ಐಎಸ್ಓ ಕಾರ್ಯಕ್ಕೆ ಶ್ಲಾಘನೆ: ಮಾಜಿ ಶಾಸಕ ರಫಿಕ್ ಅಹಮದ್.

ತುಮಕೂರು: ಕೋವಿಡ್ ಸಂಕಷ್ಟದ ನಡುವೆಯೂ ಸಮುದಾಯ ಮತ್ತು ಸಮಾಜದ ಏಳ್ಗೆಗೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ಡಾ.ರಫೀಕ್ ಅಹಮ್ಮದ್ ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದಲ್ಲಿ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ತುಮಕೂರು ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಹೋರಾಟಗಾರರು ಮತ್ತು ಕೋವಿಡ್ ವಾರಿಯರ್ಸ್ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜಕೀಯದೊಂದಿಗೆ ಪರಿಸರ, ಶಿಕ್ಷಣ ಕ್ಷೇತ್ರದಲ್ಲಿ ಎಸ್ಐಒ ಉತ್ತಮ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ, ರಾಜ್ಯದಲ್ಲಿ ನೆರೆಯಾದಾಗ ನೆರೆ ಸಂತ್ರಸ್ಥರಿಗೆ ನೆರವಾದರು, ಕೋವಿಡ್ ಸಂದರ್ಭದಲ್ಲಿಯೂ ಅಂಜದೇ ಸಮಾಜ ಸೇವೆಯನ್ನು ಮಾಡಿದ್ದಾರೆ, ಜಾತ್ಯಾತೀತವಾಗಿ ಕೋವಿಡ್ ನಿಂದ ಸಾವನ್ನಪ್ಪಿದವರ ಅಂತ್ಯ ಸಂಸ್ಕಾರ ಮಾಡಿದ ಸಂಘಟನೆ ಎಸ್ಐಒ ಸಹ ಒಂದು ಎಂದರು.

ಕಳೆದ ಕೆಲ ವರ್ಷಗಳಿಂದ ಮುಸ್ಲಿಂ ಸಮುದಾಯದಲ್ಲಿ ಬದಲಾವಣೆಯಾಗುತ್ತಿದೆ, ಮದುವೆಗೆ ಮುಂಚೆ ಹೆಣ್ಣು ಮಕ್ಕಳಿಗೆ ಪದವಿ ಶಿಕ್ಷಣ ಕೊಡಿಸಬೇಕೆಂಬ ಆಲೋಚನೆ ಪೋಷಕರಲ್ಲಿ ಮೂಡುತ್ತಿದೆ, ಪೋಷಕರು ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡಿಸುವ ಮೂಲಕ ದೇಶಕ್ಕೆ ಕೀರ್ತಿಯನ್ನು ತರಬೇಕೆಂದ ಅವರು, ಅಲ್ಪಸಂಖ್ಯಾತ ಸಮುದಾಯದ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯುವಂತಾಗ ಬೇಕೆಂದು ಕರೆ ನೀಡಿದರು.

ಐಐಟಿ, ಐಐಎಂನಲ್ಲಿ ಪ್ರವೇಶ ಪಡೆಯುವುದು ಸುಲಭವಲ್ಲ, ಪರಿಶ್ರಮ ಮತ್ತು ಶ್ರದ್ಧೆಯಿಂದ ವ್ಯಾಸಂಗ ಮಾಡಿದರೆ, ಗುರಿ ಸಾಧಿಸುವುದರಲ್ಲಿ ಅನುಮಾನವಿಲ್ಲ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀಡುತ್ತಿರುವ ಅನುದಾನ ಸದ್ಭಳಕೆ ಆಗಬೇಕಾದರೆ ಸರ್ಕಾರಿ ಯೋಜನೆಗಳ ಅರಿವು ಮೂಡಿಸಬೇಕಿದೆ, ಸರಕಾರ ನೀಡುವ ಅನುದಾನ ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ಕಂಡುಕೊಳ್ಳಬೇಕೆಂದು ಸಲಹೆ ನೀಡಿದರು.

ಸರ್ಕಾರಿ ಯೋಜನೆಗಳ ಬಗ್ಗೆ ಸಂಘಟನೆಗಳು ಮುಸ್ಲಿಂ ಸಮುದಾಯದವರಲ್ಲಿ ಅರಿವು ಮೂಡಿಸಬೇಕಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಬಳಕೆಯಾಗದ ಕಾರಣ ವಾಪಾಸ್ ಹೋಗುತ್ತಿದೆ, ಸರ್ಕಾರಿ ಯೋಜನೆಗಳನ್ನು ಪಡೆದುಕೊಳ್ಳಬೇಕೆಂಬ ಅರಿವು ಸಮುದಾಯದಲ್ಲಿ ಮೂಡಬೇಕಿದೆ, ಸರ್ಕಾರಿ ಯೋಜನೆಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಕ್ಷೇತ್ರಶಿಕ್ಷಣಾಧಿಕಾರಿ ಹನುಮನಾಯ್ಕ್ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ವಿಫುಲ ಅವಕಾಶ ಗಳಿದ್ದು ಸಮಯದ ಉಪಯೋಗವನ್ನು ಸದುಪಯೋಗ ಪಡಿಸಿಕೊಂಡು ಶ್ರದ್ಧೆಯಿಂದ ವ್ಯಾಸಂಗ ಮಾಡುವ ಮೂಲಕ ಉನ್ನತ ಹುದ್ದೆ ಪಡೆಯಬೇಕು ಎಂದು ಹೇಳಿದರು.

ಮುಸ್ಲಿಂ ಸಮುದಾಯದಲ್ಲಿ ಬೇಗ ಮದುವೆ ಮಾಡುತ್ತಾರೆ ಅದು ಮಕ್ಕಳ ಮೇಲೆ ಭರವಸೆ ಇಟ್ಟು ಉತ್ತಮ ಶಿಕ್ಷಣವನ್ನು ಕೊಡಿಸುವ ಮೂಲಕ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಗಳಿಸಬೇಕು, ಅಲ್ಪ ಸಂಖ್ಯಾತರಲ್ಲಿ ವಿದ್ಯಾವಂತರ ಸಂಖ್ಯೆ ಕಡಿಮೆ ಇದೆ, ಆದರೆ ವಿದ್ಯಾವಂತರ ಸಂಖ್ಯೆ ಹೆಚ್ಚಳವಾಗಬೇಕು, ನಿಟ್ಟಿನಲ್ಲಿ ಮುಸ್ಲಿಂ ಹೆಣ್ಣುಮಕ್ಕಳಲ್ಲಿರುವ ಜಾಗೃತಿ ಯುವಕರಲ್ಲಿ ಮೂಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಫರೀದಾ ಬೇಗಂ, ಶಂಶುದ್ದೀನ್ ?ರೀಫ್, ಲಬೀಬ್ ಆಲಿಯಾ, ತಾಜುದ್ದೀನ್ ಷರೀಫ್, ಸೈಯದ್ ಯಾಸೀನ್, ಹನೀಫುಲ್ಲಾ, ಅಬ್ದುಲ್ ಷರೀಫ್ ಸೇರಿದಂತೆ ಎಸ್ಐಒ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!