ತುಮಕೂರು: ಮಂದರಗಿರಿ ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಬಿದ್ದಿದ್ದ ಯುವತಿ ಸತತ 20 ಗಂಟೆಗಳ ಕಾರ್ಯಾಚರಣೆ ಬಳಿಕ ಪವಾಡ ಸದೃಶವಾಗಿ ಬದುಕಿ ಬಂದ ಘಟನೆ ನಡೆದಿದೆ.
ತುಮಕೂರು ತಾಲ್ಲೂಕಿನ ಮಂದರಗಿರಿ ಬೆಟ್ಟ ಹಾಗೂ ಬೆಟ್ಟದ ತಪ್ಪಲಿನಲ್ಲಿರುವ ಮೈದಾಳ ಕೆರೆ ಸುಂದರ ಪ್ರೇಕ್ಷಣೀಯ ಸ್ಥಳವಾಗಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಮೈದಾಳ ಕೆರೆ ತುಂಬಿ ಹರಿಯುತ್ತಿದ್ದು ಕೆರೆ ಕೋಡಿಯಲ್ಲಿ ಜಲಪಾತವೇ ಸೃಷ್ಠಿಯಾಗಿದೆ. ಸುಮಾರು 30 ಅಡಿ ಎತ್ತರದ ಕಲ್ಲುಬಂಡೆಗಳಿಂದ ಕೂಡಿದ ಪ್ರಪಾತದಲ್ಲಿ ನೀರು ದುಮ್ಮಿಕ್ಕುತ್ತಿರುವ ಸೌಂದರ್ಯ ವನ್ನ ಕಣ್ತುಂಬಿಕೊಳ್ಳಲು ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ಗುಬ್ಬಿ ತಾಲ್ಲೂಕಿನ ಶಿವರಾಂಪುರ ಗ್ರಾಮದ ಸೋಮನಾಥ ಗೌಡ ಅವರ ಪುತ್ರಿ ಹಂಸ(19) ಹಾಗೂ ಸ್ನೇಹಿತೆ ಬೆಂಗಳೂರಿನ ಕೀರ್ತನಾ ಭಾನುವಾರ ರಜೆ ಇದ್ದರಿಂದ ಇಬ್ಬರು ಜಲಾಪಾತ ನೋಡಲು ಮಂದರಗಿರಿಗೆ ತೆರಳಿದ್ದರು. ಈ ವೇಳೆ ಇಬ್ಬರು ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಹಂಸ ಪ್ರಪಾತದ ಕಂದಕದಲ್ಲಿ ಬಿದ್ದಿದ್ದಾರೆ. ಸ್ನೇಹಿತೆ ಕೀರ್ತನಾ ಕೂಗಿಕೊಂಡಿದ್ದರಿಂದ ಸ್ಥಳೀಯರು ನೆರವಿಗೆ ದಾವಿಸಿ ರಕ್ಷಣೆ ಮಾಡಲು ಯತ್ನಿಸಿದ್ದಾರೆ ಅಷ್ಟರಲ್ಲಾಗಲೇ ಹಂಸ ಕಂದಕದಲ್ಲಿ ಕಣ್ಮರೆಯಾಗಿದ್ದಳು. ವಿಷಯ ತಿಳಿದ ಅಗ್ನಿಶಾಮಕ ದಳ, ಪೊಲೀಸರು ಸ್ಥಳಕ್ಕೆ ತೆರಳಿ ಸಂಜೆ 4 ಗಂಟೆಯಿಂದ ಕಾರ್ಯಾಚರಣೆ ನಡೆಸಿದರು ಯುವತಿ ಹಂಸಳಾ ಸುಳಿವು ಸಿಕ್ಕಿರಿಲಿಲ್ಲ. ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಮಣ್ಣು ಮರಳು ಚೀಲಗಳನ್ನ ಹಾಕಿ ಯುವತಿ ಹಂಸ ಬಿದ್ದಿದ್ದ ಸ್ಥಳಕ್ಕೆ ನೀರು ಹರಿಯದಂತೆ ಬಂದ್ ಮಾಡಿ ಪಕ್ಕದಿಂದ ಹರಿಯುವಂತೆ ಮಾಡಲಾಯಿತು. ರಾತ್ರಿಯಾದ್ದರಿಂದ ರಕ್ಷಣಾ ಕಾರ್ಯ ಮೊಟಕುಗೊಳಿಸಲಾಯಿತು.
ಸೋಮವಾರ ಮುಂಜಾನೆಯಿಂದ ಯುವತಿ ಹಂಸ ಪತ್ತೆಗೆ ಜೆಸಿಬಿ ಯಂತ್ರ ಬಳಸಿ ಕಾರ್ಯಾಚರಣೆಗೆ ಆರಂಭಿಸಿದರು. 20 ಕ್ಕೂ ಹೆಚ್ಚು ಅಡಿ ಆಳದ ಕಂದಕದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸುವ ವೇಳೆ ಕಂದಕದಲ್ಲಿ ಯುವತಿ ಹಂಸ ಸಿಲುಕಿರುವುದು ಕಂಡು ಬಂದಿದೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಹರಿವ ನೀರಿನಲ್ಲೆ ಹಂಸ ಸಿಲುಕಿದ್ದ ಸ್ಥಳಕ್ಕೆ ತೆರಳಿ ನೋಡಿದಾಗ ಯುವತಿ ಹಂಸ ಜೀವಂತವಾಗಿರುವುದು ಕಂಡು ಅಚ್ಚರಿಯಾಗಿದ್ದಾರೆ. ಕೂಡಲೇ ಕಂದಕದಿಂದ ಹಂಸಳಾನ್ನ ಹೊರಗೆ ಕರೆತಂದು ರಕ್ಷಣೆ ಮಾಡಿದ್ದಾರೆ. 20 ಗಂಟೆಗಳಿಂದ ಸಾವು ಬದುಕಿನ ನಡುವೆ ಸೆಣಸಾಟ ನಡೆಸಿ ಪವಾಡ ಸದೃಶ ವಾಗಿ ಬದುಕಿದ್ದ ಹಂಸಾಳನ್ನ ಅಧಿಕಾರಿಗಳು, ಸಿಬ್ಬಂದಿಗಳು ಅಚ್ಚರಿ ವ್ಯಕ್ತಪಡಿಸಿದರು. ಕೂಡಲೇ ಹಂಸಳಾನ್ನ ಜಲಪಾತದಿಂದ ಮೇಲೆಕ್ಕೆ ಕರೆತಂದು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಸೆಲ್ಫೀ ಹುಚ್ಚಿಗೆ ಬಿದ್ದು 20 ಗಂಟೆಗಳ ಕಾಲ ಸಾವು ಬದುಕಿನ ನಡುವೇ ಸೆಣಸಾಡಿ, ಸಾವನ್ನೇ ಗೆದ್ದು ಬಂದ ಯುವತಿ ಹಂಸಳಾನ್ನ ಕಂಡು ನೆರೆದಿದ್ದವರಲ್ಲಿ ಅಚ್ಚರಿ ಉಂಟು ಮಾಡಿತ್ತು. ಮಗಳು ಬದುಕಿ ಬಂದದ್ದನ್ನ ಕಂಡು ತಂದೆ ಸೋಮನಾಥ ಗೌಡಗೆ ನನ್ನ ಹೋದ ಜೀವ ಮರಳಿ ಬಂದಂತೆ ಆಗಿದೆ ಎಂದು ಮಗಳನ್ನ ರಕ್ಷಣೆ ಮಾಡಿದ ಅಗ್ನಿಶಾಮಕ ದಳ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.