತಯಾಚಿಸಿದ್ದೇನೆ. ಟ್ರೆಂಡ್ ಹೇಗಿದೆ ಎಂಬುದನ್ನು ಹೇಳಲು ಆಗುವುದಿಲ್ಲ ಎಂದು ಅವರು ಹೇಳಿದರು.

ಇಂದು ಮತದಾನ ಮಾಡುತ್ತಿರುವವರು ಕೂಡ ಜನಗಳಿಂದ ಆಯ್ಕೆಯಾದವರು. ಯಾವ ರೀತಿ ಮಾಡುತ್ತಾರೋ ಗೊತ್ತಿಲ್ಲ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಕಾರ್ಪೋರೇಟರ್ ಜತೆ ಬಂದು ಮತದಾನ ಮಾಡಿದ್ದನ್ನು ಪತ್ರಕರ್ತರು ಪ್ರಶ್ನಿಸಿದಾಗ, ಅವನು ನನ್ನ ಹಳೆ ಶಿಷ್ಯ, ನಾನ್ಯಾರಿಗೆ ಹೇಳುತ್ತೀನೋ ಅವರಿಗೆ ಅವನು ಓಟ್ ಹಾಕ್ತಾನೆ. ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ತಮಗಿದೆ ಎಂದು ಪುನರುಚ್ಚರಿಸಿದರು. ಬಿಜೆಪಿ ಅಭ್ಯರ್ಥಿ ಪರ ಸಂಸದರು ಪ್ರಚಾರ ಮಾಡದಿರುವ ಬಗ್ಗೆ ಪ್ರಸ್ತಾಪಿಸಿದಾಗ ಏರ್‌ಪೋರ್ಟ್‌ನಲ್ಲಿ ಬ್ರೆಡ್ ತಿಂದು ಒಂದು ವಾರದಿಂದ ನನ್ನ ಆರೋಗ್ಯ ಕೆಟ್ಟಿದೆ. ನನ್ನ ವಿರೋಧಿಗಳು ನನ್ನ ಪಕ್ಷದಲ್ಲೇ ಬಹಳಷ್ಟು ಜನ ಇದ್ದಾರೆ. ನಮ್ಮ ಆತ್ಮ ಗೌರವ ಉಳಿಸಿಕೊಳ್ಳಲು ನಾವೇನು ಮಾಡಬೇಕೋ ಅದನ್ನು ಮಾಡುತ್ತೇವೆ. ಅವನ್ಯಾವನೋ ಚಂಗಲು, ದಾರೀಲಿ ಹೋಗೋನು ಹೇಳಿದ್ದು ನಾನು ಕೇಳೋಕೆ ಆಗಲ್ಲ ಎಂದು ಪ್ರತಿಕ್ರಿಯಿಸಿದರು.

ಎಲ್ಲಾ ವಿಚಾರದಲ್ಲಿ ಋಣ ತೀರುಸುತ್ತೇವೆ. ಕೆಲವೊಂದು ವಿಚಾರದಲ್ಲಿ ತೀರಿಸಲು ಆಗುವುದಿಲ್ಲ. ಆದರೆ ಪಕ್ಷ ಅಂತಾ ಬಂದಾಗ ಪಕ್ಷದ ಚಿನ್ಹೆಗೆ ಓಟ್ ಹಾಕುತ್ತೇವೆ. ಓಟ್ ಹಾಕದಿರುವುದು ಅಸಭ್ಯ ವರ್ತನೆ ಹಾಗೂ ಅವನು ಮನುಷ್ಯನೇ ಅಲ್ಲ ಎಂದರು.

ಮಾಜಿ ಶಾಸಕ ಕೆ.ಎನ್. ರಾಜಣ್ಣ ನಾನು 4೦ ವರ್ಷಗಳಿಂದ ಜತೆಗಿರುವ ರಾಜಕಾರಣಿಗಳು ಮತ್ತು ಸ್ನೇಹಿತರು. ನಾವು ಅವರು ಚೆನ್ನಾಗಿ ಇರುತ್ತೇವೆ. ನಾವು ಹೇಳಿದ್ದು, ಅವರು ಮಾಡುತ್ತಾರೆ, ಅವರು ಹೇಳಿದ್ದನ್ನು ನಾವು ಮಾಡುತ್ತೇವೆ. ಆದರೆ ಪಕ್ಷದ ವಿಚಾರ ಬಂದಾಗ ನಮ್ಮ ನಿಷ್ಠೆ ನಮಗೇ ಇದ್ದೇ ಇರುತ್ತದೆ. ಈ ಬಗ್ಗೆ ಯಾರೋ ಹೇಳಿದ ಮಾತು ಕೇಳಬಾರದು ಎಂದರು.

error: Content is protected !!