ಬೆಂಗಳೂರು – ಹೈದರಾಬಾದ್ ಬುಲೆಟ್ ಟ್ರೈನ್… ರೈಲ್ವೇ ಮಹತ್ವದ ನಿರ್ಧಾರ

ನವದೆಹಲಿ: ದೇಶದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದಾಪುಗಾಲು ಹಾಕುತ್ತಿದೆ. ಅದರ ಭಾಗವಾಗಿ ಈಗಾಗಲೇ ದೇಶದ ಎಂಟು ಕಾರಿಡಾರ್ ಗಳಲ್ಲಿ ಬುಲೆಟ್ ರೈಲುಗಳು ಲಭ್ಯವಾಗಿಸಲು ನಿರ್ಧರಿಸಿದೆ. ಆದರೆ ಭವಿಷ್ಯದ ಅಗತ್ಯಗಳು, ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಗಣಿಸಿ ಇನ್ನೂ ನಾಲ್ಕು ಕಾರಿಡಾರ್‌ಗಳಲ್ಲಿ ಬುಲೆಟ್ ರೈಲು ಓಡಿಸಲು ನಿರ್ಧರಿಸಿದೆ.

ವಿಶ್ವದ ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿ ಅಭಿವೃದ್ಧಿ ಹೊಂದುತ್ತಿದ್ದರೂ, ಬುಲೆಟ್ ರೈಲುಗಳ ವಿಷಯದಲ್ಲಿ ಭಾರತ ಈಗಲೂ ಹಿಂದುಳಿದಿದೆ. ಏಷ್ಯಾದ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾ, ಜಪಾನ್‌ನಲ್ಲಿ ಈಗಾಗಲೇ ಬುಲೆಟ್ ರೈಲುಗಳು ಓಡುತ್ತಿವೆ. ಇದರೊಂದಿಗೆ ಬುಲೆಟ್ ಟ್ರೈನ್ ಹೊಂದಿರುವ ದೇಶಗಳ ಸಾಲಿಗೆ ಭಾರತವನ್ನೂ ಸೇರಿಸಲು ಕೇಂದ್ರ ನಿರ್ಧರಿಸಿದೆ.

ಬುಲೆಟ್ ರೈಲು ಕನಸು ನನಸು ಮಾಡಲು ರೈಲ್ವೇ ಇಲಾಖೆ ಮೊದಲು 8 ಮಾರ್ಗಗಳಲ್ಲಿ ಬುಲೆಟ್ ರೈಲುಗಳು ಲಭ್ಯವಾಗುವಂತೆ ನಿರ್ಧರಿಸಿದೆ. ಇವುಗಳಲ್ಲಿ ಮುಂಬೈ – ಸೂರತ್ – ವಡೋದರಾ – ಅಹಮದಾಬಾದ್, ದೆಹಲಿ – ನೋಯ್ಡಾ – ಆಗ್ರಾ – ಕಾನ್ಪುರ – ಲಕ್ನೋ – ವಾರಣಾಸಿ, ದೆಹಲಿ – ಜೈಪುರ – ಉದಯಪುರ – ಅಹಮದಾಬಾದ್, ಮುಂಬೈ – ನಾಸಿಕ್ – ನಾಗ್ಪುರ, ಮುಂಬೈ – ಪುಣೆ – ಹೈದರಾಬಾದ್, ಚೆನ್ನೈ – ಬೆಂಗಳೂರು – ಮೈಸೂರು, ದೆಹಲಿ – ಚಂಡೀಗಢ – ಲೂಧಿಯಾನ – ಜಲಂಧರ್ – ಅಮೃತಸರ, ವಾರಣಾಸಿ – ಪಾಟ್ನಾ – ಹೌರಾ ಮಾರ್ಗಗಳು ಸೇರಿವೆ

