ಸೋಂಕಿತರ ಸುಮಾರು 15,000 ಪ್ರಾಥಮಿಕ ಸಂಪರ್ಕಗಳನ್ನು ಪತ್ತೆಹಚ್ಚಲಾಗಿದೆ: ಕೋವಿಡ್-19 ವಾರ್ ರೂಮ್ ವರದಿ

ಬೆಂಗಳೂರು: ಡಿಸೆಂಬರ್ 25 ಮತ್ತು 31 ರ ನಡುವಿನಲ್ಲಿ ರಾಜ್ಯದಲ್ಲಿ 3,983 ಸೋಂಕಿತರ 14,948 ಪ್ರಾಥಮಿಕ ಸಂಪರ್ಕಗಳನ್ನು ಪತ್ತೆ ಹಚ್ಚಲಾಗಿದೆ ಎಂದು ರಾಜ್ಯದ ಕೋವಿಡ್-19 ವಾರ್ ರೂಮ್ ಮಾಹಿತಿ ನೀಡಿದೆ.

ಕೆಲವು ಜಿಲ್ಲೆಗಳು ಪ್ರತಿ ಸೋಂಕಿತರ ಹೆಚ್ಚಿನ ಪ್ರಾಥಮಿಕ ಸಂಪರ್ಕಗಳನ್ನು ಪತ್ತೆಹಚ್ಚಿರುವುದು ಕಂಡು ಬಂದಿದೆ, ಸೋಂಕಿತರ ಸಂಪರ್ಕಿತರ ಪತ್ತೆಯಿಂದ ಪರೀಕ್ಷೆ ಸಂಖಅಯೆ ಹೆಚ್ಚಿಸಿ ಅವರನ್ನು ಕ್ವಾರಂಟೈನ್ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಕೊರೋನಾ ರೂಪಾಂತರಿ ತಳಿ ಓಮಿಕ್ರಾನ್ ಸೋಂಕು ಹರಡುವಿಕೆಯನ್ನೂ ತಡೆಯಬಹುದಾಗಿದೆ.

ಹೆಚ್ಚು ಪ್ರಾಥಮಿಕ ಸಂಪರ್ಕಿತರ ಪತ್ತೆ ಮಾಡುವ ಜಿಲ್ಲೆಗಳಲ್ಲಿ ಬೆಂಗಳೂರು ಗ್ರಾಮಾಂತರ (ಪ್ರತಿ ರೋಗಿಗೆ 10.52 ಪ್ರಾಥಮಿಕ ಸಂಪರ್ಕಗಳು (ಪಿಸಿ)), ಚಾಮರಾಜನಗರ (12.83), ಧಾರವಾಡ (15.43), ಶಿವಮೊಗ್ಗ (10.23) ಮತ್ತು ಯಾದಗಿರಿ (11) ಸೇರಿವೆ.

ಇತರ ಜಿಲ್ಲೆಗಳು, ವಿಶೇಷವಾಗಿ ಬೆಂಗಳೂರು ನಗರ, ಪ್ರತಿ ರೋಗಿಗೆ ಕಡಿಮೆ ಸಂಖ್ಯೆಯ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆಹಚ್ಚುತ್ತಿವೆ. ರಾಜಧಾನಿಯಲ್ಲಿ ಆರು ದಿನಗಳಲ್ಲಿ ಅತಿ ಹೆಚ್ಚು ಸಕ್ರಿಯ ಪ್ರಕರಣಗಳನ್ನು (2,959) ಹೊಂದಿದ್ದರೂ, ಪ್ರತಿ ರೋಗಿಗೆ ಕೇವಲ 3.25 ಪ್ರಾಥಮಿಕ ಸಂಪರ್ಕಗಳನ್ನು ಪತ್ತೆ ಮಾಡಲಾಗಿದೆ. ರಾಜ್ಯದಲ್ಲಿ ಸಂಪರ್ಕ ಪತ್ತೆಹಚ್ಚಲು ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು (13,417) ನಿಯೋಜಿಸಲಾಗಿದೆ.

ಈ ನಡುವೆ ಹೇಳಿಕೆ ನೀಡಿರುವ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ತ್ರಿಲೋಕ್ ಚಂದ್ರ ಅವರು, ಅಂಕಿಅಂಶಗಳು ಸರಿಯಾಗಿಲ್ಲ ಎಂದು ಹೇಳಿದ್ದಾರೆ.

