ಅಡಿಕೆಯಲ್ಲಿ ಇಂಗಾರು ಒಣಗುವ ಸಮಸ್ಯೆಯೇ: ರೈತರಿಗೆ ಇಲ್ಲಿದೆ ಸಲಹೆ

ಅಡಿಕೆ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ. ಇದನ್ನು ಮಲೆನಾಡು, ಅರೆಮಲೆನಾಡು ಮತ್ತು ಮೈದಾನ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದ್ದು, ಆಯಾ ಪ್ರದೇಶಕ್ಕನುಗುಣವಾಗಿ ಅಡಿಕೆ ಬೆಳೆಗಾರರಿಗೆ ಅನೇಕ ಸಮಸ್ಯೆಗಳು ಕಾಡುತ್ತವೆ. ಮಲೆನಾಡಿನಲ್ಲಿ ಕೊಳೆರೋಗ, ಬೇರುಹುಳು, ಸುಳಿಕೊಳೆ ಹೆಚ್ಚಾಗಿ ಕಂಡು ಬಂದರೆ, ಅರೆಮಲೆನಾಡು ಹಾಗೂ ಮೈದಾನ ಪ್ರದೇಶಗಳಲ್ಲಿ ಸುಳಿ ತಿಗಣೆ, ಹಿಡಿಮುಂಡಿಗೆ, ಅಣಬೆ ರೋಗ, ನುಸಿಬಾಧೆ ಹೆಚ್ಚು. ಆದರೆ ಅಡಿಕೆ ಬೆಳೆಯುವ ಎಲ್ಲಾ ಪ್ರದೇಶಗಳಲ್ಲೂ ಇಂಗಾರು ಅಥವಾ ಹೂ ಗೊಂಚಲು ಒಣಗುವ ಸಮಸ್ಯೆ ವ್ಯಾಪಕವಾಗಿ ಕಂಡು ಬರುತ್ತಿದೆ. ಸಾಮಾನ್ಯವಾಗಿ ಈ ಸಮಸ್ಯೆಯು ಬೇಸಿಗೆಯಲ್ಲಿ ಹೆಚ್ಚು. ಆದರೆ ಪ್ರಸಕ್ತ ಹಂಗಾಮಿನಲ್ಲಿ ಈಗಾಗಲೇ ಅಡಿಕೆಯಲ್ಲಿ ಇಂಗಾರು / ಹೂಗೊಂಚಲುಗಳು ಒಣಗುವ ಸಮಸ್ಯೆ ಕಂಡು ಬಂದಿದ್ದು, ಹೂಗೊಂಚಲು ಒಣಗುವ ರೋಗ ನಿಯಂತ್ರಣಕ್ಕಾಗಿ ರೈತರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಸೂಕ್ತ.

ಹೂಗೊಂಚಲು ಒಣಗುವ ರೋಗದ ಲಕ್ಷಣಗಳು :