ಮೊದಲು ಪ್ರಸ್ತಾಪಿಸಲಾದ 8 ಕಾರಿಡಾರ್‌ಗಳಲ್ಲಿ ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ 508 ಕಿಮೀ ಉದ್ದದ ಬುಲೆಟ್ ರೈಲು ಮಾರ್ಗ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ಮುಂಬೈ ಅಹಮದಾಬಾದ್ ಹೈಸ್ಪೀಡ್ ರೈಲ್ ಎಂಬ ಹೆಸರಿನ ವಿಶೇಷ ಯೋಜನೆ ಆರಂಭಿಸಲಾಗಿದೆ. ಇನ್ನೊಂದು ಕಡೆ ಮುಂಬೈ-ಹೈದರಾಬಾದ್ ಬುಲೆಟ್ ರೈಲು ಮಾರ್ಗದ ಭೂಸ್ವಾಧೀನ ಕಾರ್ಯ ಆರಂಭವಾಗಿದೆ. ಉಳಿದ ಯೋಜನೆಗಳಿಗೆ ಸಂಬಂಧಿಸಿದಂತೆ ಡಿಪಿಆರ್ ಸಿದ್ಧವಾಗಿದೆ.

ಪ್ರಸ್ತುತ ಡಿಪಿಆರ್ ಸಿದ್ಧವಾಗಿರುವ ಯೋಜನೆಗಳ ಜೊತೆಗೆ ಇತರ ನಾಲ್ಕು ಮಾರ್ಗಗಳಲ್ಲಿ ಬುಲೆಟ್ ರೈಲು ಲಭ್ಯವಾಗುವಂತೆ ರೈಲ್ವೆ ನಿರ್ಧರಿಸಿದೆ. ಇವುಗಳಲ್ಲಿ ಬೆಂಗಳೂರು – ಹೈದರಾಬಾದ್ (618 ಕಿಮೀ), ನಾಗ್ಪುರ – ವಾರಣಾಸಿ (855 ಕಿಮೀ), ಪಾಟ್ನಾ – ಗುವಾಹಟಿ (850 ಕಿಮೀ), ಅಮೃತಸರ – ಪಠಾಣ್‌ಕೋಟ್ – ಜಮ್ಮು (192 ಕಿಮೀ) ಸೇರಿವೆ. ಈ ಯೋಜನೆಗಳನ್ನು ಈಗಾಗಲೇ ರಾಷ್ಟ್ರೀಯ ರೈಲು ಯೋಜನೆ 2022 ರಲ್ಲಿ ಸೇರಿಸಲಾಗಿದೆ. ಈ ಮಾರ್ಗಗಳಲ್ಲಿ ಬುಲೆಟ್ ರೈಲು ನಿರ್ಮಾಣಕ್ಕೆ ಶೀಘ್ರವೇ ಡಿಪಿಆರ್ ಸಿದ್ಧಗೊಳ್ಳಲಿದೆ.

ಕೇಂದ್ರ ಜಾರಿಗೊಳಿಸುತ್ತಿರುವ ಬುಲೆಟ್ ರೈಲು ಯೋಜನೆಯಿಂದ ಗುಜರಾತ್, ಉತ್ತರ ಪ್ರದೇಶ ರಾಜ್ಯಗಳು ಗಣನೀಯವಾಗಿ ಲಾಭ ಪಡೆದಿದ್ದರೆ, ದಕ್ಷಿಣದ ಕೇರಳ, ಆಂಧ್ರಪ್ರದೇಶದ ಜೊತೆಗೆ ಒಡಿಶಾ, ಜಾರ್ಖಂಡ್ ರಾಜ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ತಮಿಳುನಾಡು, ಮಧ್ಯಪ್ರದೇಶ, ಜಮ್ಮು – ಕಾಶ್ಮೀರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಗೆ ಬುಲೆಟ್ ರೈಲು ಯೋಜನೆಗಳು ಬರೀ ಭರವಸೆಗಳಾಗಿವೆ.

error: Content is protected !!