ಸ್ವಾಸ್ಥ್ಯ ಸಮಾಜಕ್ಕಾಗಿ ಆರೋಗ್ಯ ಭಾರತಿ: ಗೂಳೂರಿನಲ್ಲೊಂದು ಮಾದರಿ ತಂಡ.

ತುಮಕೂರು ನಗರಕ್ಕೆ 7km ಹತ್ತಿರದಲ್ಲೇ ಇರುವ ಗೂಳೂರು ಗ್ರಾಮ ಸ್ವಚ್ಚ ಗ್ರಾಮ, ಸ್ವಸ್ಥ ಗ್ರಾಮ ಆಗುವ ಸಂಕಲ್ಪದೊಂದಿಗೆ ಗೋಚರಿಸುತ್ತಿದೆ.
ಇದಕ್ಕೆ ಮುಖ್ಯ ಕಾರಣ *ಆರೋಗ್ಯ ಭಾರತಿ ಗೂಳೂರು* ತಂಡ! ಈ ತಂಡದಲ್ಲಿ ಬಾಲಕರು, ತರುಣರು, ಮಧ್ಯ ವಯಸ್ಕರು, ಹಿರಿಯರು ಎಲ್ಲರೂ ಇದ್ದಾರೆ. ಎಲ್ಲಾ ವೃತ್ತಿಯ ಜನರೂ ಇದರಲ್ಲಿ ಸೇರಿ, ಗ್ರಾಮದ ಏಳಿಗೆಗೆ ಅಳಿಲು ಸೇವೆ ಮಾಡುವುದನ್ನೇ ಪ್ರವೃತ್ತಿ ಮಾಡಿಕೊಂಡಿದ್ದಾರೆ. ಇದೊಂದು ಜಾತ್ಯಾತೀತ, ಪಕ್ಷಾತೀತ ರಾಷ್ಟ್ರೀಯ ಮನೋಭಾವನೆ ಇರುವ ಸಂಘಟನೆ. ಇದರಲ್ಲಿರುವವರೆಲ್ಲರೂ ಸಹೃದಯಿಗಳು. ಸುಮಾರು 20 ಜನರ ಒಂದು ಸಕ್ರಿಯ ತಂಡ. ಇಲ್ಲಿ ಎಲ್ಲರ ಧ್ಯೇಯ ಒಂದೇ, ಅದು ನಮ್ಮ ಗೂಳೂರು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವುದು ಈ ನಿಟ್ಟಿನಲ್ಲಿ ಅನೇಕ ಸೇವಾ ಚಟುವಟಿಕೆಗಳು ನಿರಂತರವಾಗಿ ಕಳೆದ 6 ವರ್ಷಗಳಿಂದ ನಡೆಯುತ್ತಿದೆ.

ಆರೋಗ್ಯ ಭಾರತಿಯ ಮುಖ್ಯ ಉದ್ದೇಶ

ಸ್ವಾಸ್ಥ್ಯ ವ್ಯಕ್ತಿ ನಿರ್ಮಾಣ : ಸ್ವಾಸ್ತ್ಯ ವ್ಯಕ್ತಿಯಿಂದ ಸ್ವಾಸ್ಥ್ಯ ಕುಟುಂಬ ನಿರ್ಮಾಣ. ಸ್ವಾಸ್ತ್ಯ ಪರಿವಾರಗಳಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುತ್ತದೆ.