ಕರ್ನಾಟಕದಲ್ಲಿ ಶೇಕಡ 60ಕ್ಕೂ ಹೆಚ್ಚು ಮರಗಳಲ್ಲಿ ಈ ರೋಗವು ಕಂಡುಬರುತ್ತದೆ. ಹೂಗೊಂಚಲು ಒಣಗುವ ರೋಗವು ಕೊಲ್ಲೆಟೋಟ್ರೈಕಂ ಗ್ಲಿಯೋಸ್ಪೊರಾಯಿಡ್ಸ್ ಎಂಬ ಶಿಲೀಂಧ್ರ ರೋಗಾಣು ಹಾಗೂ ಇಂಗಾರ ತಿನ್ನುವ ಹುಳುವಿನಿಂದ ಬರುತ್ತದೆ. ಇಡೀ ವರ್ಷ ಈ ರೋಗವು ಮರಗಳನ್ನು ಬಾಧಿಸಿದರೂ ಸಹ ರೋಗದ ತೀವ್ರತೆ ಬೇಸಿಗೆಯಲ್ಲಿ(ಫೆಬ್ರವರಿ-ಮೇ) ಹೆಚ್ಚು. ಆದರೆ ವಾತಾವರಣದ ವೈಪರೀತ್ಯದಿಂದ ಪ್ರಸಕ್ತ ಹಂಗಾಮಿನಲ್ಲಿ ಈಗಾಗಲೇ ಇಂಗಾರುಗಳು ಕಂಡಿದ್ದು, ರೋಗ ಹೆಚ್ಚಾಗುವ ಸಾಧ್ಯತೆ ಇದೆ.
ಮೊದಲಿಗೆ ಹೂಗೊಂಚಲುಗಳು ತುದಿಯಿಂದ ಪ್ರಾರಂಭಗೊಂಡು ಬುಡದ ಕಡೆಗೆ ಹಳದಿಯಾಗಿ ನಂತರ ಕಂದು ಬಣ್ಣಕ್ಕೆ ತಿರುಗಿ ಒಣಗುತ್ತದೆ. ಎಳೆಕಾಯಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉದುರುತ್ತವೆ. ಈ ರೋಗವು ಶಿಲೀಂದ್ರ ರೋಗಾಣುವಿನಿಂದಲ್ಲದೇ ಇತರೆ ಕಾರಣಗಳಿಂದಲೂ ಉಂಟಾಗಬಹುದು. ಪ್ರಮುಖವಾಗಿ ಹವಾಮಾನ ವೈಪರೀತ್ಯ, ಕಾಲಕ್ಕೆ ಸರಿಯಾಗಿ ಪರಾಗ ಸ್ಪರ್ಶ ಆಗದೆ ಇರುವಿಕೆ, ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆ, ನೀರಿನ ಕೊರತೆ, ಹೆಚ್ಚಿನ ಉಷ್ಣಾಂಶ ರೋಗ ತಗುಲಲು ಕಾರಣವಾಗಿವೆ. ಈ ರೋಗವನ್ನು ಬಸವನಹುಳು ಹಾಗೂ ಇರುವೆ / ಗೊದ್ದಗಳು ಒಂದು ಮರದಿಂದ ಇನ್ನೊಂದು ಮರಕ್ಕೆ ಹರಡುತ್ತವೆ.

ಇಂಗಾರ ತಿನ್ನುವ ಹುಳುವಿನ ಹಾನಿಯ ಲಕ್ಷಣಗಳು:

ಇಂಗಾರ ತಿನ್ನುವ ಹುಳು(Trithaba mundella)ವಿನಿಂದಲೂ ಅಡಿಕೆ ಹೂಗೊಂಚಲು ಒಣಗುತ್ತದೆ. ಇಂಗಾರ ತಿನ್ನುವ ಹುಳುವು ಪತಂಗದ ಜಾತಿಗೆ ಸೇರಿದ್ದು, ಹೆಚ್ಚಾಗಿ ಇಂಗಾರದ ಕವಚದ ಮೇಲೆ ಅಥವಾ ಇಂಗಾರದ ಮೇಲೆಯೇ ಮೊಟ್ಟೆಗಳನ್ನಿಡುತ್ತದೆ. ಒಂದು ಹೆಣ್ಣು ಪತಂಗವು ೧೦೦ ರಿಂದ ೧೫೦ರಷ್ಟು ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆ ಗೋಳಾಕಾರವಾಗಿದ್ದು, ಮಾಸಲು ಬಿಳಿ ಬಣ್ಣವನ್ನು ಹೊಂದಿರುತ್ತವೆ. ಮೊಟ್ಟೆಯ ಅವಧಿ ೮ ರಿಂದ ೧೦ ದಿವಸಗಳಿದ್ದು, ಹೊರ ಬಂದ ಮರಿ ಕೀಟಗಳು ಇಂಗಾರದ ಕವಚದಿಂದಲೇ ಒಳಹೋಗಿ ತಿನ್ನುತ್ತವೆ. ಆದ್ದರಿಂದ ಇಂಗಾರ ಅರಳದೆ ಕೊಳೆಯಲು ಪ್ರಾರಂಭಿಸುತ್ತದೆ. ಆದರೆ ಹೆಚ್ಚಾಗಿ ಇಂಗಾರು ಹೊರಬಂದ ಮೇಲೆಯೇ ಹೂ ಗೊಂಚಲನ್ನು ಆಕ್ರಮಿಸುವುದೇ ಅಧಿಕ. ಈ ಕೀಟಗಳು ವಾಸಿಸುವಲ್ಲಿ ಬಲೆಗಳನ್ನು ನೇಯ್ದುಕೊಂಡು ಅಡಿಕೆ ಗೊಂಚಲಿನ ಹೂಗಳನ್ನು ಗಂಡು ಮತ್ತು ಹೆಣ್ಣು ಹುಳುಗಳು ತಿಂದು ನಾಶ ಮಾಡುತ್ತವೆ. ಬಾಧೆಗೊಳಪಟ್ಟ ಇಂಗಾರದಲ್ಲಿ ನೇಯ್ದ ಬಲೆ ಅಲ್ಲಲ್ಲಿ ಗುಂಪು ಗುಂಪಾಗಿದ್ದು, ಆ ಬಲೆಯಲ್ಲಿ ಕೀಟದ ಹಿಕ್ಕೆಯನ್ನು ಕಾಣಬಹುದು. ಆದ್ದರಿಂದ ಇದು ಪರಾಗಸ್ಪರ್ಶಕ್ಕೂ ಸಹ ಅಡೆತಡೆಯನ್ನುಂಟುಮಾಡುತ್ತದೆ. ಇಂಗಾರು ಹುಳುವಿನ ಕಾಟದ ಅವಧಿಯು 20-25 ದಿವಸಗಳಿದ್ದು, ಅಲ್ಲಿಯವರೆಗೆ ಇಂಗಾರವನ್ನು ತಿನ್ನುತ್ತಾ ಇರುತ್ತದೆ. ಕೀಟವು ಮೊದಲು ತಿಳಿ ಹಳದಿ ಬಣ್ಣ ಹೊಂದಿದ್ದು, ಕ್ರಮೇಣ ಮಾಸಲು ಬಣ್ಣಕ್ಕೆ ತಿರುಗುತ್ತದೆ. ನಂತರ ಆ ಬಲೆಯಲ್ಲಿಯೇ ಕೋಶಾವಸ್ಥೆಯನ್ನು ಪೂರೈಸುತ್ತದೆ. ಕೋಶಾವಸ್ಥೆಯ ಅವಧಿ 8-10 ದಿವಸಗಳ ನಂತರ ಪತಂಗವಾಗಿ ಮತ್ತೆ ತನ್ನ ಜೀವನವನ್ನು ಮುಂದುವರೆಸುತ್ತದೆ.

ಅಡಿಕೆ ಮರಗಳಲ್ಲಿ ಹೂಗೊಂಚಲು ಹೊರಬೀಳುವ ಸಮಯದಲ್ಲಿ ಈ ಕೀಟದ ಹಾವಳಿಯು ಅಧಿಕವಾಗಿರುತ್ತದೆ. ಹೂ ಗೊಂಚಲು ಅಥವಾ ಇಂಗಾರವನ್ನು ಈ ಕೀಟವು ತಿಂದು ನಾಶ ಮಾಡುತ್ತದೆ. ಈ ಹುಳುಗಳು ಇಂಗಾರವನ್ನು ಕೊರೆದು ತೂತು ಮಾಡುವುದರಿಂದ ಹೂಗೊಂಚಲುಗಳು ಮುದ್ದೆಯಾಗಿ ಒಣಗುತ್ತವೆ. ಈ ಕೀಟದ ಪತಂಗಗಳು ನಸು ಹಳದಿ ಬಣ್ಣ ಹೊಂದಿದ್ದು, ಇದರ ಮರಿಗಳು ಸುಮಾರು 2 ಸೆಂ.ಮೀ. ಉದ್ದವಿದ್ದು ಕಂದು ಬಣ್ಣವಿರುತ್ತದೆ.

