ಗುಬ್ಬಿ: ಉಪಲೋಕಾಯುಕ್ತ ನ್ಯಾಯಾದೀಶರೆದುರೇ ಹಂದಿಜೋಗಿ ಸಮುದಾಯದ ವಿಶೇಷ ಚೇತನ ವೃದ್ದೆಯೊಬ್ಬರು ಭಿಕ್ಷೆ ಬೇಡಿ ಹಣ ಸ್ವೀಕರಿಸಿದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದಲ್ಲಿ ನಡೆದಿದೆ.
ತುಮಕೂರಿನಲ್ಲಿ ಅ.18 ರಿಂದ 20ರವರೆಗೆ ನಡೆದ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಕಾರ್ಯಕ್ರಮದ ಬಳಿಕ ಉಪಲೋಕಾಯುಕ್ತ ನ್ಯಾಯಾದೀಶ ಬಿ ವಿರಪ್ಪ ಭಾನುವಾರ ಗುಬ್ಬಿ ಪಟ್ಟಣದಲ್ಲಿ ಹಂದಿಜೋಗಿ ಕುಟುಂಬಗಳು ವಾಸವಾಗಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೇಳೆ ಉಪಲೋಕಾಯುಕ್ತರು ಹಾಗೂ ಅಧಿಕಾರಿಗಳ ಎದರು ವಿಶೇಷ ಚೇತನ ವೃದ್ದ ಮಹಿಳೆಯೊಬ್ಬರು ಅಂಗಲಾಚಿ ಭಿಕ್ಷೆ ಬೇಡಿದ್ದಾರೆ. ಇದನ್ನ ಕಂಡ ಉಪ ಲೋಕಾಯುಕ್ತ ನ್ಯಾಯಾದೀಶ ಬಿ.ವೀರಪ್ಪ ಅವರು ತಮ್ಮ ಪಾಕೆಟ್ ನಿಂದಲೇ ವೃದ್ದೆಗೆ ಹಣ ನೀಡಿದ್ದಾರೆ. ಬಳಿಕ ವೃದ್ದೆಯ ಕುಟುಂಬದ ಮಾಹಿತಿ ಪಡೆದು ಅವರಿಗೆ ಅಗತ್ಯ ಸೌಲಭ್ಯಗಳನ್ನ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಂದಿಜೋಗಿ ಸಮುದಾಯಗಳು ವಾಸಕ್ಕೆ ಮನೆಗಳಿಲ್ಲದೆ ಜೋಪಡಿಗಳಲ್ಲೆ ಜೀವನ ನಡೆಸುತ್ತಿದ್ದರು. ಮಳೆ ಬಂದರೆ ಜೋಪಡಿಗಳಲ್ಲಿ ನೀರು ತುಂಬಿಕೊಂಡು ನಿಲ್ಲಲು ಆಗದಂತಹ ದುಸ್ಥಿತಿಯಲ್ಲಿ ಜೀವನ ಸವೆಸುತ್ತಿದ್ದರು. ಇತ್ತೀಚೆಗೆ ಸರ್ಕಾರ ಅವರಿಗೆ ನಿವೇಶನಗಳನ್ನ ಮಂಜೂರು ಮಾಡಿದೆ, ಆದರೆ ಆ ಸ್ಥಳದಲ್ಲಿ ರಸ್ತೆ, ವಿದ್ಯುತ್ ಕುಡಿಯುವ ನೀರು ಇನ್ನಿತರೆ ಯಾವುದೇ ಸೌಲಭ್ಯಗಳಿಲ್ಲದೆ ವಂಚಿತರಾಗಿದ್ದರು.
ಉಪಲೋಕಾಯುಕ್ತರ ಮೂರುದಿನಗಳ ಸಾರ್ವಜನಿಕ ಕುಂದು ಕೊರತೆ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಹಂದಿಜೋಗಿ ಕುಟುಂಬಗಳು ಮೂಲಭೂತ ಸೌಕರ್ಯ ಕಲ್ಪಿಸುಂತೆ ಉಪಲೋಕಾಯುಕ್ತ ಬಿ ವಿರಪ್ಪ ಅವರಿಗೆ ಮನವಿ ಮಾಡಿದ್ದರು. ಅಹವಾಲು ಸ್ವೀಕಾರ ಕಾರ್ಯಕ್ರಮ ಮುಗಿದ ಬಳಿಕ ಗುಬ್ಬಿ ಪಟ್ಟಣದಲ್ಲಿ ಹಂದಿಜೋಗಿ ಕುಟುಂಬಗಳ ವಾಸವಾಗಿರುವ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಉಪಲೋಕಾಯುಕ್ತ ನ್ಯಾ.ಬಿ ವೀರಪ್ಪ ಕೂಡಲೇ ಸಮಸ್ಯೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ತುಮಕೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾದೀಶೆ ನೂರುನ್ನಿಸಾ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.