 • ಕಳೆದ ಆರು ವರ್ಷಗಳಿಂದ ನಿರಂತರವಾಗಿ ಆರೋಗ್ಯ ಭಾರತಿ ವತಿಯಿಂದ ಪ್ರತಿದಿನ ಯೋಗ ಶಾಖೆ ನಡೆಯುತ್ತಿದೆ. ಬೆಳಿಗ್ಗೆ 6 ರಿಂದ 7:30ರ ಸಮಯದಲ್ಲಿ, ಗೂಳೂರಿನ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ 10-15 ಯೋಗ ಬಂಧುಗಳು ಪ್ರತಿನಿತ್ಯ ಯೋಗಾಭ್ಯಾಸದಲ್ಲಿ ನಿರತರಾಗಿರುತ್ತಾರೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಯೋಗ ಒಂದು ಅತ್ಯಮೂಲ್ಯ ಸಾಧನ. ದೇಹ ಮತ್ತು ಮನಸ್ಸಿನ ನಿಯಂತ್ರಣಕ್ಕೆ ಯೋಗ ಸಹಕಾರಿ. ಸರಿಯಾದ ಉಸಿರಾಟದ ಜೊತೆಗೆ ಮಾಡುವ ಆಸನಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರೋಗದಿಂದ ಯೋಗದ ಕಡೆಗೆ ನಮ್ಮ ಜೀವನ ಸಾಗಬೇಕಿದೆ. ಈ ನಿಟ್ಟಿನಲ್ಲಿ ಆರೋಗ್ಯ ಭಾರತಿ ಗೂಳೂರು ತಂಡ ಯೋಗ ಜೀವನ ಕಲೆಯನ್ನು ಗ್ರಾಮಸ್ಥರಿಗೆ ತಿಳಿಸುವ ಕೆಲಸ ಮಾಡುತ್ತಿದೆ. ಕಳೆದ ಐದು ವರ್ಷಗಳಿಂದ ನಿರಂತರವಾಗಿ ಮಳೆಗಾಲದ ಮುನ್ನ ಗೂಳೂರು ಗ್ರಾಮದ ಕಲ್ಯಾಣಿ ಸ್ವಚ್ಛತೆ ಮಾಡುವ ಶ್ರಮದಾನ ನಡೆಯುತ್ತಿದೆ. ಐದು ವರ್ಷದ ಹಿಂದೆ ಈ ಕಲ್ಯಾಣಿ ಹೂಳು, ಕಳೆ, ಮುಳ್ಳು ಗಿಡಗೆಂಟೆಗಳಿಂದ ಪಾಳು ಬಿದ್ದಿತ್ತು. ಸತತ 8 ಭಾನುವಾರ, 20ಕ್ಕೂ ಹೆಚ್ಚು ಯುವಕರ ಶ್ರಮದಾನದ ಫಲವಾಗಿ ಗೂಳೂರು ಕಲ್ಯಾಣಿ ಶುಚಿಯಾದಳು. ತದನಂತರ ಪ್ರತಿವರ್ಷ ಆರೋಗ್ಯ ಭಾರತಿ ಕಾರ್ಯಕರ್ತರು ತಪ್ಪದೇ ವರ್ಷಕ್ಕೊಮ್ಮೆ ಇದನ್ನು ಸ್ವಚ್ಛ ಮಾಡುತ್ತಿದ್ದಾರೆ. ಇದರ ಫಲವಾಗಿ ನಾಲ್ಕು ಬಾರಿ ಕಲ್ಯಾಣಿ ಮಳೆ ನೀರಿನಿಂದ ತುಂಬಿ, ದೀಪೋತ್ಸವ, ಸಂಗೀತೋತ್ಸವ ಸಂಭ್ರಮ ಆಚರಿಸುವಂತಾಗಿದೆ. ಈ ನಮ್ಮ ಪ್ರಯತ್ನ ಅಂತರ್ಜಲ ಸಂರಕ್ಷಣೆಯಲ್ಲಿ ಮಹತ್ತರ ಸಾಧನೆಯಾಗಿದೆ.
 • ನಾಲ್ಕು ವರ್ಷದ ಹಿಂದೆ ಆರೋಗ್ಯ ಭಾರತಿ ಗೂಳೂರು ವತಿಯಿಂದ *Seed balls* ಮಾಡುವ ಕಾರ್ಯಕ್ರಮ ಆಯೋಜಿಸಿದ್ದು, ಸುಮಾರು 5000 ಹೊಂಗೆ, ಬೇವು, ನೇರಳೆ, ಸೀತಾ ಫಲ, ತೊರೆ ಮತ್ತಿ, ಹಲಸು ಬೀಜದ ಉಂಡೆಗಳನ್ನು ಮಾಡಿ, ನಾಮದ ಚಿಲುಮೆ, ದೇವರಾಯನ ದುರ್ಗದ ಕಾಡಿನಲ್ಲಿ ಅವನ್ನು ಎಸೆದು ಬರಲಾಯಿತು. ಇಷ್ಟು ಹೊತ್ತಿಗೆ ಕನಿಷ್ಠ ಪಕ್ಷ ಶೇಕಡಾ ಹತ್ತರಷ್ಟು ಬೀಜಗಳು ಉಳಿದು ಬೆಳೆದು ಮರವಾಗಿರುತ್ತದೆ.
