ಬೆಂಗಳೂರು: ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಂಡಿರುವ ಈ ಪುಸ್ತಕ ಓದುಗರ ವಲಯದಲ್ಲಿ ಹೊಸ ಅಲೆಯನ್ನು ಎಬ್ಬಿಸುತ್ತಿದೆ. ಏಕೆಂದರೆ ಈ ಪುಸ್ತಕದ ವಿಶೇಷತೆ
ಯೌವ್ವನದ ಹೊಳೆಯನ್ನು ದಾಟಿ ಬಂದಿರುವ ಇಂದಿನ ಪೋಷಕರಿಗೆ… ಇಂದು ಆ ಹೊಳೆಯಲ್ಲಿ ಈಜುತ್ತಿರುವ ನಾಳೆಯ ಪೋಷಕರಿಗೆ ಇಬ್ಬರಿಗೂ ಮುಕ್ತವಾಗಿ ಅವರವರ ಪ್ರಶ್ನೆಗಳು ಹಾಗೂ ಅವುಗಳಿಗೆ ಉತ್ತರಗಳನ್ನು ತೆರೆದಿಡುತ್ತದೆ. ‘ಕಡ್ಡಾಯವಾಗಿ ಪೋಷಕರಿಗೆ ಮಾತ್ರ!’ ಈ ಕೃತಿಯ ಶೀರ್ಷಿಕೆ ಕೇಳಿಯೇ, ಒಂದಷ್ಟು ಮಂದಿಗೆ ಇದೇನೋ ವಿಶೇಷವಾಗಿದೆ ಅನಿಸಿದರೆ ಮತ್ತೆ ಕೆಲವರಿಗೆ ಇದೆಂತಾ ಶಿರೋನಾಮ ಅಂತನಿಸಿರುತ್ತದೆ. ವಾಸ್ತವಕ್ಕೆ, ಇದು ಕಡ್ಡಾಯವಾಗಿ ಪ್ರತಿಯೊಬ್ಬರು ಓದಲೇಬೇಕಾದ ಪುಸ್ತಕವಾಗಿದೆ

ಈ ಪುಸ್ತಕದ ವಿಶೇಷತೆ ಏನು?

ಬೆಳೆದು ನಿಂತ ಮಕ್ಕಳ ಸ್ವಾತಂತ್ರ್ಯ Vs ಪೋಷಕರೆಂಬ ಅಡ್ಡಗೋಡೆಗಳ ಮಧ್ಯೆ ಪ್ರತಿಯೊಬ್ಬರ ಜೀವನವನ್ನು ಈ ಪುಸ್ತಕ ವಿಶ್ಲೇಷಿಸುತ್ತದೆ. ಮಕ್ಕಳು ಬೆಳದಂತೆ ಒಂದೆಡೆ ಆನಂದ ಇನ್ನೊಂದು ಕಡೆ ಪೋಷಕರಾಗಿ ನಿಮಗೊಂದು ಸಹಜ ಆತಂಕ. ನಿಮಗೆ ಅವರುಗಳ ಮೇಲೆ ಅಪಾರವಾದ ಪ್ರೀತಿ-ಪ್ರೇಮ, ಅನುರಾಗ, ಬಾಂಧವ್ಯ ಜೊತೆಗೆ ಅವರುಗಳಿಗಿಂತ, ಅವರುಗಳ ಜೀವನದ ಬಗ್ಗೆ ನಿಮ್ಮಲ್ಲಿ ಅನೇಕ ತರದ ಕನಸುಗಳಿವೆ. ಎಷ್ಟೇ ಆಗಲಿ ನೀವು ಅವರಿಗೆ ತಂದೆ- ತಾಯಿಗಳು!