ರಾಜರಾಜೇಶ್ವರಿ ನಗರ ಮತ್ತು ಪಶ್ಚಿಮ ವಲಯಗಳನ್ನು ಹೊರತುಪಡಿಸಿ, ಉಳಿದ ವಲಯಗಳು ಪ್ರತಿ ಕೋವಿಡ್-19 ರೋಗಿಗಳಿಗೆ 8 ರಿಂದ 9 ಸಂಪರ್ಕಗಳನ್ನು ಪತ್ತೆಹಚ್ಚುತ್ತಿವೆ. ಈ ಎರಡು ವಲಯಗಳಲ್ಲಿಯೂ ಕೂಡ ಇಂದಿನಿಂದ ಹೆಚ್ಚಿನ ಸಂಪರ್ಕಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಸಂಪರ್ಕ ಪತ್ತೆಹಚ್ಚುವಿಕೆಯನ್ನು ಕೈಗೊಳ್ಳಲು ಅಗತ್ಯವಿರುವ ಸಿಬ್ಬಂದಿಗಳೂ ನಮ್ಮ ಬಳಿ ಇದ್ದಾರೆಂದು ಹೇಳಿದ್ದಾರೆ.

ಬೆಂಗಳೂರಿನ ಅಂಕಿಅಂಶಗಳಿಗಿಂತಲೂ ಕಡಿಮೆಯಿರುವ ಜಿಲ್ಲೆಗಳೆಂದರೆ ಬೆಳಗಾವಿ 2.94, ಬಳ್ಳಾರಿ 1.65, ಚಿಕ್ಕಮಗಳೂರು 1.47, ಹಾಸನ 1.9, ಕೊಡಗು 1.27, ಮಂಡ್ಯ 0.02 ಮತ್ತು ಮೈಸೂರು 2.69 ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ.

ಈ ಆರು ದಿನಗಳಲ್ಲಿ, ರಾಜ್ಯದಲ್ಲಿ ಪ್ರತಿ ರೋಗಿಗೆ 10,915 ದ್ವಿತೀಯ ಸಂಪರ್ಕಗಳನ್ನು ಪತ್ತೆ ಮಾಡಲಾಗಿದೆ. ಇದಷ್ಟೇ ಅಲ್ಲದೆ, 2,615 ಕೋವಿಡ್-19 ಸೋಂಕಿತರ ಯಾವುದೇ ಸಂಪರ್ಕಿತರೂ ಪತ್ತೆಯಾಗಿಲ್ಲ ಎಂದು ಹೇಳಲಾಗುತ್ತಿದ್ದು, ಈ 2,615 ಸೋಂಕಿತರ ಬೈಕಿ 2,131 ಸೋಂಕಿತರು ಬೆಂಗಳೂರಿಗರೇ ಆಗಿದ್ದಾರೆಂದು ತಿಳಿದುಬಂದಿದೆ.

ಇತ್ತೀಚೆಗೆ, ಕರ್ನಾಟಕ ಸರ್ಕಾರವು ಕೊರೋನಾ 3ನೇ ಅಲೆಯನ್ನು ನಿಯಂತ್ರಿಸಲು 24 ಗಂಟೆಗಳೊಳಗಾಗಿ ಸೋಂಕಿತರ ಸಂಪರ್ಕಗಳ ಪತ್ತೆ ಮಾಡುವಂತೆ ಆದೇಶಿಸಿತ್ತು. ಪ್ರಾಥಮಿಕ ಸಂಪರ್ಕದಲ್ಲಿರುವವರು ಏಳು ದಿನಗಳವರೆಗೆ ಮನೆಯಲ್ಲಿ ಕ್ವಾರಂಟೈನ್ ಗೊಳಗಾಗಬೇಕಾಗಿದ್ದು, ಮೊದಲ ಮತ್ತು ಎಂಟನೇ ದಿನದಂದು ಇವರಿಗೆ ಕೊರೋನಾ ಪರೀಕ್ಷೆ ನಡೆಸಲಾಗುತ್ತದೆ.

error: Content is protected !!