 • ಮೂರು ವರ್ಷದ ಹಿಂದೆ ಗೂಳೂರು ಗಣೇಶನ ದೇವಸ್ಥಾನದಲ್ಲಿ ಆರೋಗ್ಯ ಭಾರತಿ ವತಿಯಿಂದ *ಮನೆಮದ್ದು* ಮತ್ತು *ಔಷಧಿ ಸಸ್ಯಗಳ ಪರಿಚಯ* ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮಸ್ಥರಿಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲೇ ಮಾಡಬಹುದಾದ ಪರಿಹಾರಗಳ ಬಗ್ಗೆ ತಿಳಿಸಲಾಯಿತು. 
 • ಅದೇ ವರ್ಷ ಆರೋಗ್ಯ ಭಾರತಿ ವತಿಯಿಂದ ಗಣೇಶನ ದೇವಸ್ಥಾನದಲ್ಲಿ ನಾಲ್ಕು ವಾರಗಳ *ಸಂಸ್ಕೃತ ಸಂಭಾಷಣಾ ಶಿಬಿರ* ಆಯೋಜಿಸಲಾಗಿತ್ತು. ದೇವ ಭಾಷೆ ಸಂಸ್ಕೃತ ಕಲಿಕೆ, ಸಂಸ್ಕಾರವಂತ ಸಮಾಜ ನಿರ್ಮಾಣದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. 
 • ಎರಡು ವರ್ಷಗಳ ಹಿಂದೆ ಎಲ್ಲಾ ಆರೋಗ್ಯ ಭಾರತಿ ಕಾರ್ಯಕರ್ತರು ನಾಲ್ಕು ದಿನಗಳ *ಮಲೆನಾಡು ಪ್ರವಾಸ* ಕೈಗೊಂಡು ಹೊರನಾಡು, ಶೃಂಗೇರಿ, ಹರಿಹರಪುರ, ಪ್ರಭೋಧಿನಿ ಗುರುಕುಲ, ಕಮಂಡಲ ಗಣಪತಿ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಉಜಿರೆ, ಸೌತಡ್ಕ ಗಣಪತಿ, ಯಡಿಯೂರು ದೈವಗಳ ದರ್ಶನ ಭಾಗ್ಯ ಪಡೆಯುವ ಅವಕಾಶ ಕಲ್ಪಿಸಲಾಗಿತ್ತು. ಪುಣ್ಯ ಕ್ಷೇತ್ರಗಳ ದರ್ಶನ ಮಾಡುವುದಕ್ಕೂ ಯೋಗ ಇರಬೇಕು. ಅಂಥ ಸುಯೋಗ ನಮಗೆ ಈ ಸಂಘಟನೆ ಮೂಲಕ ದೊರೆಯಿತು.
 • ಕಳೆದ ವರ್ಷ ಸುಪ್ರೀಂ ಕೋರ್ಟಿನ ತೀರ್ಪು ಅಯೋಧ್ಯಾ ರಾಮ ಮಂದಿರದ ಪರವಾಗಿ ಬಂದ ಸುಸಂದರ್ಭದಲ್ಲಿ ನಮ್ಮ ಗ್ರಾಮದ ಶಕ್ತಿ ಕೇಂದ್ರ ಧೀರ ಪ್ರತಾಪ ಆಂಜನೇಯಸ್ವಾಮಿ ದೇವಾಲಯದಲ್ಲಿ ಆರೋಗ್ಯ ಭಾರತಿ ತಂಡದ ವತಿಯಿಂದ ಅಭಿಷೇಕ, ಪೂಜೆ ಏರ್ಪಡಿಸಿ, ಒಂದು ಹೈ ವೋಲ್ಟೇಜ್ *ಭಜನೆ* ಯ ಕಾರ್ಯಕ್ರಮ ಆಯೋಜಿಸಿ ಸಮಸ್ತ ಭಾರತೀಯರ ದೈವ ಮರ್ಯದ ಪುರುಷೋತ್ತಮ ಪ್ರಭು ಶ್ರೀ ರಾಮ ಮತ್ತು ಹನುಮನ ಸ್ಮರಿಸಿದೆವು. 
 • ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಆರೋಗ್ಯ ಭಾರತಿ ಗೂಳೂರು ತಂಡದಿಂದ ಮಲಬಾರ್ ಗೋಲ್ಡ್ ಸಹಯೋಗದೊಂದಿಗೆ 150 ಅರ್ಹ ಫಲಾನುಭವಿಗಳಿಗೆ ಉಚಿತ *ರೇಷನ್ ಕಿಟ್* ವಿತರಿಸಲಾಯಿತು. 
 • ಗೂಳೂರು ಆರೋಗ್ಯ ಭಾರತಿ ತಂಡದ ವೈದ್ಯರು ತುಮಕೂರು ಸೇವಾ ಭಾರತಿಯ ಸಹಯೋಗದೊಂದಿಗೆ ಕೋವಿಡ್ ಸಂಕಷ್ಟದ ಸಮಯದಲ್ಲಿ *ಕೋವಿಡ್ ಸಹಾಯವಾಣಿ* ಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿ, ಜಿಲ್ಲೆಯ ನೂರಾರು ಜನರಿಗೆ ಉಚಿತವಾಗಿ ವೈದ್ಯಕೀಯ ಸಲಹೆ, ಆಪ್ತ ಸಮಾಲೋಚನೆ, ವೈದ್ಯಕೀಯ ನೆರವು ನೀಡಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ನಮ್ಮ ಗೂಳೂರು ಗ್ರಾಮದಲ್ಲಿ ನಾಡ ಪ್ರಭು ಕೆಂಪೇಗೌಡರ ಜಯಂತಿ ನಿಮಿತ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಗೂಳೂರು ಗಣೇಶನ ಆಶೀರ್ವಾದದಿಂದ ಅದು ಒಂದು *ವನ ಮಹೋತ್ಸವ* ಕಾರ್ಯವಾಯಿತು.
– ಶ್ರೀ ಸಂಜಯ್ ಗೌಡ, ಸಂಯೋಜಕರು, ಆರೋಗ್ಯ ಭಾರತಿ, ಗೂಳೂರು

ಸತತ 8 ಭಾನುವಾರದ ಶ್ರಮದಾನದ ಫಲವಾಗಿ ನಮ್ಮ ಗೂಳೂರು ಗ್ರಾಮದಲ್ಲಿ 170ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು, ದಾನಿಗಳಿಂದ ಪಡೆದ ಕಬ್ಬಿಣದ ಟ್ರೀ ಗಾರ್ಡ್ ಹಾಕಿ, ಅದರ ಮೇಲೆ ದಾನಿಗಳ ಹೆಸರು ಬರೆಸಿ, ಗಿಡಗಳಿಗೆ ಪಾತಿ ಮಾಡಿ, ಗೊಬ್ಬರ ನೀರು ಹಾಕಿ, ಪ್ರಕೃತಿ ಮಾತೆಯ ಋಣ ತೀರಿಸುವ ಸತ್ಕಾರ್ಯ ಮಾಡಲಾಯಿತು. ಪ್ರಾಣಿ ಪಕ್ಷಿಗಳು ಒಳಗೊಂಡಂತೆ ಮನುಜನಿಗೆ ಸಹಾಯ ಆಗುವ ನೇರಳೆ, ಅತ್ತಿ, ಆಲ, ಹಲಸು, ಬೇವು, ಅರಳಿ, ಹುಣಸೆ, ಮಾವು, ಗೋಣಿ, ತೊರೆ ಮತ್ತಿ ಮುಂತಾದ ಅನೇಕ ಸಸ್ಯ ಪ್ರಬೇಧಗಳ ಪೈಕಿ, ನಮ್ಮ ಗೂಳೂರು ಗ್ರಾಮದ ಉಮಾ ಮಹೇಶ್ವರ ಸ್ವಾಮಿ ದೇವಾಲಯದ ಸುತ್ತ 20 ಸಸಿಗಳು, ಧೀರ ಪ್ರತಾಪ ಆಂಜನೇಯಸ್ವಾಮಿ ದೇವಾಲಯದ ಸುತ್ತ 15 ಸಸಿಗಳು, ಗಣೇಶನ ಗದ್ದೆಯಲ್ಲಿ 104 ಸಸಿಗಳು, ರಸ್ತೆಯ ಪಕ್ಕದಲ್ಲಿ 6 ಸಸಿಗಳು, ಲೇಔಟ್ ಒಂದರ ಉದ್ಯಾನವನ ಜಾಗದಲ್ಲಿ 25 ಸಸಿಗಳನ್ನು ನೆಟ್ಟಿದ್ದು, ಮುಂದಿನ ಮೂರು ವರ್ಷ ಅವುಗಳ ಆರೈಕೆ ಮತ್ತು ರಕ್ಷಣೆಯ ಸಂಕಲ್ಪ ಮಾಡಲಾಗಿದೆ. ಹತ್ತಿರ ವಾಸವಿರುವ ಗ್ರಾಮಸ್ಥರ ಮನವೊಲಿಸಿ ಸಸಿಗಳಿಗೆ ನೀರು ನೀಡುವಂತೆ ಮನವಿ ಮಾಡಿದ್ದು, ನಾವೆಲ್ಲರೂ ಪ್ರತಿ ಭಾನುವಾರ ಶ್ರಮದಾನದ ಮೂಲಕ ನೀರು ಗೊಬ್ಬರ ಹಾಕಿ ಸಸಿಗಳನ್ನು ಪೋಷಿಸುವ ಯೋಜನೆ ರೂಪಿಸಲಾಗಿದೆ. ಎಲ್ಲಾ ಸಸಿಗಳು ಬೆಳೆದು ಹೆಮ್ಮರವಾದಾಗ ಮಾತ್ರ ನಮ್ಮ ಪರಿಶ್ರಮ ಸಾರ್ಥಕ. ಗಣೇಶನ ಗದ್ದೆಯಲ್ಲಿ ನೆಟ್ಟಿರುವ ಸಸಿಗಳ ಮಧ್ಯ ಕುಳಿತುಕೊಳ್ಳಲು ದಾನಿಗಳಿಂದ ಪಡೆದ ನಾಲ್ಕು ಪಾರ್ಕ್ ಬೆಂಚ್ ಹಾಕಲಾಗಿದೆ. ಹಿಂದಿನ ಕಾಲದಲ್ಲಿ ಪ್ರತಿ ಗ್ರಾಮದಲ್ಲಿ ಇದ್ದ ತೋಪುಗಳು ಇಂದು ಕಣ್ಮರೆಯಾಗಿದ್ದು, ಮತ್ತೆ ಗತ ಕಾಲದ ಪ್ರಕೃತಿ ವೈಭವ ಸವಿಯಲು ನಾವು ಗಣೇಶನ ಗದ್ದೆಯಲ್ಲಿ *ಗಣೇಶನ ವನ* ನೋಡುವ ಕನಸಿದೆ. ನಮ್ಮ ಗೂಳೂರು ಗ್ರಾಮವನ್ನು *ಹಸಿರು ಗ್ರಾಮ* ಮಾಡುವ ನಿಟ್ಟಿನಲ್ಲಿ ಇದೊಂದು ಮೊದಲ ಹೆಜ್ಜೆ.

 • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 15ರಂದು ಗೂಳೂರು ಗ್ರಾಮದ ಮುಖ್ಯ ದ್ವಾರದ ಬಳಿ ಇರುವ ಹಳೆಯ ಛತ್ರದ ಪಕ್ಕ ದಶಕಗಳಿಂದ ಇದ್ದ ದೊಡ್ಡ ಕಸದ ರಾಶಿಗೆ ಒಂದು ಕಾಯಕಲ್ಪ ನೀಡುವ ಯೋಚನೆ ಸಾಕಾರವಾಯಿತು. ಆರೋಗ್ಯ ಭಾರತಿ ವತಿಯಿಂದ ನಮ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಗ್ರಾಮದ ಮುಖಂಡರ ಅಮೃತ ಹಸ್ತದಿಂದ ಅಲ್ಲಿ 5 ಸಸಿಗಳನ್ನು ನೆಟ್ಟು, ಟ್ರೀ ಗಾರ್ಡ್ ಹಾಕಿ, ಕುಳಿತುಕೊಳ್ಳಲು ದಾನಿಗಳಿಂದ ಪಡೆದ ಎರಡು ಪಾರ್ಕ್ ಬೆಂಚ್ ಇಟ್ಟು, ಚಂಡು ಹೂವಿನ ಗಿಡಗಳಿಂದ ಸಿಂಗರಿಸಿ, ಅಲ್ಲಿದ್ದ ಛತ್ರದ ಗೋಡೆಯ ಮೇಲೆ ಸ್ವಚ್ಛತೆ, ಸ್ವಾಸ್ಥತೆಯ ಸಂದೇಶಗಳನ್ನು ಬರೆಸಿ, ಗೂಳೂರು ಗ್ರಾಮದ ಜನರ ಮನಃ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಒಂದು ಪ್ರಯತ್ನ ಮಾಡಿದ್ದೇವೆ. ನಮ್ಮ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿಗೆ ಕಸದ ಆಟೋ ವ್ಯವಸ್ಥೆ ಮಾಡುವಂತೆ ಮತ್ತು ಒಂದು ಸುಲಭ ಶೌಚಾಲಯ ನಿರ್ಮಾಣ ಮಾಡುವಂತೆ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದು, ಇದಕ್ಕೆ ಗ್ರಾಮದ ಎಲ್ಲಾ ಮುಖಂಡರೂ ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ. ಸ್ವಚ್ಛತೆ ಇಲ್ಲದೆ ಸ್ವಾಸ್ಥ್ಯ ಇರಲಾರದು. ಸ್ವಚ್ಚ ಭಾರತದ ಕಲ್ಪನೆ ಸಾಕರವಾಗಬೇಕೆಂದರೆ ಗ್ರಾಮ ನೈರ್ಮಲ್ಯಕ್ಕೆ ಗ್ರಾಮಸ್ಥರೆಲ್ಲರೂ ಒತ್ತು ನೀಡಲೇಬೇಕು.