ನಿಮಗಿರುವ ಭಯ, ಆತಂಕವೆಲ್ಲ ಈಗ ಅವರು ಹದಿಹರೆಯಕ್ಕೆ ಬಂದಿದ್ದಾರೆ, ಯೌವ್ವನದ ಹೊಳೆಯಲ್ಲಿ ಈಜಲೆಂದು ಧುಮುಕಿದ್ದಾರೆ. ‘ಅದ್ಹೇಗೆ ಈಜಿ, ಸುಲಭವಾಗಿ ಅದರಿಂದ ಹೊರಬರ್ತಾರೆ’ ಎಂಬ ಸಹಜವಾದ ಆತಂಕ ನಿಮ್ಮಗಳದು. ಯೌವ್ವನದ ಹೊಳೆಯಲ್ಲಿ ಪ್ರಾಯದ ಬದುಕು ಕೊಚ್ಚಿ ಹೋಗುವುದು ಅಂತ ಕಷ್ಟಕರವಾದ ಸಂಗತಿ ಏನಲ್ಲ. ವಾಸ್ತವಕ್ಕೆ, ನಿಜಕ್ಕೂ ಕಷ್ಟಕರವಾದದ್ದು ಪ್ರಾಯವನ್ನು ಕಾಪಾಡಿಕೊಂಡು ಪ್ರಬುದ್ಧರಾಗಿ ಬೆಳೆದು ಬದುಕನ್ನು ಕಟ್ಟಿಕೊಳ್ಳುವುದು. ಹದಿಹರೆಯವೆಂದರೆ ದಾರಿ ತಪ್ಪುವ ದಿನಗಳು. ನಿಮ್ಮಲ್ಲಿ ಕೂಡ ಅನೇಕ ಪೋಷಕರು ಆ ವಯಸ್ಸಿನಲ್ಲಿ ದಾರಿ ತಪ್ಪಿದವರೇ, ನಂತರದ ಸಮಯದಲ್ಲಿ ದಿಕ್ಕು ತಪ್ಪಿಸಿದ್ದ ಯೌವ್ವನವನ್ನು, ಆ ಹೊಳೆಯನ್ನು ದಾಟಿ ವಯಸ್ಕರಾದ (25 ವರ್ಷ) ನಂತರ ಪ್ರಾಯಕ್ಕೆ ಅಂತಿಮ ಪ್ರಣಾಮಗಳನ್ನು ಸಲ್ಲಿಸಿ, ಸಂಪಾದನೆಗೆ ಅಡಿಪಾಯವನ್ನು ಹಾಕಿಕೊಂಡು, ಬದುಕಿಗೊಂದು ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಬದಲಾಗಿರುತ್ತೀರಿ.

ಈಗ ಪೋಷಕರಾಗಿ ನಿಮಗಿರುವ ಆತಂಕವೆಲ್ಲ, ‘ಎಲ್ಲಿ ನಮ್ಮ ಮಕ್ಕಳು ದಾರಿ ತಪ್ಪಿ ಹೋಗುತ್ತಾರೋ,’ ಹಿಂದೆ
ಇದೇ ಭಯ-ಆತಂಕ ನಿಮ್ಮಗಳ ವಿಷಯದಲ್ಲಿ ನಿಮ್ಮ ಪೋಷಕರಿಗೂ ಸಹ ಇತ್ತು. ಹದಿಹರೆಯದ ಕಾಲವನ್ನು ದಾಟಿಕೊಂಡು ಗೌರವಪೂರ್ವಕವಾದ ಬದುಕನ್ನು ಕಟ್ಟಿಕೊಂಡು ಜೀವನ ನಡೆಸುತ್ತಿರುವ ನಿಮಗೆ ನಿಮ್ಮಂತೆ ಅಥವಾ ನಿಮಗಿಂತ ಎತ್ತರದ ಸ್ಥಾನದಲ್ಲಿ ನಿಮ್ಮ ಮಕ್ಕಳನ್ನು ಕಾಣಬೇಕೆಂಬ ಬಯಕೆ ಸಹಜವಾದದ್ದು. ನಿಮ್ಮಗಳ ವಿಷಯದಲ್ಲಿ ನಿಮ್ಮ ಪೋಷಕರಿಗಿದ್ದ ಆತಂಕವೇ, ಈಗ ನಿಮ್ಮ ಮಕ್ಕಳ ವಿಷಯದಲ್ಲಿ ನಿಮಗೂ ಸಹ ಇರುವಂತದ್ದು. ಆ ಆತಂಕಗಳಿಗೆ ಕಾರಣಗಳು ಹಲವು ಇರಬಹುದು.

