ವರದಿ: ರಮೇಶ್ ಗೌಡ ಗುಬ್ಬಿ.

ಗುಬ್ಬಿ: ಜಿಲ್ಲೆಯ ಜೀವನಾಡಿ ಹೇಮಾವತಿ ನೀರು ಬೇರೆ ಜಿಲ್ಲೆಯತ್ತ ಕೊಂಡೊಯ್ಯುವ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಮರು ಆರಂಭಿಸಿದ ಸರ್ಕಾರದ ವಿರುದ್ಧ ಉಗ್ರ ಹೋರಾಟಕ್ಕೆ ಪ್ರತಿ ಗ್ರಾಮದಲ್ಲಿ ಸಮಿತಿ ರಚಿಸಿ ಹೋಬಳಿ ಮಟ್ಟದಲ್ಲಿ ಸಭೆ ನಡೆಸಿ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲು ಸಭೆಯಲ್ಲಿ ಎಲ್ಲಾ ಮುಖಂಡರು ಕೈಗೊಂಡರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿ ಸಮಿತಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಸ್ಥಗಿತಗೊಳಿಸಿದ್ದ ಕೆಲಸ ಮರು ಆರಂಭ ಮಾಡಿದ ಬಗ್ಗೆ ಎಲ್ಲಾ ಮುಖಂಡರು ಪಕ್ಷಾತೀತ ನಿಲುವು ವ್ಯಕ್ತ ಪಡಿಸಿ ರೈತರಲ್ಲಿ ನೀರಿನ ಮಹತ್ವ ಹಾಗೂ ಹೇಮಾವತಿ ಕಳೆದುಕೊಳ್ಳುವ ಬಗ್ಗೆ ಎಚ್ಚರಿಕೆ ವಹಿಸುವ ಜಾಗೃತಿ ಮೂಡಿಸುವುದು ಹಾಗೂ ಹೋರಾಟದಲ್ಲಿ ಜೈಲ್ ಭರೋ ಕಾರ್ಯಕ್ರಮಕ್ಕೆ ಪ್ರತಿ ಮನೆಯಿಂದ ಒಬ್ಬರಂತೆ ಬರಲು ಕರೆ ನೀಡುವ ಕಾರ್ಯ ಮಾಡಲು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಕ್ರಿಯಾಯೋಜನೆ ಬಗ್ಗೆ ಎಲ್ಲಿಯೂ ಹೇಳದ ಸರ್ಕಾರ 3 ಟಿಎಂಸಿ ನೀರು ತೆಗೆದುಕೊಳ್ಳುವ ಯೋಜನೆ ಎಂದು ಹೇಳಿ ಕಾಮಗಾರಿ ನೋಡಿದರೆ 10 ಟಿಎಂಸಿ ಹರಿಸಿಕೊಳ್ಳುವ ಮಾದರಿ ನಡೆದಿದೆ. 12 ವ್ಯಾಸದ ಪೈಪ್ ಅಳವಡಿಕೆ ಅವೈಜ್ಞಾನಿಕ. ನಾಲೆಯಲ್ಲಿ ಹರಿಯುವ ನೀರು ಏಳೆಂಟು ಅಡಿ ಲೆಕ್ಕದಲ್ಲಿ. ಆದರೆ ಇವರು ಪೈಪ್ ಸಂಪೂರ್ಣ ನಾಲೆ ನೀರು ಸೆಳೆಯುವ ರೀತಿ ನಡೆದಿದೆ. ಒಟ್ಟಾರೆ ಈ ಯೋಜನೆಯೇ ಅಕ್ರಮ. ಮುಖ್ಯನಾಲೆಯಿಂದ ಕುಣಿಗಲ್ ಮಾರ್ಗ ಹರಿಸಿಕೊಳ್ಳಲಿ ಎಂದ ಅವರು ಸರ್ಕಾರದ ತಾಂತ್ರಿಕ ಸಮಿತಿ ಸರ್ಕಾರ ಪರವೇ ಮಾಹಿತಿ ನೀಡಲಿದೆ. ಅವರ ಪರಿಶೀಲನೆ ವೇಳೆ ಯಾವ ರೈತರನ್ನು ಮುಖಂಡರನ್ನು ಮಾತನಾಡಿಲ್ಲ. ಈ ನಿಟ್ಟಿನಲ್ಲಿ ಉಗ್ರ ಹೋರಾಟ ರಸ್ತೆಯಲ್ಲಿ ಹಾಗೂ ಕಾನೂನಾತ್ಮಕವಾಗಿ ಸಹ ನಡೆಯಲಿದೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಜಿಲ್ಲೆಯ ರೈತರ ಮಾರಣ ಹೋಮ ಮಾಡುವ ಈ ಲಿಂಕ್ ಕೆನಾಲ್ ಕಾಮಗಾರಿ ಮುಂದೆ ಇಲ್ಲಿನ ರೈತರನ್ನು ಒಕ್ಕಲೆಬ್ಬಿಸಲಿದೆ. ತೆಂಗು ಅಡಿಕೆ ನಂಬಿದ ಲಕ್ಷಾಂತರ ರೈತರ ಬದುಕು ಬೀದಿಗೆ ಬರಲಿದೆ. ಮುಂದಿನ ಘೋರ ದಿನಗಳನ್ನು ಈಗಲೇ ಮನದಟ್ಟು ಮಾಡಿಕೊಂಡು ಎಲ್ಲಾ ರೈತರು ಪಕ್ಷಾತೀತ ಹೋರಾಟಕ್ಕೆ ಧುಮುಕಬೇಕು. ಈ ಹೋರಾಟ ಸಂಬಂಧಪಟ್ಟ ತುಮಕೂರು, ಶಿರಾ, ಮಧುಗಿರಿ, ತುರುವೇಕೆರೆ ಎಲ್ಲಾ ತಾಲ್ಲೂಕಿನ ರೈತರು ಬರಬೇಕಿದೆ. ಜಿಲ್ಲಾ ಸಮಿತಿಯ ಮೂಲಕ ಉಗ್ರ ಪ್ರತಿಭಟನೆಗೆ ವೇದಿಕೆ ಗುಬ್ಬಿಯಿಂದಲೇ ಸಜ್ಜಾಗಲಿ ಎಂದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್. ವೆಂಕಟೇಗೌಡ ಮಾತನಾಡಿ ರೈತರ ಹಿತ ಕಾಪಾಡಲು ರೈತ ಸಂಘ ಸದಾ ಕಾಲ ಸಜ್ಜಾಗಿರುತ್ತದೆ. ಹಿಂದೆ ಪೈಪ್ ಲೈನ್ ಕೆಲಸ ರದ್ದು ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಈ ಯೋಜನೆಗೆ ಮರು ಜೀವ ನೀಡಿ ಜಿಲ್ಲೆಯ ಬಹುತೇಕ ರೈತರ ನೀರು ಕಸಿಯಲು ಹೊರಟ ರೈತ ವಿರೋಧಿ ಕಾಮಗಾರಿಗೆ ಉಗ್ರ ಹೋರಾಟ ಒಂದೇ ಮಾರ್ಗ. ಈ ನಿಟ್ಟಿನಲ್ಲಿ ನಿರಂತರ ಹೋರಾಟ ಪ್ರತಿ ಹಳ್ಳಿಯಲ್ಲಿ ನಡೆಸಬೇಕು. ಎಡಬಿಡದೆ ಹೋರಾಟ ಸರ್ಕಾರದ ಗಮನ ಸೆಳೆಯಬೇಕು. ಸಾವಿರಾರು ರೈತರು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಬಿಜೆಪಿ ಮುಖಂಡ ಎಚ್.ಟಿ.ಭೈರಪ್ಪ ಮಾತನಾಡಿ ಮರು ಚಾಲನೆಗೆ ಮುಂದಾದ ರೈತ ವಿರೋಧಿ ಕೆಲಸವನ್ನು ನಿಲ್ಲಿಸಲು ತಂಡೋಪತಂಡವಾಗಿ ನಾಲೆ ಮುಚ್ಚುವ ಕೆಲಸ ಮಾಡಬೇಕು. ಸ್ಥಳಕ್ಕೆ ತಾಂತ್ರಿಕ ಸಮಿತಿ ಹಾಗೂ ಜಿಲ್ಲಾಡಳಿತ ಬಂದು ರೈತರೊಟ್ಟಿಗೆ ನೇರ ಚರ್ಚೆ ನಡೆಸಿ ಸಾಧಕ ಬಾಧಕಗಳ ಬಗ್ಗೆ ತಿಳಿಯಬೇಕು. ಸರ್ಕಾರಕ್ಕೆ ಮನದಟ್ಟು ಮಾಡಿ ಕಾಮಗಾರಿ ಕೈ ಬಿಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಸರ್ಕಾರ ಇದ್ದಾಗ ಈ ಪೈಪ್ ಲೈನ್ ಕಾಮಗಾರಿ ರದ್ದು ಮಾಡಿ ಅಲ್ಲಿನ 650 ಕೋಟಿ ಹಣವನ್ನು ಹೇಮಾವತಿ ಅಗಲೀಕರಣಕ್ಕೆ ವರ್ಗಾಯಿಸಲಾಗಿತ್ತು. ಕಾಂಗ್ರೆಸ್ ಸರ್ಕಾರ ಮರು ಜೀವ ನೀಡಿದ್ದು ನಮ್ಮ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಈ ಬಗ್ಗೆ ಮಾಜಿ ಸಚಿವ ಮಾಧುಸ್ವಾಮಿ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ. ತಾಂತ್ರಿಕ ಸಮಿತಿ ಹಾಗೂ ರೈತರ ಸಭೆ ನಡೆಸುವ ದಿನ ಇಬ್ಬರು ಬರಲಿದ್ದಾರೆ. ಎಸ್.ಡಿ.ದಿಲೀಪ್ ಕುಮಾರ್, ಬಿಜೆಪಿ ಮುಖಂಡ, ಗುಬ್ಬಿ.

ಸಭೆಯಲ್ಲಿ ರೈತ ಸಂಘದ ಸಿ.ಜಿ.ಲೋಕೇಶ್, ಶಿವಕುಮಾರ್, ಜಗದೀಶ್, ಯತೀಶ್, ಜೆಡಿಎಸ್ ಮುಖಂಡ ಸುರೇಶ್ ಗೌಡ, ತಾಪಂ ಮಾಜಿ ಸದಸ್ಯ ತಿಮ್ಮಪ್ಪ, ಮರಿಯಣ್ಣ, ಸಿ.ಆರ್. ಶಂಕರ್ ಕುಮಾರ್, ಪಾರ್ಥಸಾರಥಿ, ಡಿ.ರಘು, ವೀರಶೈವ ಸಮಾಜದ ಮಂಜುನಾಥ್, ಸತೀಶ್, ರೇಣುಕಾ ಪ್ರಸಾದ್ ಇತರರು ಇದ್ದರು.

LEAVE A REPLY

Please enter your comment!
Please enter your name here