 • ಪ್ರತಿವರ್ಷ ನಿರಂತರವಾಗಿ ನಮ್ಮ ಶ್ರದ್ಧಾ ಕೇಂದ್ರಗಳಾದ *ದೇವಸ್ಥಾನಗಳ ಶುಚಿತ್ವ* ಕಾಪಾಡುವ ನಿಟ್ಟಿನಲ್ಲಿ ಗೂಳೂರು ಗ್ರಾಮದ ಧೀರ ಪ್ರತಾಪ ಆಂಜನೇಯ ಸ್ವಾಮಿ ದೇವಾಲಯ ಮತ್ತು ಇತಿಹಾಸ ಪ್ರಸಿದ್ಧ ಗೂಳೂರು ಗಣೇಶನ ದೇವಾಲಯವನ್ನು ಶ್ರಮದಾನದ ಮೂಲಕ ಸ್ವಚ್ಚ ಮಾಡಲಾಗುತ್ತದೆ.ಇವೆಲ್ಲದರ ಜೊತೆಗೆ ಪ್ರತಿ ವರ್ಷ ಆರೋಗ್ಯ ಭಾರತಿ, ಗೂಳೂರು ವತಿಯಿಂದ ಯೋಗ ದಿನಾಚರಣೆ, ಧನ್ವಂತರಿ ಜಯಂತಿ, ಗುರು ಪೂಜೆ ಉತ್ಸವ ಮತ್ತು ರಕ್ಷಾ ಬಂಧನ ಕಾರ್ಯಕ್ರಮಗಳು ಅರ್ಥಗರ್ಭಿತವಾಗಿ ಆಚರಿಸುತ್ತೇವೆ. ಈ ಬಾರಿ ರಕ್ಷಾ ಬಂಧನದ ದಿನ, ನಾವು ನೆಟ್ಟಿರುವ ಒಂದು ಸಸಿಗೆ ಸಾಂಕೇತಿಕವಾಗಿ ರಕ್ಷೆ ಕಟ್ಟುವ ಮೂಲಕ ಎಲ್ಲಾ ಸಸಿಗಳನ್ನು ರಕ್ಷಿಸುವ ಸಂಕಲ್ಪ ಮಾಡಲಾಯಿತು. 