ತುಂಬಾ ಮಂದಿ; ಮಕ್ಕಳು ಪ್ರಾಯಕ್ಕೆ ಬರುವುದೇ ತಡ, ‘ಮಕ್ಕಳ ಜೊತೆ ಕ್ಲೋಸ್ ಆಗಿರಬೇಕು, ಸ್ನೇಹಿತರಾಗಬೇಕು’ ಅಂತೆಲ್ಲ ಹೇಳುತ್ತಾರೆ. ಒಬ್ಬ ತಂದೆ ಅಥವಾ ತಾಯಿಯಾಗಿ ನೀವು ಮಾಡಬಹುದಾದ ಅತಿ ದೊಡ್ಡ ತಪ್ಪು ನಿಮ್ಮ ಮಕ್ಕಳಿಗೆ ಸ್ನೇಹಿತರಾಗಲು ಹೊರಡುವುದು. ಯಾವ ಮಗ ಅಥವಾ ಮಗಳು ನಿಮ್ಮನ್ನು ಫ್ರೆಂಡ್ ಆಗುವಂತೆ ಕೇಳಿಕೊಳ್ಳುವುದಿಲ್ಲ. ಅದರಲ್ಲೂ ಪ್ರಾಯದಲ್ಲಿರುವ ಅವರುಗಳಿಗೆ ಮುಕ್ತವಾದ ಭಾವನಾತ್ಮಕ ಪ್ರಪಂಚ ಬೇಕಿರುತ್ತದೆ. ಅವರಿಗೆ ಅವರ ವಯಸ್ಸಿನ ಆಲೋಚನೆಗಳಿಗೆ ತಕ್ಕಂತೆ ಸ್ನೇಹಿತರ ಗುಂಪು ಇರುತ್ತದೆ. ಅವರಿಗೆ ಜೀವನದಲ್ಲಿ ಸ್ನೇಹಿತರಾಗಲು ತುಂಬಾ ಮಂದಿ ಇದ್ದಾರೆ. ಪೋಷಕರಾಗಲು ನಿಮ್ಮನ್ನು ಬಿಟ್ಟು ಬೇರೆ ಯಾರಿದ್ದಾರೆ? ನಿಮಗೆ ತಾನೆ ಅವರನ್ನು ಬಿಟ್ಟು ಬೇರೆ ಮಕ್ಕಳು ಅಂತ ಯಾರಿದ್ದಾರೆ?

‘ಅಪ್ಪ-ಅಮ್ಮ’ ಎಂದರೆ ಮಕ್ಕಳ ಜೀವನದಲ್ಲಿ ಎರಡು ನಿರ್ಣಯಾಧಿಕಾರ ಕೇಂದ್ರಗಳು. ಹೀಗಾಗಿಯೇ ಬಹುತೇಕ ಅವರ ಬದುಕಿನ ನಿರ್ಣಯಗಳನ್ನು ನೀವುಗಳೇ ನಿರ್ಣಯಿಸುತ್ತೀರಿ ಮತ್ತವರು ಅದನ್ನು ಪಾಲಿಸುತ್ತಾರೆ.
ಹಾಗೆ ಅವರು ಪಾಲಿಸಲಿಕ್ಕೆ ಬಹು ಮುಖ್ಯ ಕಾರಣಗಳೆಂದರೆ, ಅವರುಗಳಿಗೆ ನಿಮ್ಮನ್ನು ಕಂಡರೆ ‘ಭಯ- ಪ್ರೀತಿ ಮತ್ತು ಗೌರವ’ ಗಳಿದೆ!. ಆದರೆ, ಸ್ನೇಹಿತರಾಗುವ ಮೂಲಕ ಈ ಮೂರನ್ನು ಯಾಕೆ ಕಳೆದುಕೊಳ್ಳಲು ಇಚ್ಚಿಸುತ್ತೀರಿ?. ಅವರಿಗೆ ಪ್ರೌಢಾವಸ್ಥೆಯಲ್ಲಿ ಬೇಕಿರುವುದು ನಿಮ್ಮ ಸ್ನೇಹವಲ್ಲ, ಬದಲಾಗಿ ಸರಿಯಾದ ನಿಮ್ಮ ಮಾರ್ಗದರ್ಶನ. ಅವರ ಭವಿಷ್ಯದ ಕನಸುಗಳಿಗೆ ನಿಮ್ಮ ಸಹಕಾರ. ಪೋಷಕರಾಗಿ ನಿಮ್ಮ ಆದ್ಯತೆಗಳು, ಟೀನೇಜರ್ ಗಳಾದ ಅವರ
ಆಸೆ, ಆಕಾಂಕ್ಷೆ, ಬಯಕೆಗಳು ಉತ್ತರ- ದಕ್ಷಿಣಾಭಿಮುಖವಾಗಿರುತ್ತವೆ. ಒಂದಷ್ಟು ಸಮಯದಲ್ಲಿ ಎರಡು ಹೊಂದಾಣಿಕೆ ಆಗಬಹುದು, ಆದರೆ ಬಹುತೇಕ ಸಂದರ್ಭಗಳಲ್ಲಿ ಒಂದು ಇನ್ನೊಂದಕ್ಕೆ ತದ್ವಿರುದ್ಧವಾಗಿರುತ್ತದೆ.

ಬೆಳೆದು ನಿಂತ ಮಕ್ಕಳ ವಿಷಯದಲ್ಲಿ, ಅವರುಗಳ ಮುಂದಿನ ಭವಿಷ್ಯದ ಸಂಗತಿಗಳಲ್ಲಿ ಪೋಷಕರಾದ ನಿಮಗೆ ತಾಳ್ಮೆ- ಸಂಯಮ ಬಹಳಷ್ಟು ಬೇಕಿರುತ್ತದೆ. ಮಕ್ಕಳು ದುಡಿಕಿ ತಪ್ಪು ಮಾಡಬಹುದು, ಆದರೆ ಪೋಷಕರಾದ ನೀವುಗಳು ಯಾವುದೇ ಕಾರಣಕ್ಕೂ ಸಹ ದುಡುಕಬಾರದು. ದುಡಿಕಿ ಮಕ್ಕಳು ಮಾಡುವ ತಪ್ಪನ್ನೇ ನೀವು ಮಾಡುವುದಾದರೆ ಅವರಿಗೂ ನಿಮಗೂ ಯಾವುದೇ ವ್ಯತ್ಯಾಸ ಉಳಿಯುವುದಿಲ್ಲ. ಹೌದು ಕಾಲೇಜು ಹಂತದಲ್ಲಿ ಅವರ ಆಯ್ಕೆಯ ಕೋರ್ಸ್ ಅಥವಾ ಇತರ ಚಟುವಟಿಕೆಗಳಲ್ಲಿ ಅವರು ಗೊಂದಲಕ್ಕೆ ಒಳಗಾಗಿರಬಹುದು, ದುಡುಕಿ ನಿರ್ಣಯಕ್ಕೆ ಸಹ ಬಂದು ಬಿಟ್ಟಿರಬಹುದು. ಅದು ಸರಿಯೋ…ತಪ್ಪೋ… ಎಂಬುದನ್ನು ಪಕ್ಕಕ್ಕಿಟ್ಟು ಎದುರಾಗುವ ಸಮಸ್ಯೆಯನ್ನು ಹೇಗೆ ಸಮಾಧಾನ ಚಿತ್ತರಾಗಿ ಬಗೆಹರಿಸಬೇಕೆಂದು ಪೋಷಕರಾದ ನೀವು ಆಲೋಚಿಸಬೇಕಾಗುತ್ತದೆ.