ಇಂಗಾರು ಒಣಗುವ ಸಮಸ್ಯೆಯ ಸಮಗ್ರ ನಿರ್ವಹಣಾ ಕ್ರಮಗಳು:

ರೋಗಕ್ಕೆ ತುತ್ತಾಗಿ ಒಣಗಿದ ಹಾಗು ಬಲೆ ನೇಯ್ದಿರುವ ಇಂಗಾರುಗಳನ್ನು ತೆಗೆದು ನಾಶ ಪಡಿಸುವುದರಿಂದ ರೋಗ ಹರಡದಂತೆ ತಡೆಯಬಹುದು. ಬಲಿತ ಇಂಗಾರವನ್ನು ಕೊಕ್ಕೆಯಿಂದ ಸೀಳಿ ಅರಳಿದ ನಂತರ ಎಲ್ಲಾ ಹೂಗೊಂಚಲು(ಇಂಗಾರ)ಗಳಿಗೂ ಶಿಲೀಂದ್ರ ನಾಶಕ ಸಿಂಪರಣೆ ಕೈಗೊಳ್ಳಬೇಕು. ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಬಸಿಗಾಲುವೆ ವ್ಯವಸ್ಥೆ ಕೈಗೊಳ್ಳಬೇಕು ಹಾಗೂ ಬಸವನ ಹುಳು ಹಾಗೂ ಗೊದ್ದ/ಇರುವೆಗಳ ನಿಯಂತ್ರಣ ಮಾಡಬೇಕು.
ಮಣ್ಣು ಪರೀಕ್ಷೆ ಆಧಾರದ ಮೇಲೆ ಸಮಗ್ರ ಪೋಷಕಾಂಶಗಳ ನಿರ್ವಹಣೆ ಮಾಡಬೇಕು. ಅದರಲ್ಲೂ ಪೊಟ್ಯಾಷ್ ಸರಿಯಾದ ಪ್ರಮಾಣದಲ್ಲಿ ನೀಡಬೇಕು. ಪ್ರತಿ ಲೀಟರ್ ನೀರಿಗೆ 2 ಗ್ರಾಂ ಮ್ಯಾಂಕೋಜೆಬ್+ಕಾರ್ಬನ್ಡೇಜಿಂ(ಸಾಫ್) ಶಿಲೀಂಧ್ರ ನಾಶಕ ಹಾಗೂ ೨ ಮಿಲಿ ಕ್ಲೋರೋಫೈರಿಫಾಸ್ ಕೀಟನಾಶಕ ಬೆರಸಿದ ದ್ರಾವಣವನ್ನು ಹೂಗೊಂಚಲುಗಳು ಸಂಪೂರ್ಣವಾಗಿ ತೊಯ್ಯುವಂತೆ ಸಿಂಪಡಿಸಬೇಕು. ಪ್ರತಿ ೨೦೦ ಲೀಟರ್ ಸಿಂಪರಣಾ ದ್ರಾವಣಕ್ಕೆ 200 ಮಿಲಿ ಯಾವುದಾದರೂ ಅಂಟನ್ನು ಬೆರಸುವುದು ಸೂಕ್ತ. ರೋಗದ ಬಾಧೆಯು ಹೆಚ್ಚಾಗಿದ್ದಲ್ಲಿ ಅಗತ್ಯತೆಗೆ ಅನುಗುಣವಾಗಿ 20-25 ದಿನಗಳ ನಂತರ ಮತ್ತೊಂದು ಸಿಂಪರಣೆ ಕೈಗೊಳ್ಳಬಹುದು ಎಂದು ತಿಪಟೂರು ಕೋನೆಹಳ್ಳಿ ಕೃಷಿ ವಿಜ್ಞಾನಿ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿ ಓ.ಆರ್.ನಟರಾಜ ಮತ್ತು ವಿಜ್ಞಾನಿ(ಸಸ್ಯ ಸಂರಕ್ಷಣೆ) ಕೆ. ಆರ್. ಶ್ರೀನಿವಾಸ್ ತಿಳಿಸಿದ್ದಾರೆ.

error: Content is protected !!