 • ಈ ನಮ್ಮ ಆರೋಗ್ಯ ಭಾರತಿ ಗೂಳೂರು ತಂಡದ ಸೇವಾ ಚಟುವಟಿಕೆಗಳಿಂದ ಸ್ಫೂರ್ತಿ ಪಡೆದು ರಾಜ್ಯದ ಸುಮಾರು 8-10 ಹಳ್ಳಿಗಳಲ್ಲಿ ಇದೇ ತರಹದ ಮಾದರಿಯಲ್ಲಿ ಸೇವಾ ಕಾರ್ಯಗಳು ನಡೆಯುತ್ತಿದ್ದು, ನಮ್ಮ ಗೂಳೂರು ಗ್ರಾಮ ಇದಕ್ಕೆ ಪ್ರೇರಣೆ ಎಂಬುದು ನಮ್ಮ ಹೆಮ್ಮೆ.ಬರುವ ದಿನಗಳಲ್ಲಿ ನಮ್ಮ ಗೂಳೂರು ಗ್ರಾಮದಲ್ಲಿ ರಕ್ತ ದಾನ ಶಿಬಿರ, ನೇತ್ರ ದಾನದ ಅರಿವು, ಸಾವಯವ ಕೃಷಿ ಬಗ್ಗೆ ಮಾಹಿತಿ, ದೇಸಿ ಹಸುವಿನ ಮಹತ್ವ, ಪ್ಲಾಸ್ಟಿಕ್ ಮುಕ್ತ ಗ್ರಾಮದ ಕಲ್ಪನೆ, ಧೂಮಪಾನ ಮತ್ತು ಮದ್ಯಪಾನದ ದುಷ್ಪರಿಣಾಮಗಳನ್ನು ತಿಳಿಸುವ ಬಗ್ಗೆ ಹಲವು ಕಾರ್ಯಗಾರ ಮಾಡಿಸುವ ಯೋಚನೆ ಇದೆ. 

ಸಂಸ್ಕಾರ, ಸಂಘಟನೆ ಮತ್ತು ಸೇವೆಯ ಧ್ಯೇಯೋದ್ದೇಶದಿಂದ ನಾವು ಮಾಡುತ್ತಿರುವ ಚಿಕ್ಕ ಪುಟ್ಟ ಕೆಲಸಗಳು ನಮ್ಮ ಸಾಮಾಜಿಕ ಆರೋಗ್ಯ ವೃದ್ಧಿಸುವಲ್ಲಿ ಸಹಕಾರಿಯಾಗಿದೆ. ಸರ್ಕಾರ ಕಾನೂನು ರೂಪಿಸುತ್ತದೆ. ನಿಯಮಾವಳಿಗಳನ್ನು ಮಾಡಿ, ಯೋಜನೆಗಳ ಅನುಷ್ಠಾನಕ್ಕೆ ಆರ್ಥಿಕ ನೆರವು ನೀಡುತ್ತದೆ. ಆದರೆ ಅದನ್ನು ಸರಿಯಾಗಿ ಪರಿಪಾಲನೆ ಮಾಡಬೇಕಿರುವುದು ಜವಾಬ್ದಾರಿಯುತ ನಾಗರೀಕರು. ನಮಗ್ಯಾಕೆ ಊರ ಉಸಾಬರಿ ಎಂದು ಸುಮ್ಮನೆ ಮನೆಯಲ್ಲಿ ಟಿವಿ, ಮೊಬೈಲ್ ನೋಡುತ್ತಾ ಕುಳಿತರೆ ನಮ್ಮ ತಾರುಣ್ಯ ಸತ್ತು ಹೋಗುತ್ತದೆ. ನಾವು ಹುಟ್ಟಿ ಬೆಳೆದ ಊರಿಗೆ ಏನನ್ನಾದರೂ ಮರಳಿ ನೀಡಿದರೆ ಮಾತ್ರ ನಮ್ಮ ಜೀವನ ಸಾರ್ಥಕ. ಈ ಎಲ್ಲಾ ಸೇವಾ ಚಟುವಟಿಕೆಗಳಿಗೆ ಆರ್ಥಿಕ ಸಹಾಯ ನೀಡಿರುವುದು ಇದೇ ಸಮಾಜದ ಸಹೃದಯಿಗಳು. ನಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ, ಬದ್ಧತೆ ಇದ್ದರೆ ಆರ್ಥಿಕ ನೆರವು ದಾನಿಗಳಿಂದ ಸುಲಭವಾಗಿ ಹರಿದು ಬರುತ್ತದೆ. ನಮ್ಮ ಗೂಳೂರು ಗ್ರಾಮವನ್ನು ಸ್ವಚ್ಚ, ಸ್ವಸ್ಥ, ಸ್ವಾವಲಂಬಿ ಗ್ರಾಮವನ್ನಾಗಿ ಮಾಡುವ ಕನಸು ನಮ್ಮದು. ಸತ್ಸಂಕಲ್ಪ ಇರುವುದರಿಂದ ನಮ್ಮ ಈ ಕನಸು ನಿಸ್ಸಂಶಯವಾಗಿ ನನಸಾಗುತ್ತದೆ! 

ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯ. ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು.

 

error: Content is protected !!