ಅಷ್ಟೇ ಹೊರತು ‘ನಿನಗೇನು ಗೊತ್ತಾಗಲ್ಲ, ನಾನ್ ಹೇಳಿದ್ದನ್ನೇ ಮಾಡು ‘ ಅಂತೇಳಿ ಸಿಂಹ, ಜಿಂಕೆಯ ಮೇಲೆ ಎರಗಿ ಬೀಳುವಂತೆ, ಮಕ್ಕಳ ಮೇಲೆ ಎರಗಿ ಬೀಳಬೇಡಿ. ನಿಮ್ಮ ತಂದೆ-ತಾಯಿಗಳಿಗಿಂತ ನಿಮಗೆ ತುಂಬಾ ವಿಷಯಗಳು ಗೊತ್ತಿತ್ತು. ಅವರ ಕಾಲಕ್ಕೆ ನೀವು ಆಧುನಿಕರು. ಈಗ ನಿಮ್ಮ ಕಾಲಕ್ಕೆ ನಿಮ್ಮ ಮಕ್ಕಳು ನಿಮಗಿಂತ ತುಂಬಾ ವಿಷಯಗಳನ್ನು ತಿಳಿದುಕೊಂಡಿದ್ದಾರೆ. ನಿಮಗಿಂತ ಹೆಚ್ಚು ಆಧುನಿಕರಾಗಿದ್ದಾರೆ. ಅವರನ್ನು ನೀವು ಅಪಾರವಾಗಿ ಪ್ರೀತಿಸುತ್ತೀರಿ, ಅಂದಮೇಲೆ ಅವರ ಅಭಿಪ್ರಾಯಕ್ಕೊಂದು ಗೌರವ ಮತ್ತು ಮನ್ನಣೆ ನೀಡಿ. ‘ನಾವುಗಳೇ ಸರಿ, ನೀವುಗಳು ತಪ್ಪು’ ಎಂಬ ಧೋರಣೆಯನ್ನು ಮೊದಲು ಬಿಡಿ. ‘ನಾವು ಸರಿ ,ನೀವು ಸರಿ. ಇಬ್ಬರೂ ಸೇರಿ ಒಂದು ಸಮಾಧಾನಕರವಾದ ಉತ್ತರ ಹುಡುಕೋಣ’ ಅಂತ ಅವರೊಟ್ಟಿಗೆ ಹೆಜ್ಜೆ ಹಾಕಿ.

