ತುಮಕೂರು: ಮೈಕ್ರೋ ಫೈನಾನ್ಸ್ ನಲ್ಲಿ ಸುಲಭವಾಗಿ ಸಾಲ ಸಿಗುತ್ತೇ ಅಂತಾ ಕಂಡಕಂಡವರಿಗೆಲ್ಲಾ ನಿಮ್ಮ ಆಧಾರ್ ಕಾರ್ಡ್ ಪಾನ್ ಕಾರ್ಡ್ ಕೊಡುವ ಮುನ್ನಾ ಮಹಿಳೆಯರು ಒಮ್ಮೆ ಈ ಸುದ್ದಿಯನ್ನ ಓದಿ…
ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಕೊಡುಸ್ತೀವಿ, ಕೇಂದ್ರ ಸರ್ಕಾರದಿಂದ ಪ್ರಧಾನಿ ನರೇಂದ್ರ ಮೋದಿ ನಿಮಗೆ ಸಬ್ಸಿಡಿ ಹಾಕುತ್ತಾರೆ ಎಂದು ತುಮಕೂರು ಜಿಲ್ಲೆಯ, ಗುಬ್ಬಿ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಸುಮಾರು 18 ಮಹಿಳೆಯರ ಹೆಸರಲ್ಲಿ ಮೂವರು ಖತರ್ನಾಕ್ ವಂಚಕರು ಬರೊಬ್ಬರಿ 28 ಲಕ್ಷ ಹಣವನ್ನ ದೋಚಿದ್ದಾರೆ.
ಹೌದು ಈ 18 ಜನ ಮಹಿಳೆಯರ ಮೇಲೆ ಬರೊಬ್ಬರಿ 28 ಲಕ್ಷ ಸಾಲದ ಹೊರೆ ಇದೆ, ಒಂದೊತ್ತಿನ ಊಟಕ್ಕೂ ಕೂಲಿಯ ಹಣವನ್ನೇ ನಂಬಿಕೊಂಡಿರುವ ಮಹಿಳೆಯರ ಮೇಲೆ ಮೈಕ್ರೋ ಫೈನಾನ್ಸ್ ನ ಮೂರು ಜನ ಖತರ್ನಾಕ್ ಸಿಬ್ಬಂದಿಗಳು 28 ಲಕ್ಷ ಸಾಲವನ್ನ ಹೊರಿಸಿ ಈಗ ಊರು ಬಿಟ್ಟಿದ್ದು ಬಡ ಮಹಿಳೆಯರು ಲಕ್ಷಾಂತರ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ.
ಬೆಲ್ ಸ್ಟಾರ್ ಮೈಕ್ರೋ ಫೈನಾನ್ಸ್ ಎಂಬ ಕಂಪನಿಯಿಂದ ಸುಮಾರು 18 ಕ್ಕೂ ಹೆಚ್ಚು ಮಹಿಳೆಯರ ಹೆಸರಿನಲ್ಲಿ ತಲಾ ಎರಡು ಲಕ್ಷ, ಒಂದು ಲಕ್ಷ, ಒಂದೂವರೆ ಲಕ್ಷ, ಮೂರು ಲಕ್ಷದ ವರೆಗೆ ಸಾಲ ಮಂಜೂರಾಗಿದೆ. ಅಲ್ಲದೆ ದಾಖಲಾತಿಗಳು ಕೂಡ ಇವೆ ಆದ್ರೆ ಇವರಿಗೆ ಮಾತ್ರ ಫೈನಾನ್ಸ್ ಕಂಪನಿಯಿಂದ ನಯಾಪೈಸೆ ಹಣ ತಲುಪಿಲ್ಲ ಆದ್ರೂ ಇವರು ಸಾಲಗಾರರು..
ರಾಜ್ಯಾದ್ಯಂತ ನಾಯಿಕೊಡೆಯಂತೆ ಹರಡಿಕೊಂಡಿರುವ ಮೈಕ್ರೋ ಫೈನಾನ್ಸ್ ಕಂಪನಿಗಳಲ್ಲಿ ಈ ಬೆಲ್ ಸ್ಟಾರ್ ಮೈಕ್ರೋ ಫೈನಾನ್ಸ್ ಕಂಪನಿಯೂ ಕೂಡ ಒಂದು, ಈ ಕಂಪನಿಯು ಕೂಡ ಹಳ್ಳಿ ಹಳ್ಳಿಗೆ ತೆರಳಿ ದಲಿತ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಅವರ ಆಧಾರ್ ಕಾರ್ಡ್ ಪಡೆದು ಲಕ್ಷ ಲಕ್ಷ ಹಣವನ್ನು ಸಾಲದ ರೂಪದಲ್ಲಿ ಕೊಟ್ಟಿದೆ. ಆ ಹಣವನ್ನು ವಾರಕ್ಕೆ ಇಂತಿಷ್ಟು ಕಂತಿನಂತೆ ಬಡ್ಡಿ ಸಮೇತ ವಸೂಲಿ ಮಾಡುತ್ತಿದೆ.
