ಪುನೀತ್ ರಾಜಕುಮಾರ್ ನಿಧನದ ಸುದ್ದಿ ಕೇಳಿ ಮತ್ತೊಬ್ಬ ಅಭಿಮಾನಿ ಹೃದಯಾಘಾತಕ್ಕೆ ಬಲಿ

ಪುನೀತ್ ರಾಜಕುಮಾರ್ ನಿಧನದ ಸುದ್ದಿ ಕೇಳಿ ಮತ್ತೊಬ್ಬ ಅಭಿಮಾನಿ ಹೃದಯಾಘಾತಕ್ಕೆ ಬಲಿ

ಕೊಪ್ಪಳ: ಸ್ಯಾಂಡಲ್ ವುಡ್ ನಟ  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾವಿನ ಸುದ್ದಿ ನಿಜಕ್ಕೂ ಯಾರಿಗೂ ನಂಬಲು ಸಾಧ್ಯವಾಗುತ್ತಿಲ್ಲ. ಅಕ್ಟೋಬರ್ 29 ಅವರ ದಿಢೀರ್ ಸಾವಿನ ಸುದ್ದಿ ಕೇಳಿ ಚಾಮರಾಜನಗರದಲ್ಲಿ ಅಭಿಮಾನಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದೀಗ ಕೊಪ್ಪಳದಲ್ಲಿ ಮತ್ತೊಬ್ಬ ಅಭಿಮಾನಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜ್ಞಾನಮೂರ್ತಿ ನಿಂಗಾಪುರ(40) ಮೃತ ಅಭಿಮಾನಿ.

ನಟ ಪುನೀತ್ ರಾಜ್‍ಕುಮಾರ್ ನಿಧನದ ಸುದ್ದಿ ಕೇಳುತ್ತಿದ್ದಂತೆ ಜ್ಞಾನಮೂರ್ತಿ ನಿಂಗಾಪುರ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ರು. ಆದ್ರೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕಿರಾಣಿ ಅಂಗಡಿ ನಡೆಸುತ್ತಿದ್ದ ಜ್ಞಾನಮೂರ್ತಿ ಪುನೀತ್ರ ಅಪ್ಪಟ ಅಭಿಮಾನಿ. ಕಿರಾಣಿ ಅಂಗಡಿಯಲ್ಲಿ ಸದಾ ಪುನೀತ್ ರಾಜ್‍ಕುಮಾರ್ ಹಾಡುಗಳನ್ನು ಕೇಳುತ್ತಿದ್ದರು. ಪುನೀತ್ ರಾಜ್‍ಕುಮಾರ್ ರ ಬಹುತೇಕ ಸಿನಿಮಾಗಳನ್ನು‌ ಫಸ್ಟ್ ಶೋ ನೋಡುತ್ತಿದ್ದರು. ನಮ್ಮ ನೆಚ್ಚಿನ ನಟ ಇನ್ನಿಲ್ಲ ಎಂಬ ಸುದ್ದಿ ಕೇಳುತ್ತಿದ್ದಂತೆ ಹೃದಯ ಬಡಿತವೇ ನಿಂತು ಹೋಗಿದೆ.

ಪುನೀತ್ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟ ಅಭಿಮಾನಿ
ಪುನೀತ್ ಸಾವಿನ ಸುದ್ದಿ ಕೇಳಿ ಚಾಮರಾಜನಗರದಲ್ಲಿ ಹೃದಯಾಘಾತದಿಂದ ಮುನಿಯಪ್ಪ(30) ಎಂಬ ಅಭಿಮಾನಿ ಮೃತಪಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮರೂರು ಗ್ರಾಮದ ಮುನಿಯಪ್ಪ ಪುನೀತ್ ಸಾವಿನ ಸುದ್ದಿ ಕೇಳುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ಪುನೀತ್ ಜತೆ ಅವರ ಅಭಿಮಾನಿಯೂ ಮೃತಪಟ್ಟಿದ್ದು ದುರದೃಷ್ಟಕರ. ಇನ್ನು ಮೃತರು ಕೃಷಿಕರಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಬೆಳಗಾವಿಯ ಶಿಂದೋಳ್ಳಿ ಗ್ರಾಮದಲ್ಲಿ ಪುನೀತ್ ಅವರ ಮತ್ತೊಬ್ಬ ಅಭಿಮಾನಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪರಶುರಾಮ್ ದೇಮಣ್ಣನವರ್ ಅವರು ಪುನೀತ್ರ ಕಟ್ಟಾ ಅಭಿಮಾನಿಯಾಗಿದ್ದು, ಪುನೀತ್ರ ಸಾವಿನ ಸುದ್ದಿಯನ್ನು ಟಿವಿಯಲ್ಲಿ ನೋಡಿ ಅಳುತ್ತಿದ್ದರು. ಈ ವೇಳೆ ತೀವ್ರ ಹೃದಯಾಘಾತಕ್ಕೊಳಗಾಗಿ ಅಕ್ಟೋಬರ್ 29ರ ಶುಕ್ರವಾರ ರಾತ್ರಿ 11 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!