ಅವರೀಗ ಪ್ರಾಯಕ್ಕೆ ಬಂದವರು, ಹದಿಹರೆಯದ ಆಕಾಶದಲ್ಲಿ ಹಾರಾಡಲು ಸನ್ನದ್ಧರಾಗಿದ್ದಾರೆ. ಸಮಸ್ಯೆಯ ಮೂಲ ಇದೆ, ಆ ರೆಕ್ಕೆಗಳು ಬಲಿತು ನಿಮ್ಮ ಮಾತುಗಳನ್ನು ಅವರು ನಿರ್ಲಕ್ಷಿಸುತ್ತಿದ್ದಾರೆ ಎಂಬುದು ನಿಮ್ಮ ಘನ ಘೋರವಾದ ಆರೋಪ. ‘ಅರೇ! ರೆಕ್ಕೆ ಬಲಿತಿದೆ, ಬದುಕು ಸುಂದರವಾಗಿ ಅರಳುತ್ತಿದೆ. ಭಾವನೆಗಳು ಬೇರೆ ಸುಮ್ಮನೆ ಒಂದೆಡೆ ಕೂರದಂತೆ ಮಾಡಿದೆ. ನಾವೀಗ ಹಾರಬೇಕು, ಸ್ವಚ್ಛಂದವಾಗಿ ಹಾರಾಡುತ ಬದುಕನ್ನು ಕಾಣಬೇಕು’ ಅಂತ ಅವರುಗಳು ತಮ್ಮ ಪ್ರಾಯದ ಅಭಿಪ್ರಾಯವನ್ನು ಹೇಳುತ್ತಿದ್ದಾರೆ. ಹಿಂದೆ ಪ್ರಾಯದಲ್ಲಿ ಇದೇ ಅಭಿಪ್ರಾಯ ನಿಮ್ಮದೂ ಸಹ ಆಗಿತ್ತು. ಇರಲಿ ಆ ಪ್ರಾಯ ಮತ್ತೆ ನಿಮ್ಮ ಜೀವನದಲ್ಲಿ ಮರಳಿ ಬರದು. ಈಗ ಬಂದಿರುವ ಮಕ್ಕಳ ಬದುಕಿನಲ್ಲಿನ ಈ ಕಾಲವನ್ನು ಅನಗತ್ಯವಾದ ಭಯ, ಒತ್ತಡ, ಆತಂಕಗಳ ಮೂಲಕ ಅವರದನ್ನು ಎದುರಿಸಲಾರರೆಂಬಂತೆ ನೀವು ಅವರನ್ನು ನೋಡುವ ಮತ್ತದನ್ನವರು ಮುಕ್ತವಾಗಿ ಎದುರಿಸಲು ಬಿಡದಿರುವ ನಿಮ್ಮ ಧೋರಣೆ ಮೊದಲು ಬದಲಾಯಿಸಿಕೊಳ್ಳಿ.ಕಾಲದ ಜೊತೆಯಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ನಿಮ್ಮಲ್ಲೂ ಬದಲಾವಣೆಗಳಾಗಿವೆ, ನಿಮ್ಮ ಮಕ್ಕಳು ಸಹ ಬದಲಾವಣೆಯನ್ನು ಕಾಣುತ್ತಿದ್ದಾರೆ.

