ತುಮಕೂರು: ಮಾಜಿ ಉಪಪ್ರಧಾನಿ, ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ(L K Advani) ಬದುಕಿರುವಾಗಲೇ ಕೇಂದ್ರ ಸಚಿವ ವಿ ಸೋಮಣ್ಣ(V somanna) ತುಮಕೂರಿನಲ್ಲಿ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.
ತುಮಕೂರಿನ ಗುಬ್ಬಿಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಅಭಿನಂದನಾ ಸಭೆಯಲ್ಲಿ ಭಾಗಹಿಸಿದ್ದ ಕೇಂದ್ರ ಸಚಿವ ವಿ ಸೋಮಣ್ಣ ಸರಿಯಾದ ಮಾಹಿತಿ ಇಲ್ಲದೇ ನಿಧನರಾಗಿದ್ದಾರೆ ಎಂದು ಭಾವಿಸಿ ತರಾತುರಿಯಲ್ಲಿ ಅಡ್ವಾಣಿಯವರು ಬದುಕಿರುವಾಗಲೇ ಸಂತಾಪ ಸೂಚಿಸಿ ಶ್ರದ್ದಾಂಜಲಿ ಸಲ್ಲಿಸಿದ್ರು.
ಜೂ.06 ಶನಿವಾರ ಎಲ್ ಕೆ ಅಡ್ವಾಣಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದರು, ತಕ್ಷಣ ಮೃತಪಟ್ಟಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಿದಾಡಿತ್ತು. ಇತ್ತ ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ವಿ ಸೋಮಣ್ಣ ಭಾಷಣ ಪ್ರಾರಂಭಿಸುವ ಮೊದಲೇ ಈಗತಾನೆ ನನಗೆ ವೇದಿಕೆಯಲ್ಲಿ ಮುಖಂಡರೊಬ್ಬರು ತಿಳಿಸಿದರು ಬಿಜೆಪಿ ಹಿರಿಯ ನಾಯಕ ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ಇಹಲೋಕ ತ್ಯಜಿಸಿದ್ದಾರೆ ಎನ್ನುತ್ತಲೇ ಒಮ್ಮೆ ನೋಡ್ರಪ್ಪಾ ಚೆಕ್ ಮಾಡಿಕೊಳ್ಳಿ ಎಂದರು. ಬಳಿಕ ವೇದಿಕೆಯಲ್ಲಿ ನೆರೆದಿದ್ದವರು ಹೌದು ಎಂದಾಗ ಸೋಮಣ್ಣ ಅಡ್ವಾಣಿಗೆ ಸಂತಾಪದ ನುಡಿಗಳನ್ನಾಡಿದ್ರು.
ಬಳಿಕ ಇಡೀ ಸಭೆ ಎದ್ದು ನಿಂತು ಕೆಲ ಕಾಲ ಮೌನಾಚರಣೆ ಮಾಡುವ ಮೂಲಕ ಅಡ್ವಾಣಿಗೆ ಶ್ರದ್ದಾಂಜಲಿ ಸಲ್ಲಿಸಿದ್ರು. ಕೂಡಲೇ ದೆಹಲಿಗೆ ಹೊರಡುವ ಕಾರಣ ನೀಡಿ ಸಭೆಯನ್ನ ಮೊಟಕು ಗೊಳಿಸಿ ತರಾತುರಿಯಲ್ಲಿ ವೇದಿಕೆಯಿಂದ ವಿ ಸೊಮಣ್ಣ ನಿರ್ಗಮಿಸಿದರು. ಕೇಂದ್ರ ಸಚಿವರಿಗೆ ಸರಿಯಾದ ಮಾಹಿತಿ ಇಲ್ಲದೆ ತಡಬಡಾಯಿಸಿದ್ದು ನೆರೆದಿದ್ದವರು ಗುಸು ಗುಸು ಎನ್ನತೊಡಗಿದ್ರು.