ಶಿರಾದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಕ್ರಮ: ಎ.ನಾರಾಯಣಸ್ವಾಮಿ

ಶಿರಾ:ತಾಲ್ಲೂಕಿನ ಪ್ರಮುಖ ಬೇಡಿಕೆಗಳಾದ ತುಮಕೂರು-ದಾವಣಗೆರೆ ರೈಲ್ವೆ ಯೋಜನೆ, ಕುಡಿಯುವ ನೀರಿನ ಯೋಜನೆ ಹಾಗೂ ಶಿರಾದಲ್ಲಿ ಒಂದು ಮೆಡಿಕಲ್ ಕಾಲೇಜು ಸ್ಥಾಪಿಸಬೇಕೆಂಬ ಒತ್ತಾಯ ಇದೆ. ಈಗಾಗಲೇ ರೇಲ್ವೇ ಯೋಜನೆ ಮತ್ತು ನೀರಾವರಿ ಯೋಜನೆಗಳು ಅನುಷ್ಠಾನದಲ್ಲಿದ್ದು, ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ನಿಯಮ ಇದ್ದು ಈ ಬಗ್ಗೆ ರಾಷ್ಟ್ರದಲ್ಲಿ ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅವಕಾಶ ದೊರೆತರೆ ಖಂಡಿತ ಮೆಡಿಕಲ್ ಕಾಲೇಜು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಎ.ನಾರಾಯಣ ಸ್ವಾಮಿ ಹೇಳಿದರು.

ಅವರು ನಗರದ ಸೇವಾ ಸದನದಲ್ಲಿ ವಿಧಾನಪರಿಷತ್ ಚುನಾವಣೆ ಹಾಗೂ ಮುಂಬರುವ ನಗರಸಭಾ ಚುನಾವಣೆಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ನಿಯಮದ ಪ್ರಕಾರ ಯಾವ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ್‌ಗಳಿವೆ ಸರಕಾರಿ ಅಥವಾ ಖಾಸಗಿ ಮೆಡಿಕಲ್ ಕಾಲೇಜು ಇವೆ ಅಲ್ಲಿ ಸ್ಥಾಪಿಸಲು ಆಗುವುದಿಲ್ಲ. ಇತ್ತೀಚೆಗೆ ಪಿಪಿಟಿ ಮಾಡೆಲ್‌ನಲ್ಲಿ ತೆಗೆಯಬಹುದೆಂದು ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು ಅದೇನಾದರೂ ಬದಲಾವಣೆ ಮಾಡಿದರೆ ಮುಂದಿನ ದಿನಗಳಲ್ಲಿ ಮೆಡಿಕಲ್ ಕಾಲೇಜ್ ತೆರೆಯಲಾಗುವುದು ಎಂದರು.

ಮದಲೂರು ಕೆರೆಗೆ ಶಾಶ್ವತ ನೀರಿನ ಅಲೋಕೇಷನ್: ಮದಲೂರು ಕೆರೆಗೆ ಶಾಶ್ವತವಾಗಿ ನೀರಿನ ಅಲೋಕೇಶನ್ ಮಾಡಲು ಹಾಗೂ ಭದ್ರ ಮೇಲ್ದಂಡೆ ಯೋಜನೆಯಿಂದ ನೀರು ಹರಿಸುವ ಸಂಬಂಧತಾಲ್ಲೂಕಿನ ಯಾವ ಯಾವ ಕೆರೆಗಳು ಬಿಟ್ಟುಹೋಗಿವೆ, ಇನ್ನೂ ಎಷ್ಟು ಕೆರೆಗಳನ್ನು ಸೇರಿಸಬೇಕು ಎಂಬ ಬಗ್ಗೆ ಈಗಾಗಲೇ ಸಮಿತಿ ಮಾಡಿ ಅಧ್ಯಕ್ಷರನ್ನು ನಿಯೋಜನೆ ಮಾಡಲಾಗಿದ್ದು ಶೀಘ್ರದಲ್ಲಿಯೇ ತಾಲ್ಲೂಕಿನ ಎಲ್ಲಾ ಕೆರೆಗಳಿಗೂ ನೀರು ನೀಡಲಾಗುವುದು. ಕಾವೇರಿ ನ್ಯಾಯಮಂಡಳಿಯಿಂದ ಇವತ್ತಿನವರೆಗೂ ಮದಲೂರು ಕೆರೆಗೆ ನೀರು ನಿಗಧಿಯಾಗಿಲ್ಲ. ಮದಲೂರು ಕೆರೆಗೆ ನೀರನ್ನು ನಿಗಧಿ ಮಾಡುವ ಸಂಬಂಧ ಸಮಿತಿ ಮಾಡಿ ಅದಕ್ಕೆ ಅಧ್ಯಕ್ಷರನ್ನು ನಿಯೋಜನೆ ಮಾಡಿದ್ದಾರೆ. ಭದ್ರ ಯೋಜನೆಯಿಂದ ಯಾವ ಯಾವ ಕೆರೆಗಳು ಬಿಟ್ಟು ಹೊಗಿವೆ. ಯಾವ ಕೆರೆಗಳಿಗೆ ಮತ್ತೆ ಲಿಫ್ಟ್ ಇರಿಗೇಷನ್, ಪೈಪ್‌ಲೈನ್ ಮಾಡುವ ಬಗ್ಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಆ ವರದಿ ಆಧಾರದ ಮೇಲೆ ಮುಂಬರುವ ದಿನಗಳಲ್ಲಿ ನೀರು ನೀಡಲಾಗುವುದು ಎಂದರು.