ಮಕ್ಕಳ ವಿಷಯದಲ್ಲಿ ಮುಕ್ತರಾಗಿರಿ! ಅವರು ನಿಮ್ಮ ಮಕ್ಕಳು, ‘ಅವರು ಹೇಗೆ?’ ಅಂತ ನಿಮಗೆ ಚೆನ್ನಾಗಿ ಗೊತ್ತಿರಬೇಕು, ಅಲ್ಲವೇ? ನಿಮ್ಮ ಮಕ್ಕಳನ್ನು ಜಗತ್ತು ವಿಶ್ವಾಸಿಸಬೇಕಾದ ಅಗತ್ಯವೇನಿಲ್ಲ. ಅವರನ್ನು ವಿಶ್ವಾಸಿಸಬೇಕಾದದ್ದು ನೀವುಗಳು ಮಾತ್ರ, ನೀವುಗಳು ಅವರನ್ನು ವಿಶ್ವಾಸಿಸಿದರೆ ಅದವರಿಗೆ ಸಾವಿರ ಆನೆಗಳ ಬಲವನ್ನು ಕೊಡುತ್ತದೆ. ‘ಏನಾದರೂ ಮಾಡು ಆದರೆ ಅದರಲ್ಲೊಂದು ನೀತಿ ಇರಲಿ, ಏನಾದರೂ ಕಲಿ ಆದರೆ ಕಲಿಕೆಯಲ್ಲಿ ಆಸಕ್ತಿ ಇರಲಿ, ಕೌಶಲ್ಯತೆ ವೃದ್ಧಿಯಾಗಲಿ. ಜೀವನದಲ್ಲಿ ನೀತಿ ತಪ್ಪಬೇಡ, ದಾರಿ ತಪ್ಪಬೇಡ, ಮಾಡುವ ಯಾವುದೇ ಕೆಲಸದ ಬಗ್ಗೆ ಅಭಿಮಾನ ಬಿಟ್ಟುಕೊಡಬೇಡ, ಅಸಡ್ಡೆ ತೋರಬೇಡ, ಯಾವುದೇ ಕೆಲಸವನ್ನು ಪೋಸ್ಟ್ ಫೋನ್ ಮಾಡಬೇಡ’ ಇಷ್ಟನ್ನಷ್ಟೇ ಅವರಿಗೆ ಹೇಳಿ ‘ನಿನ್ನ ಭವಿಷ್ಯ ನಿನ್ನ ಕೈಯಲ್ಲಿದೆ. ಸರಿಯಾದ ದಾರಿಯನ್ನೇ ನೀನು ಆಯ್ಕೆ ಮಾಡಿಕೊಳ್ಳುವೆ ಅನ್ನುವ ವಿಶ್ವಾಸ ನಮ್ಮದು. ನಿನ್ನ ದಾರಿ ಸರಿ ಇದ್ದರೆ ನಮಗೂ ನೆಮ್ಮದಿ, ನಿನಗೂ ಸಮೃದ್ಧಿ.
ನೀನು ದಾರಿ ತಪ್ಪಿದರೆ ನಿನ್ನೊಂದಿಗೆ ನಮ್ಮ ಜೀವನ ಕೂಡ ಪಾತಾಳ ಮುಖಿ. ನಿನ್ನ ಭವಿಷ್ಯದಲ್ಲಿ ನಮ್ಮೆಲ್ಲರ ಬದುಕು ಕೂಡ ಅಡಗಿದೆ ಎಂಬುದನ್ನು ಯಾವ ಕಾಲಕ್ಕೂ ಮರೆಯಬೇಡ’ ಅಂತ ಒಂದು ಎಚ್ಚರಿಕೆಯ ಮಾತನ್ನು ಅದರೊಂದಿಗೆ ರವಾನಿಸಿ.

‘ಏನೇ ಆಗಲಿ, ಅಂತಹ ಪರಿಸ್ಥಿತಿ ಬರಲಿ, ನಿನ್ನೊಂದಿಗೆ ನಾವಿದ್ದೇವೆ. ಏಕೆಂದರೆ ನಾವು ನಿನ್ನ ತಂದೆ-ತಾಯಿ. ನಿನ್ನ ಸುಂದರ ಭವಿಷ್ಯಕ್ಕಾಗಿ ನಮ್ಮೆಲ್ಲಾ ಆಸ್ತಿ ಆಸ್ತಿ ಕೊನೆಗೆ ನಮ್ಮ ಜೀವಗಳನ್ನು ಮುಡಿಪಿಟ್ಟಿರುವ ಜೀವಗಳು’ ಅಂತ ಹೇಳಿ ಭಾವನಾತ್ಮಕವಾಗಿಯೂ ಅವರನ್ನು ಸೆರೆಹಿಡಿದು, ‘ಹೋಗು ಜಗತ್ತು ವಿಶಾಲವಾಗಿದೆ ನಿನಗೆ ಇಷ್ಟವಾದದನ್ನು ಆಯ್ಕೆ ಮಾಡಿಕೋ’ಅಂತ ಹೇಳಿ ಬೆನ್ನು ತಟ್ಟಿದರೆ ನಿಮ್ಮ ಬದುಕು ಸುಂದರ, ಅವರ ನಾಳೆಯ ಜೀವನವು ಮಧುರ.

