ತುಮಕೂರು: ಆರೋಗ್ಯ ತುಮಕೂರು ಅಭಿಯಾನ ಕಾರ್ಯಕ್ರಮದ ನೆಪದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಸರ್ವಲೆನ್ಸ್ ಅಧಿಕಾರಿ ಡಾ.ರಾಮೇಗೌಡರಿಗೆ ಜಿಲ್ಲಾ ಪಂಚಾಯ್ತಿ ಸಿಇಓ ಕಿರುಕುಳ ನೀಡುತ್ತಿದ್ದಾರೆ. ಸಭೆಗಳಲ್ಲಿ ವೈದ್ಯಾಧಿಕಾರಿಗಳನ್ನು ಅವಾಚ್ಯ ಪದಗಳಿಂದ ನಿಂದಿಸಿ ಅಪಮಾನ ಮಾಡುತ್ತಾರೆ ಎಂದು ಆರೋಪಿಸಿ ಸರ್ಕಾರಿ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಪಂಚಾಯ್ತಿ ಸಿಇಓ ಅವರ ವರ್ತನೆ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ವೈದ್ಯಾಧಿಕಾರಿಗಳು, ಸಿಇಓ ಅವರ ಧೋರಣೆ ಇದೇ ರೀತಿ ಮುಂದುವರೆದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಅಧ್ಯಕ್ಷರೂ ಆದ ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ರಾಮೇಗೌಡ ಮಾತನಾಡಿ, ಆರೋಗ್ಯ ತುಮಕೂರು ಅಭಿಯಾನ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಒತ್ತಾಸೆಯ ಮೇರೆಗೆ ನಡೆಯುತ್ತಿದೆ. ಈ ಅಭಿಯಾನದಡಿ ಹಲವು ಪರೀಕ್ಷೆಗಳು, ತಪಾಸಣೆಗಳು ಈಗಾಗಲೇ ಇಲಾಖಾ ವತಿಯಿಂದ ಚಾಲ್ತಿಯಲ್ಲಿರುವ ವಿವಿಧ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ದೈನಂದಿನವಾಗಿ ನಡೆಯುತ್ತಿವೆ. ಅಭಿಯಾನದ ಮುಖ್ಯಭಾಗವಾಗಿ ಮಧುಮೇಹ, ಕ್ಯಾನ್ಸರ್, ಅಧಿಕ ರಕ್ತದೊತ್ತಡ ಪತ್ತೆಹಚ್ಚುವಿಕೆ ಕಾರ್ಯಗಳು ಈಗಾಗಲೇ ಎನ್‍ಪಿಸಿಡಿಸಿಎಸ್ ಕರ್ಯಕ್ರಮದಡಿ ಹಲವು ವರ್ಷಗಳಿಂದ ಚಾಲ್ತಿಯಲ್ಲಿವೆ. ಈ ಕಾರ್ಯದಲ್ಲಿ ಏಕಡ 90ರಷ್ಟು ಪ್ರಗತಿ ಸಾಧಿಸಲಾಗಿದೆ. ಆದರೆ ನಿಗದಿತ ಗುರಿ ತಲುಪಿಲ್ಲ ಎಂದು ಸಿಇಓ ಅವರು ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿಗಳನ್ನು ಹೊಣೆ ಮಾಡಿ, ದೋಷಾರೋಪಣಾ ಪಟ್ಟಿ ಸಲ್ಲಿಸಲು ಡಿಹೆಚ್‍ಓ ಮೇಲೆ ಒತ್ತಡ ಹೇರಿರುವುದು ಸರಿಯಲ್ಲ ಎಂದರು.
ಸಂಘದ ಖಜಾಂಚಿ ಡಾ.ದಿನೇಶ್‍ಕುಮಾರ್ ಮಾತನಾಡಿ, ರಾಷ್ಟ್ರೀಯ, ರಾಜ್ಯದ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ನಿರ್ವಹಿಸಲಾಗುತ್ತಿದೆ. ಆರೋಗ್ಯ ಇಲಾಖೆಯಲ್ಲಿ ಶೇಕಡ 50 ರಷ್ಟು ಹುದ್ದೆ ಖಾಲಿ ಇವೆ, ವೈದ್ಯಾಧಿಕಾರಿಗಳು ಸೇರಿದಂತೆ ಇಲಾಖೆ ಸಿಬ್ಬಂದಿಗೆ ಕೆಲಸದ ಹೊರೆ ಹೆಚ್ಚಾಗಿದೆ. ಇದರ ಜೊತೆಗೆ ಸಿಬ್ಬಂದಿ, ಅನುದಾನವಿಲ್ಲದ ಆರೋಗ್ಯ ತುಮಕೂರು ಅಭಿಯಾನ ಆರಂಭಿಸಿರುವ ಸಿಇಓ ಅವರು ಒತ್ತಡ ಹೇರುತ್ತಿದ್ದಾರೆ. ಹಿರಿಯ ವೈದ್ಯಾಧಿಕಾರಿಗಳನ್ನು ಕೀಳು ಮಟ್ಟದ ಭಾಷೆಯಲ್ಲಿ ಬೈಯ್ಯವುದು, ಅವಮಾನ ಮಾಡುವ ಮೂಲಕ ಮನೋಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಡಾ.ರಾಮೇಗೌಡರು ಸುಮಾರು 20 ವರ್ಷಗಳಿಂದ ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಒಂದು ವರ್ಷದಿಂದ ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿಯಾಗಿದ್ದಾರೆ. ಇವರನ್ನು ಏಕಾಏಕಿ ಕರ್ತವ್ಯದಿಂದ ಬಿಡುಗಡೆಗೊಳಿಸಿ ಎಂದು ಜಿಲ್ಲಾ ಪಂಚಾಯ್ತಿ ಸಿಇಓ ಪತ್ರ ಬರೆದಿರುವುದು ಕೆಸಿಎಸ್‍ಆರ್ ನಿಯಮಗಳಿಗೆ ವಿರುದ್ಧವಾಗಿದೆ ಎಂದರು.
ಸಂಘದ ಕಾರ್ಯದರ್ಶಿ ಡಾ.ನವೀನ್‍ಕುಮಾರ್ ಮಾತನಾಡಿ, ಜಿಪಂ ಸಿಇಓ ಅವರು ಸಭೆಗಳಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನೇ ನಿಂದಿಸುವುದು, ಇಲಾಖೆ ಮಾರ್ಗಸೂಚಿಗಳನ್ನು ಪಾಲಿಸದೆ ಒತ್ತಡ ಹಾಕುವುದು, ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ಇವರ ಖಾಸಗಿ ನೌಕರರಂತೆ ನಡೆಸಿಕೊಳ್ಳುವುದು ಕೂಡಾ ಕರ್ತವ್ಯಲೋಪವಾಗಿರುತ್ತದೆ ಎಂದರು.
ಆರ್.ಎಂ.ಓ ಡಾ.ಚೇತನ್, ಡಾ.ಬಿಂದು ಮಾಧವ, ಡಾ.ಮೋಹನ್, ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.