ಕೊರಟಗೆರೆ: ಹಾಲಿನ ಉತ್ಪನ್ನಗಳ ತಯಾರಿಕಾ ಘಟಕ ದಲ್ಲಿ ಬಾಯ್ಲರ್ ಸ್ಫೋಟಗೊಂಡು ಓರ್ವ ಕಾರ್ಮಿಕ ಗಂಭೀ ರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿ ನಡೆದಿದೆ.
ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಘಟನೆಯಲ್ಲಿ ತಾಲ್ಲೂಕಿನ ಮಲ್ಲೇಶ್ವರ ಗ್ರಾಮದ ಕಾರ್ಮಿಕ ಯೋಗೇಶ್ (25) ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟಕದ ಮಾಲೀಕ ಸದಾಶಿವಯ್ಯ ಎಂಬುವರು ತಮ್ಮ ಮನೆಯ ಕೆಳ ಮಹಡಿಯಲ್ಲಿ ಹಾಲಿನ ಉತ್ಪನ್ನಗಳ ತಯಾರಿಕಾ ಘಟಕ ನಡೆಸುತ್ತಿದ್ದರು. ಹಾಲಿನ ಉತ್ಪನ್ನಗಳಾದ ಮೊಸರು, ಮಸಾಲ ಮಜ್ಜಿಗೆ, ಕೋವಾ, ಜಾಮೂನ್, ಇತ್ಯಾದಿ ಪದಾರ್ಥಗಳ ಉತ್ಪಾದನೆ ಮಾಡಿ ಮಾರಾಟ ಮಾಡುತ್ತಿದ್ದರು. ಘಟಕದಲ್ಲಿ ಕಳೆದ ರಾತ್ರಿ ಸೌದೆ ಬಾಯ್ಲರ್ ಸ್ಪೋಟಗೊಂಡಿದೆ.
ಬಾಯ್ಲರ್ ಸ್ಪೋಟದಿಂದ ಉಂಟಾದ ಶಬ್ದದ ತೀವ್ರತೆಗೆ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಘಟನೆಯಲ್ಲಿ ಕಾರ್ಮಿಕ ಯೋಗಿಶ್ ಅವರ ಮುಖ ಹಾಗೂ ದೇಹ ಸಂಪೂರ್ಣ ಸುಟ್ಟು ಹೋಗಿದೆ. ಕೂಡಲೇ ಅವರನ್ನ ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಕಾರ್ಮಿಕ ಯೋಗಿಶ್ ಅವರ ಸ್ಥಿತಿ ಗಂಭೀರವಾಗಿದೆ. ಕೊರಟಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.