ಇಷ್ಟೊಂದು ಧನಾತ್ಮಕವಾದ ಹಾಗೂ ವಿಸ್ತಾರವಾದ ಮತ್ತೊಂದು ಪುಸ್ತಕ ಇತ್ತೀಚಿನ ದಿನಗಳಲ್ಲಿ ಯಾವ ಭಾಷೆಯಲ್ಲಿಯೂ ಬಂದಿಲ್ಲ. ಪೋಷಕರ ತಪ್ಪುಗಳು ಮತ್ತು ಆತಂಕಗಳನ್ನು, ಮಕ್ಕಳ ಯೌವ್ವನ ಮತ್ತು ಅವರ ಭವಿಷ್ಯದ ಬಗ್ಗೆನ 248 ಪುಟಗಳಲ್ಲಿ, ಪ್ರತಿ ಪುಟ್ಟದಲ್ಲೂ ಒಂದೊಂದು ಛಾಯಾಚಿತ್ರದ ಮೂಲಕ ವಿಷಯವನ್ನು ಪ್ರಸ್ತುತ ಪಡಿಸಿರುವ ಲೇಖಕರ ಪ್ರಯತ್ನ ಅಭಿನಂದನಾರ್ಹ. ಇದರಲ್ಲಿ ಇದುವರೆಗೆ ನಾವು ಕೇಳಿರದ, ಕಂಡೀರದ ಅನೇಕ ಸಂಗತಿಗಳ ಕೂಡ (ಉದಾಹರಣೆಗೆ; ಪುರುಷರಲ್ಲಿನ ಮುಟ್ಟು) ಇದರಲ್ಲಿ ನಮಗೆ ಓದಿ ತಿಳಿಯುವುದಕ್ಕೆ ಸಿಗುತ್ತದೆ. ಲೇಖಕ ರವೀಂದ್ರ ಕೊಟಕಿ ಅವರ ಈ ಪ್ರಯತ್ನ ಕನ್ನಡದ ಓದುಗರಿಗೆ ಒಂದು ವಿಶೇಷವಾದ ಹಾಗೂ ಕಡ್ಡಾಯವಾಗಿ ತಿಳಿಯಲೇಬೇಕಾದ ಹಲವು ಸಂಗತಿಗಳನ್ನು ಪರಿಚಯಿಸುತ್ತದೆ. ಪ್ರತಿಯೊಬ್ಬರೂ ಈ ಪುಸ್ತಕವನ್ನು ಓದಲೇಬೇಕು. ಈ ಪುಸ್ತಕ ಪ್ರತಿಯೊಬ್ಬರ ಜೀವನವನ್ನು ಪ್ರತಿನಿಧಿಸುತ್ತದೆ. ಇದೊಂದು ಅಪರೂಪದ ಅವಶ್ಯವಾಗಿ ಓದಲೇಬೇಕಾದ ಪುಸ್ತಕವಾಗಿದೆ.

ಪುಸ್ತಕದ ಹೆಸರು: ಕಡ್ಡಾಯವಾಗಿ ಪೋಷಕರಿಗೆ ಮಾತ್ರ!
ಲೇಖಕರು: ರವೀಂದ್ರ ಕೊಟಕಿ
ಪ್ರಕಾಶಕರು: ಚಿನ್ಮಯ ಪ್ರಕಾಶನ
ಪುಸ್ತಕದ ಬೆಲೆ: 270 (ಅಂಚೆ ವೆಚ್ಚ ಪ್ರತ್ಯೇಕ)

ಎಲ್ಲಿ ದೊರೆಯುತ್ತದೆ: ಶ್ರೀನಿಧಿ ಪಬ್ಲಿಕೇಶನ್, ಬೆಂಗಳೂರು.
ಹೆಚ್ಚಿನ ಮಾಹಿತಿ ಹಾಗೂ ಪುಸ್ತಕಕ್ಕಾಗಿ ಸಂಪರ್ಕಿಸಬೇಕಾದ WhatsApp number: 9972778646

ವರದಿ: ದಯಾನಂದಸ್ವಾಮಿ. ಡಿ.ಆರ್.

LEAVE A REPLY

Please enter your comment!
Please enter your name here