ಮತದಾರರು ಬದಲಾವಣೆ ಬಯಸಿದ್ದಾರೆ:

ಶಿರಾ ತಾಲ್ಲೂಕಿನ ಮತದಾರರು ಬದಲಾವಣೆಯನ್ನು ಬಯಸಿದ್ದಾರೆ. ಸಂಸತ್ ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡಿ ನಂತರ ಉಪಚುನಾವಣೆಯಲ್ಲಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರನ್ನು, ವಿಧಾನಪರಿಷತ್‌ನಲ್ಲಿ ಚಿದಾನಂದ್ ಎಂ.ಗೌಡ ಅವರನ್ನು ಆಯ್ಕೆ ಮಾಡಿದ್ದಾರೆ. ಅದೇ ರೀತಿ ಮುಂಬರುವ ವಿಧಾನಪರಿಷತ್ ಹಾಗೂ ನಗರಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನೇ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

ಕಾಂಗ್ರೆಸ್‌ನಿಂದ ಧರ್ಮಗಳ ಮಧ್ಯೆ ಕಂದಕ ನಿರ್ಮಾಣ: ಈ ಹಿಂದೆ ಕಾಂಗ್ರೆಸ್‌ನವರು ಅಧಿಕಾರದಲ್ಲಿದ್ದರು. ಆ ಸಂದರ್ಭದಲ್ಲಿ ಧರ್ಮಗಳ ಮಧ್ಯೆ ಕಂದಕವನ್ನು ನಿರ್ಮಾಣ ಮಾಡಿದರು. ಕೆಲವು ಯೋಜನೆಗಳನ್ನು ಕೊಡುವಾಗ ಒಂದೇ ಧರ್ಮಕ್ಕೆ ಕೊಡಬೆಕೆಂದು ಮಾಡಿದ ತೀರ್ಮಾನದಿಂದ ಧರ್ಮ ಧರ್ಮಗಳ ಮಧ್ಯೆ ಕಂದಕ ಸೃಷ್ಟಿಗೆ ಕಾರಣವಾಯಿತು. ಇದರಿಂದ ಜನತೆ ಕಾಂಗ್ರೆಸ್‌ಗೆ ತಕ್ಕ ಪಾಠವನ್ನು ಕಲಿಸಿದ್ದಾರೆ ಎಂದ ಅವರು ಬಿಜೆಪಿ ಪಕ್ಷ ವಿಶೇಷವಾಗಿ ಎಲ್ಲ ವರ್ಗದ ಧರ್ಮದವರನ್ನು ಸರ್ವರ ಅಭಿವೃದ್ದಿಗೆ ಶ್ರಮ ಹಾಕುವ ಸಂಕಲ್ಪ ಮಾಡಿದೆ ಎಂದರು.

ನಗರೋತ್ಥಾನದಲ್ಲಿ ಭ್ರಷ್ಟಾಚಾರ ನಡೆದಿದೆ; ಶಿರಾ ನಗರಸಭೆಯಲ್ಲಿ ಆಗಿರುವ ನಗರೋತ್ಥಾನ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ. ನಗರದ ವಾಸಿಸುವ ಬಡವರಿಗೆ ಹಕ್ಕುಪತ್ರ ಕೊಟ್ಟಿಲ್ಲ. ಅನೇಕ ಬಡಾವಣೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡದೆ ಬಿಲ್ ಮಾಡಿರುವ ದಾಖಲೆ ಇದೆ. ಶಿರಾ ನಗರದಲ್ಲಿರುವ ನಿವೇಶನ ರಹಿತರಿಗೆ ಸರಕಾರ ಭೂಮಿ ಇದ್ದರೂ ಸಹ ಅವರಿಗೆ ನಿವೇಶನ ಕೊಡುವ ಪ್ರಾಮಾಣಿಕ ಪ್ರಯತ್ನ ಆಗಿಲ್ಲ ಇದೆಲ್ಲದರ ಬಗ್ಗೆ ಮುಂದಿನ ದಿನಗಳಲ್ಲಿ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ;

ವಿಧಾನಪರಿಷತ್ ಚುನಾವಣೆಯಲ್ಲಿ ತುಮಕೂರು, ಚಿತ್ರದುರ್ಗ ಸೇರಿದಂತೆ ರಾಜ್ಯಾದ್ಯಂತ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ. ತುಮಕೂರು ವಿಧಾನಪರಿಷತ್ ಅಭ್ಯರ್ಥಿ ಲೋಕೇಶ್ ಗೌಡ, ಚಿತ್ರದುರ್ಗ ಅಭ್ಯರ್ಥಿ ನವೀನ್ ಇಬ್ಬರೂ ಸಹ ಗೆಲುವು ಸಾಧಿಸಲಿದ್ದಾರೆ. ಇದರಿಂದ ರಾಜ್ಯದ ಅಭಿವೃದ್ದಿಗಾಗಿ ವಿಧಾನಪರಿಷತ್‌ನಲ್ಲಿ ಶಕ್ತಿ ವೃದ್ದಿಯಾಗಲು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿ ಎಂದು ಮತದಾರರಿಗೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ರಾಜ್ಯ ರೇಷ್ಮೆ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ, ತೆಂಗು ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್, ಬಿಜೆಪಿ ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ನಗರ ಬಿಜೆಪಿ ಅಧ್ಯಕ್ಷ ವಿಜಯರಾಜ್, ಗ್ರಾಮಾಂತರ ಮಾಜಿ ಬಿಜೆಪಿ ಅಧ್ಯಕ್ಷ ಮಾಲಿ ಮರಿಯಪ್ಪ, ಬಸವರಾಜು ಸೇರಿದಂತೆ ಹಲವರು ಹಾಜರಿದ್ದರು.

error: Content is protected !!