ಇದೇ ಬೆಲ್ ಸ್ಟಾರ್ ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಜಯ್, ಜಾಧವ್, ದೀಪಕ್ ಎಂಬ ಮೂವರು ವಂಚಕರು ಮಹಿಳೆಯರ ಬಳಿ ಇಲ್ಲಸಲ್ಲದ ಆಸೆ ಹುಟ್ಟಿಸಿ ನಿಮಗೆ ಒಂದು ಲಕ್ಷ ಲೋನ್ ಮಾಡಿಕೊಡುತ್ತೇವೆ, ಕೇಂದ್ರ ಸರ್ಕಾರದಿಂದ ಪ್ರಧಾನಿ ಮೋದಿ ನಿಮಗೆ ಸಬ್ಸಿಡಿ ನೀಡುತ್ತಾರೆ. ಅಂತ ಹೇಳಿ ನಂಬಿಸಿ ಇವರ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಡಿಟೇಲ್ಸ್ ಸೇರಿದಂತೆ ಹಲವು ದಾಖಲೆಗಳನ್ನು ಪಡೆದು ಒಬ್ಬೊಬ್ಬರ ಹೆಸರಲ್ಲಿ ನಾಲ್ಕರಿಂದ ಐದು ಅಕೌಂಟ್ ಗಳನ್ನ ತೆರೆದಿದ್ದಾರೆ.
ಬಳಿಕ ಒಬ್ಬೋಬ್ಬ ಮಹಿಳೆ ಹೆಸರಿನಲ್ಲಿ 7 -8 ಬಾರಿ 45,000., 55,000. ರೂಗಳನ್ನು ಲೋನ್ ಮಾಡಿಸಿದ್ದಾರೆ. ಬಳಿಕ ಆ ಹಣವನ್ನ ಇವರೇ ಮಹಿಳೆಯರ ಅಕೌಂಟ್ ನಲ್ಲಿ ಡ್ರಾ ಮಾಡಿಸಿಕೊಂಡು ಈ ಹಣವನ್ನ ಮತ್ತೆ ಕಂಪನಿಗೆ ಕಟ್ಟಿದರೆ ಮತ್ತಷ್ಟು ಹೆಚ್ಚಿನದಾಗಿ ನಿಮಗೆ ಸಾಲ ಸಿಗುತ್ತೆ ಎಂದು ನಂಬಿಸಿ ಅಷ್ಟೂ ಹಣವನ್ನ ಈ ಮೂವರು ವಂಚಕರು ಪಡೆದು ಕಂಪನಿಗೂ ರಿಟರ್ನ್ ಮಾಡದೆ, ಮಹಿಳೆಯರಿಗೂ ನೀಡದೇ ಬರೊಬ್ಬರಿ 28 ಲಕ್ಷಕ್ಕೂ ಅಧಿಕ ಹಣವನ್ನ ಲಪಟಾಯಿಸಿ ತಲೆ ಮರೆಸಿಕೊಂಡಿದ್ದಾರೆ. ಇದೀಗ ಬೆಲ್ ಸ್ಟಾರ್ ಮೈಕ್ರೋ ಫೈನಾನ್ಸ್ ಕಂಪನಿ ಮೂವರು ಆರೋಪಿಗಳನ್ನ ಕೆಲಸದಿಂದ ಕಿಕ್ ಔಟ್ ಮಾಡಿ ಇವರ ಮೇಲೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಬೆಲ್ ಸ್ಟಾರ್ ಕಂಪನಿ ನೀಡಿದ ದೂರಿನ ಮೆರೆಗೆ ಗುಬ್ಬಿ ಪೊಲೀಸರು ಮಹಿಳೆಯರನ್ನ ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದಾರೆ. ಮೊದಲೆ ಹಳ್ಳಿ ಹೆಣ್ಣು ಮಕ್ಕಳು ಪೋಲೀಸ್ ಠಾಣೆಯ ಮೆಟ್ಟಿಲೇರಿದ್ದರಿಂದ ಮುಂದೇನಾಗುತ್ತೊ ಅನ್ನೊ ಆತಂಕ, ಭಯ ಮಹಿಳೆಯರನ್ನ ಕಾಡುತ್ತಿದೆ. ಈ ಬಗ್ಗೆ ಮಾತನಾಡಿರುವ ಗೌರಮ್ಮ ಎಂಬ ಮಹಿಳೆ ಸರ್ ನಮ್ಮದೇನು ತಪ್ಪಿಲ್ಲ ಸಾಲ ಸಿಕ್ರೆ ಮನೆ ಭಂಗ, ಬಡತನ, ಮಕ್ಕಳ ಓದಿನ ಖರ್ಚು ಎಲ್ಲಾ ತೀರುತ್ತೆ ಎಂಬ ಆಸೆಯಿಂದ ದಾಖಲೆಗಳನ್ನ ಕೊಟ್ಟೆವು, ಹೀಗೆ ಮೋಸ ಮಾಡುತ್ತಾರೆ ಅಂತಾ ಗೊತ್ತಿರಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ತುಮಕೂರು ಪೊಲೀಸ್ ಅಧಿಕ್ಷಕರಾದ ವೆಂಕಟ್ ಕೆವಿ ಅವರು ಬೆಲ್ ಸ್ಟಾರ್ ಕಂಪನಿ ಮ್ಯಾನೆಜ್ ಮೆಂಟ್ ಹಣ ದುರ್ಭಳಕೆ ಆಗಿರುವ ಬಗ್ಗೆ ಸಿಬ್ಬಂದಿಗಳ ವಿರುದ್ದ ಗುಬ್ಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಎಷ್ಟು ಲೋನ್ ನೀಡಿದ್ದಾರೆ, ಯಾರಿಗೆಲ್ಲಾ ನೀಡಲಾಗಿದೆ ಎಂಬ ಬಗ್ಗೆ ಬ್ಯಾಂಕ್ ಖಾತೆಗಳ ಮಾಹಿತಿ ಪರಿಶೀಲನೆ ನಡೆಸಲಾಗುತ್ತಿದೆ. ಇದರಲ್ಲಿ ಮಹಿಳೆಯರು ಭಾಗಿಯಾಗಿದ್ದಾರೋ ಇಲ್ಲವೋ ಎಂಬ ಬಗ್ಗೆ ವಿಚಾರಣೆ ಮಾಡಿ ತಪ್ಪಿತಸ್ಥರ ವಿರುದ್ದ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕ್ ಗಳು ಭದ್ರತೆ, ಐಟಿ ರಿಟರ್ನ್ಸ್ ಇನ್ನಿತರೆ ನೆಪವೊಡ್ಡಿ ಬಡವರಿಗೆ ಸಾಲ ನೀಡಲು ನಿರಾಕರಿಸುತ್ತಿವೆ. ಇದರಿಂದ ಸುಲಭವಾಗಿ ಸಾಲ ಸಿಗುತ್ತಿದೆ ಎಂಬ ಕಾರಣಕ್ಕೆ ಬಡ ಮಹಿಳೆಯರು ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಬಡತನವನ್ನೆ ಬಂಡವಾಳ ಮಾಡಿಕೊಂಡಿರುವ ಈ ಮೈಕ್ರೋ ಫೈನಾನ್ಸ್ ಗಳು ಬಡ ಮಹಿಳೆಯರಿಗೆ ಅಧಿಕ ಬಡ್ಡಿ ದರದಲ್ಲಿ ಸಾಲ ನೀಡಿ ವರ್ಷ ಪೂರ್ತಿ ಅವರ ಜೀವ ಹಿಂಡುತ್ತಿವೆ.
ಸಾಲ ಮರುಪಾವತಿ ಮಾಡದೇ ಇದ್ದರೆ ಮನೆ ಬಾಗಿನಲ್ಲಿ ಕುಳಿತು ಊರಿನವರ ಮುಂದೆ ಅವರ ಮರ್ಯಾದೆ ಹರಾಜು ಹಾಕಿ ಮಾನಹಾನಿ ಮಾಡುತ್ತಿದ್ದಾರೆ.ಜೊತೆಗೆ ಸಾಲಕಟ್ಟದೆ ಇದ್ರೆ ಸಾಯಿರಿ, ನಿಮ್ಮ ಇನ್ಶ್ಯೂರೆನ್ಸ್ ಆದ್ರೂ ಕ್ಲೀಯರ್ ಆಗುತ್ತೆ ಎಂದು ಆತ್ಮಹತ್ಯೆಗೂ ಪ್ರಚೋದನೆ ನೀಡುತ್ತಿವೆ. ಜಿಲ್ಲೆಯಲ್ಲಿ ಈಗಾಗಲೇ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳಾ ರಕ್ಷಣಾ ಇಲಾಖೆ ಈ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ. ಜೊತೆಗೆ ಇಂತಹ ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲ ತೆಗೆದುಕೊಳ್ಳುವ ಮುನ್ನಾ ಮಹಿಳೆಯರೂ ಎಚ್ಚರ ವಹಿಸಬೇಕಾಗಿದೆ.
ವರದಿ ಮಂಜುನಾಥ್ ಜಿ ಎನ್.