ಜೆಡಿಎಸ್ ತೊರೆದು ಕಾಂಗ್ರೆಸ್‌ನತ್ತ ಮುಖ ಮಾಡಿದ ಬೆಮೆಲ್‌.

ತುಮಕೂರು: ವಿಧಾನ ಪರಿಷತ್ ಸದಸ್ಯ ಮತ್ತು ಜೆಡಿಎಸ್ ನಾಯಕ ಬೆಮೆಲ್ ಕಾಂತರಾಜು ಕಾಂಗ್ರೆಸ್ ಸೇರಲು ಸಿದ್ದತೆ ನಡೆಸಿದ್ದಾರೆ. ಈಗಾಗಲೇ ಜಿಲ್ಲೆಯ ಹಲವು ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರಿದ್ದು ಇನ್ನು ಕೆಲವರು ಇದೆ ಹಾದಿಯಲ್ಲಿದ್ದಾರೆ.

ವಿಧಾನ ಪರಿಷತ್ ಸದಸ್ಯ, ತುಮಕೂರು ಭಾಗದ ಪ್ರಬಲ ಒಕ್ಕಲಿಗ ನಾಯಕ ಬೆಮಲ್ ಕಾಂತರಾಜು ಜೆಡಿಎಸ್ ತೊರೆಯಲಿದ್ದಾರೆ. ಬೆಮಲ್ ಕಾಂತರಾಜು ವಿಧಾನ ಪರಿಷತ್ ಸದಸ್ಯತ್ವದ ಅವಧಿ ಜನವರಿ 5ರ ತನಕವಿದೆ. ಇದೆ ತಿಂಗಳು ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಮೆಲ್ ಸ್ಪರ್ಧೆ ಮಾಡಿರಲಿಲ್ಲ. ತುಮಕೂರು ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಗೆ ಜೆಡಿಎಸ್ ಅನಿಲ್ ಕುಮಾರ್‌ರನ್ನು ಕಣಕ್ಕಿಳಿಸಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರ್. ರಾಜೇಂದ್ರ ಗೆಲುವು ಸಾಧಿಸಿದ್ದರು.

ತುರುವೇಕೆರೆಯಲ್ಲಿ ನೂತನ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಮತ್ತು ಬೆಮಲ್ ಕಾಂತರಾಜು ಸಮಾರಂಭವೊಂದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಆರ್. ರಾಜೇಂದ್ರ, “ಬೆಮಲ್ ಕಾಂತರಾಜು ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದು, ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಲಿದ್ದಾರೆ” ಕಾಂಗ್ರೆಸ್‌ ಪಕ್ಷ ಸೇರುವ ದಿನಾಂಕವನ್ನು ಬೆಮಲ್ ಕಾಂತರಾಜು ನಿರ್ಧರಿಸಲಿದ್ದಾರೆ. ಅವರ ಪಕ್ಷ ಸೇರ್ಪಡೆಯಿಂದ ಪಕ್ಷವು ಸಂಘಟನಾತ್ಮಕವಾಗಿ ಮತ್ತಷ್ಟು ಸದೃಢವಾಗಲಿದೆ” ಎಂದು ಆರ್. ರಾಜೇಂದ್ರ ಹೇಳಿದ್ದರು.

ಕೆಲವು ದಿನಗಳ ಹಿಂದೆಯೇ ಬೆಮಲ್ ಕಾಂತರಾಜು ಜೆಡಿಎಸ್ ಪಕ್ಷ ಬಿಡುವ ಸುಳಿವು ನೀಡಿದ್ದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು.ನಾನು ಜೆಡಿಎಸ್ ಪಕ್ಷದಲ್ಲಿ ಇರುವಾಗಲೇ ಎಚ್. ಡಿ. ಕುಮಾರಸ್ವಾಮಿ ಬೆಮಲ್ ಕಾಂತರಾಜು ಯಾರು? ಎಂದು ಕೇಳಿದ್ದಾರೆ. ಅಂದರೆ ನಾನು ಯಾರು ಎಂದು ಗೊತ್ತಿಲ್ಲ ಅಂತಾನೆ ಅರ್ಥ, ಹಾಗಾಗಿ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ” ಎಂದು ಹೇಳಿದ್ದರು.

“ಈಗಾಗಲೇ ನಾನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಭೇಟಿ ಮಾಡಿದ್ದೇನೆ” ಎಂದು ತಿಳಿಸಿದ್ದರು. “ಜೆಡಿಎಸ್ ಪಕ್ಷದಲ್ಲಿ ನಾನು ಹತ್ತಾರು ವರ್ಷಗಳಿಂದ ಇದ್ದೇನೆ. ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿದ್ದೇನೆ. ನಾನು ಪರಿಷತ್ ಸದಸ್ಯನಾಗಿ ಆಯ್ಕೆಯಾದರೂ ಸಹ ನಾನು ಯಾರು ಎಂದು ಕುಮಾರಸ್ವಾಮಿ ಅವರಿಗೆ ತಿಳಿದಿಲ್ಲ. ನಾನು ಯಾಕೆ ಪಕ್ಷದಲ್ಲಿ ಇರಬೇಕು?” ಎಂದು ಬೆಮಲ್ ಕಾಂತರಾಜು ಪ್ರಶ್ನಿಸಿದ್ದರು.

ಈಗಾಗಲೇ ಹಲವಾರು ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮಾಜಿ ಪರಿಷತ್ ಸದಸ್ಯ ಸಿ. ಆರ್.‌ ಮನೋಹರ್ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಚಾಮುಂಡೇಶ್ವರಿ ಕ್ಷೇತ್ರ ಶಾಸಕ ಜಿ. ಟಿ. ದೇವೇಗೌಡ, ಕೋಲಾರ ಶಾಸಕ ಕೆ. ಶ್ರೀನಿವಾಸ ಗೌಡ ಕಾಂಗ್ರೆಸ್ ಸೇರಲಿದ್ದಾರೆ.

ಕೆಲವು ದಿನಗಳ ಹಿಂದೆ ಮಾಜಿ ಶಾಸಕ ಎನ್. ಎಚ್. ಕೋನರಡ್ಡಿ ಬೆಳಗಾವಿಯಲ್ಲಿ ಕಾಂಗ್ರೆಸ್ ಸೇರಿದ್ದರು. ಗೋಕಾಕ್ ಕ್ಷೇತ್ರದ ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಸಹ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ.

ತುಮಕೂರಿನ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ್ ಸಹ ಪಕ್ಷ ಬಿಡಲಿದ್ದಾರೆ ಎಂಬ ಸುದ್ದಿಗಳು ಆಗಾಗ ಕೇಳಿ ಬರುತ್ತಿವೆ.

error: Content is protected !!